ನಾಮಪತ್ರಕ್ಕೆ ಕಿರಣ್‌ ಕುಮಾರ್‌ ಪೂಜೆ: ಅಧಿಕೃತ ಪ್ರಚಾರ ಆರಂಭ

| Published : Mar 24 2024, 01:37 AM IST

ಸಾರಾಂಶ

ಬಿಜೆಪಿ ಮುಖಂಡ ಕಿರಣ್‌ ಕುಮಾರ್‌ ಶನಿವಾರ ಹಾಸನದ ವಿವಿಧ ದೇವಾಲಯಗಳಲ್ಲಿ ತಮ್ಮ ನಾಮಪತ್ರವನ್ನಿಟ್ಟು ಪೂಜೆ ಸಲ್ಲಿಸಿರುವುದು ಜೆಡಿಎಸ್‌ ನಾಯಕರಿಗೆ ಆಘಾತ ಉಂಟು ಮಾಡಿದೆ.

ಜೆಡಿಎಸ್‌ ನಾಯಕರಿಗೆ ಆಘಾತ । ಬಿಜೆಪಿ-ಜೆಡಿಎಸ್‌ ಮೈತ್ರಿ ಏನಾಯ್ತು? । ಬಿಜೆಪಿ-ಜೆಡಿಎಸ್‌ ಮೈತ್ರಿ ಬಿರುಕು?ಕನ್ನಡಪ್ರಭ ವಾರ್ತೆ ಹಾಸನ

ಈ ಬಾರಿಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಆದರೆ ಬಿಜೆಪಿ ಪ್ರಜ್ವಲ್‌ ರೇವಣ್ಣ ಅವರೇ ಮೈತ್ರಿ ಅಭ್ಯರ್ಥಿ ಎಂದು ಈವರೆಗೂ ಎಲ್ಲಿಯೂ ಹೇಳಿಲ್ಲ. ಆದರೆ, ದೇವೇಗೌಡ, ಕುಮಾರಸ್ವಾಮಿ ಹಾಗೂ ರೇವಣ್ಣ ಮಾತ್ರ ಪ್ರಜ್ವಲ್‌ ಅವರೇ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡಿಕೊಂಡು ಅಬ್ಬರದ ಪ್ರಚಾರ ನಡೆಸುತ್ತಿರುವಾಗಲೇ ಬಿಜೆಪಿ ಮುಖಂಡ ಕಿರಣ್‌ ಕುಮಾರ್‌ ಶನಿವಾರ ನಗರದ ವಿವಿಧ ದೇವಾಲಯಗಳಲ್ಲಿ ತಮ್ಮ ನಾಮಪತ್ರವನ್ನಿಟ್ಟು ಪೂಜೆ ಸಲ್ಲಿಸಿರುವುದು ಜೆಡಿಎಸ್‌ ನಾಯಕರಿಗೆ ಆಘಾತ ಉಂಟುಮಾಡಿದೆ.

ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡ ನಂತರದಲ್ಲಿ ಕಳೆದ ಎರಡು ತಿಂಗಳಿನಿಂದಲೇ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್‌ ರೇವಣ್ಣ ಅವರೇ ಅಭ್ಯರ್ಥಿ ಎಂದು ಸ್ವತ: ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಒತ್ತಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಪ್ರಜ್ವಲ್‌ ಸಹ ಈಗಾಗಲೇ ಜಿಲ್ಲೆಯಾದ್ಯಂತ ಒಂದು ಸುತ್ತು ಪ್ರಚಾರ ಕೂಡ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ ಕೆಲ ಬಿಜೆಪಿ ಮುಖಂಡರ ಮನೆಗೂ ಭೇಟಿ ನೀಡಿ ನೆರವು ನೀಡುವಂತೆ ಕೋರಿದ್ದರು. ಆದರೆ, ಅದೇ ದಿನ ಪ್ರೀತಂ ಗೌಡರ ಆಪ್ತ ಹಾಗೂ ನಗರ ಬಿಜೆಪಿ ಮಂಡಲದ ಅಧ್ಯಕ್ಷ ವೇಣುಗೋಪಾಲ್‌ ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ಪ್ರಜ್ವಲ್‌ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಎಂದು ತಮಗೆ ಈವರೆಗೂ ರಾಜ್ಯ ಅಥವಾ ರಾಷ್ಟ್ರ ಮುಖಂಡರಿಂದ ಯಾವುದೇ ಸೂಚನೆ ಬಂದಿಲ್ಲ ಹೇಳಿದ್ದರು.

ಆದರೆ ಶನಿವಾರ ಬಿಜೆಪಿ ಮುಖಂಡ ಎಚ್.ಪಿ.ಕಿರಣ್ ನಗರದ ಹಾಸನಾಂಬ ದೇವಸ್ಥಾನದ ಆವರಣದಲ್ಲಿರುವ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರಳಿ ನಾಮಪತ್ರವನ್ನು ಇಟ್ಟು ಪೂಜೆ ಮಾಡಿಸಿ ಬಹಿರಂಗ ಪ್ರಚಾರ ಆರಂಭಿಸಿದ್ದಾರೆ. ಚನ್ನರಾಯಪಟ್ಟಣದಲ್ಲೂ 40 ಅಡಿ ಆಂಜನೇಯಸ್ವಾಮಿ ದೇವಾಲಯದಲ್ಲೂ ಪೂಜೆ ಮಾಡಿಸಿ ಪ್ರಚಾರ ಮಾಡಿದ್ದಾರೆ.

ನಂತರ ಮಾಧ್ಯಮದೊಂದಿಗೆ ಮಾತನಾಡಿ, ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಆಕಾಂಕ್ಷಿಯಾಗಿದ್ದು, ಇಂದು ಒಳ್ಳೆಯ ದಿನವೆಂದು ನಾಮಪತ್ರ ತರಲಾಗಿದೆ. ದೇವರ ಸನ್ನಿದಿಗೆ ಹೋಗಿ ಆಶೀರ್ವಾದ ಪಡೆಯಲಾಗುವುದು. ಬಿಜೆಪಿ ಪರ ಪ್ರಚಾರ ಈಗಾಗಲೇ ಆರಂಭಿಸಿದ್ದೇವೆ. ಈಗಾಗಲೇ ಹೈಕಮಾಂಡ್ ಬಿಜೆಪಿ ಮತ್ತು ಮೋದಿ ಪರ ಪ್ರಚಾರ ಮಾಡಿ ಎಂದು ಸೂಚನೆ ಕೊಟ್ಟಿರುವಂತೆ ಪ್ರಚಾರ ಮಾಡುತ್ತೇವೆಯೇ ಹೊರತು ಬಂಡಾಯವಿಲ್ಲ. ಕೇಂದ್ರದಲ್ಲಿ ಮೈತ್ರಿ ಆಗಿದ್ದರೂ ಹಾಸನದಲ್ಲಿ ಇನ್ನು ಫೈನಲ್ ಆಗಿಲ್ಲ. ನಾನೊಬ್ಬ ಆಕಾಂಕ್ಷಿ, ಶುಕ್ರವಾರ ಒಳ್ಳೆ ದಿನ ಎಂದು ಹೇಳಿದ್ದರಿಂದ ನಾಮಪತ್ರ ತರಲಾಗಿದೆ. ನಾಮಪತ್ರ ಸಲ್ಲಿಸಲು ಏ.೪ ಕೊನೆಯ ದಿನಾಂಕ ಆಗಿದ್ದು, ಕಡಿಮೆ ಸಮಯ ಇರುವುದರಿಂದ ಕೊನೆ ಸಮಯದಲ್ಲಿ ಅವಕಾಶ ಸಿಕ್ಕರೆ ತಯಾರು ಮಾಡುವುದಕ್ಕೆ ಆಗುವುದಿಲ್ಲ. ಮೊದಲೆ ತಯಾರು ಮಾಡಿಕೊಂಡಿದ್ದು, ಪಾರ್ಟಿ ಯಾರಿಗೆ ಸೂಚನೆ ಕೊಡುತ್ತದೆ ಅವರಿಗೆ ಪ್ರಚಾರ ಮಾಡುತ್ತೇವೆ’ ಎಂದು ಹೇಳಿದರು.

‘ಬಿಜೆಪಿ ವರಿಷ್ಠರು ನಮ್ಮ ಪರವಾಗಿ ಸೂಚನೆ ಕೊಟ್ಟರೆ ಜೆಡಿಎಸ್‌ ಪ್ರಚಾರ ಮಾಡಲಿ. ಅವರ ಪರವಾಗಿ ಪಾರ್ಟಿ ಆದೇಶಿಸಿದರೆ ನಾವು ಪ್ರಚಾರ ಮಾಡುತ್ತೇವೆ. ಮಾಜಿ ಶಾಸಕ ಪ್ರೀತಂ ಗೌಡ ನನ್ನ ರಾಜಕೀಯದ ಗುರು. ಆದರೇ ಪ್ರಧಾನ ಕಾರ್ಯದರ್ಶಿ ಆಗಿರುವುದರಿಂದ ಈ ವಿಚಾರದಲ್ಲಿ ಏನು ಮಾತನಾಡಿಲ್ಲ. ಕಾರ್ಯಕರ್ತರ ಸೂಚನೆ ಮೇರೆಗೆ ನಾಮಪತ್ರ ತಯಾರು ಮಾಡಿಕೊಂಡು ಮೋದಿ ಅವರ ಪರವಾಗಿ ಮತ ಕೇಳೋಣ ಎಂದಿದ್ದಾರೆ. ನನಗೆ ಬಿಜೆಪಿಯಿಂದ ಟಿಕೆಟ್ ಕೊಡಬಹುದು ಎನ್ನುವ ವಿಶ್ವಾಸವಿದೆ. ಪಕ್ಷ ಯಾರಿಗೆ ಒಲವು ತೋರುತ್ತದೆ ನೋಡಬೇಕು’ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ನಾರಾಯಣಗೌಡ, ದೀಕ್ಷಿತ್, ಪ್ರೀತಿ ವರ್ಧನ್ ಇದ್ದರು.

ಜೆಡಿಎಸ್‌ ನಾಯಕರಿಗೆ ಆಘಾತ:

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ನಂತರದಲ್ಲಿ ಪ್ರಜ್ವಲ್‌ ರೇವಣ್ಣ ಅವರೇ ಅಭ್ಯರ್ಥಿ ಎಂದು ಹೇಳುತ್ತಿದ್ದ ಜೆಡಿಎಸ್‌ ನಾಯಕರಿಗೆ ಈ ಬೆಳವಣಿಗೆಗಳಿಂದ ಆಘಾತವಾಗಿದೆ. ಕೆಲ ದಿನಗಳ ಹಿಂದಷ್ಟೇ ಯಡಿಯೂರಪ್ಪ ಅವರನ್ನೂ ಕೂಡ ಪ್ರಜ್ವಲ್‌ ಭೇಟಿ ಮಾಡಿ ಬಂದಿದ್ದರು. ಆದರೆ, ಈಗಿನ ಬೆಳವಣಿಗೆಗಳನ್ನು ನೋಡಿದಾಗ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿಯಲ್ಲೇನಾದರೂ ಬಿರುಕು ಉಂಟಾಗಿದೆಯೇ ಎಂದು ಅನುಮಾನ ಮೂಡಿದೆ.

ಹಾಸನದಲ್ಲಿ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದಲ್ಲಿ ನಾಮಪತ್ರವನ್ನಿಟ್ಟು ಪೂಜೆ ಮಾಡಿಸಿದ ಕಿರಣ್‌ ಕುಮಾರ್.