ಮನುಷ್ಯನ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಹೃದಯವು ಒಂದು. ಇದು ಆರೋಗ್ಯವಾಗಿದ್ದರೆ ಮಾತ್ರ ಇಡೀ ದೇಹವು ಸದೃಢವಾಗಿರುತ್ತದೆ.ಈ ನಿಟ್ಟಿನಲ್ಲಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತಜ್ಞ ವೈದ್ಯಕೀಯ ಸೇವೆ- ಸೌಲಭ್ಯಗಳು ರೋಗಿಗಳಿಗೆ ತುರ್ತು ಅವಶ್ಯಕತೆಗಳಲ್ಲಿ ಸಿಗುವಂತಾಗಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬೆಂಗಳೂರು- ಮೈಸೂರಿನಲ್ಲಿರುವ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸಿಗುವ ಚಿಕಿತ್ಸೆಯನ್ನು ಮಂಡ್ಯದಲ್ಲೂ ಆಸ್ಪತ್ರೆ ನಿರ್ಮಿಸಿ ನೀಡುವಂತೆ ರೈತ ಸಂಘದ ಮುಖಂಡ ಕಿರಂಗೂರು ಪಾಪು ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಬಹುತೇಕ ಜನರು ಹೃದಯ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ. ಜಿಲ್ಲೆಯ ರೋಗಿಗಳು ದೂರದ ಬೆಂಗಳೂರು, ಮೈಸೂರಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಮಂಡ್ಯದಲ್ಲೂ ನಿರ್ಮಿಸಿ ವೈದ್ಯಕೀಯ ನೆರವು ಮತ್ತು ಸೇವೆ ಲಭಿಸುವಂತಾಗಲಿ ಎಂದು ಮುಖ್ಯಮಂತ್ರಿಗಳು, ಜಿಲ್ಲೆಯ ಸಂಸದರು, ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮನುಷ್ಯನ ದೇಹದ ಅತ್ಯಂತ ಪ್ರಮುಖ ಅಂಗಗಳಲ್ಲಿ ಹೃದಯವು ಒಂದು. ಇದು ಆರೋಗ್ಯವಾಗಿದ್ದರೆ ಮಾತ್ರ ಇಡೀ ದೇಹವು ಸದೃಢವಾಗಿರುತ್ತದೆ.ಈ ನಿಟ್ಟಿನಲ್ಲಿ ಹೃದಯ ಸಂಬಂಧಿ ಖಾಯಿಲೆಗಳಿಗೆ ತಜ್ಞ ವೈದ್ಯಕೀಯ ಸೇವೆ- ಸೌಲಭ್ಯಗಳು ರೋಗಿಗಳಿಗೆ ತುರ್ತು ಅವಶ್ಯಕತೆಗಳಲ್ಲಿ ಸಿಗುವಂತಾಗಬೇಕು ಎಂದು ಕೋರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಮ್ಮ ಜೀವನಶೈಲಿ ಹಾಗೂ ಆಹಾರ ಕ್ರಮ ಹೃದಯ ಸಂಬಂಧಿ ರೋಗಗಳು ಹೆಚ್ಚಾಗಲು ಕಾರಣವಾಗಿವೆ. ಜಿಲ್ಲೆಯ ಜನರ ಜೀವನ ಕ್ರಮ, ಆಹಾರ ಪದ್ಧತಿಯಿಂದಾಗಿಯೇ ಹೃದಯ ಸಂಬಂಧಿ ಕಾಯಿಲೆಯ ಪ್ರಕರಣಗಳು ಹೆಚ್ಚಾಗಲು ಸಹಜವಾಗಿಯೇ ಕಾರಣವಾಗಿವೆ ಎಂದು ಹೇಳಿದ್ದಾರೆ.

ಕೋವಿಡ್ ನಂತರದ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುರ್ತಾಗಿ ತಜ್ಞ ವೈದ್ಯಕೀಯ ನೆರವು ದೊರಕದೆ ಮಾರ್ಗ ಮಧ್ಯೆ ಅಥವಾ ಸಮಯದ ಅಭಾವದಿಂದ ಸಾವನ್ನಪ್ಪಿರುವ ಪ್ರಕರಣಗಳು ಸಾಕಷ್ಟಿವೆ. ದುಬಾರಿ ಹಣ ಬೇಡುವ ಖಾಸಗಿ ಆಸ್ಪತ್ರೆಗಳ ಆರ್ಭಟ ಒಂದೆಡೆಯಾದರೆ, ಸರ್ಕಾರಿ ಹೃದಯ ಸಂಬಂಧಿ ಆಸ್ಪತ್ರೆಗಳು ಜಿಲ್ಲೆಯಲ್ಲಿ ಆರಂಭಗೊಂಡರೆ ತಾಲೂಕುಗಳ ಗ್ರಾಮೀಣ ಪ್ರದೇಶದ ಜನತೆಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು, ಮೈಸೂರಿನಂತಹ ದೊಡ್ಡ ನಗರಗಳಿಗೆ ದೂರ ಪ್ರಯಾಣ ಮಾಡಿ ಚಿಕಿತ್ಸೆ ಪಡೆಯುವಲ್ಲಿ ಶೇ.90 ಕ್ಕೂ ಹೆಚ್ಚು ಪ್ರಕರಣಗಳು ಸಾವಿನಲ್ಲಿಯೇ ಅಂತ್ಯವಾಗಿರುವುದು ನಮ್ಮ ಕಣ್ಣ ಮುಂದಿವೆ. ಜೀವ ಕಳೆದುಕೊಂಡ ವ್ಯಕ್ತಿಯ ಕುಟುಂಬದವರು ತುರ್ತಾಗಿ ವೈದ್ಯಕೀಯ ಸೌಲಭ್ಯ ಮಂಡ್ಯದಲ್ಲೇ ಇದ್ದಿದ್ದರೆ ಜೀವ ಉಳಿಯುತ್ತಿತ್ತು ಎಂಬ ಕೊರಗಿನೊಂದಿಗೇ ಜೀವನ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಾಲದ ಸುಳಿಗೆ ಸಿಲುಕುವ ರೈತರು, ಜನಸಾಮಾನ್ಯರು ಒಂದಷ್ಟು ಆಸ್ತಿಪಾಸ್ತಿ, ಚಿನ್ನಾಭರಣ ಅಡವಿಟ್ಟು ಖಾಸಗಿ ಆಸ್ಪತ್ರೆಗೆ ಕಟ್ಟುವುದನ್ನು ತಪ್ಪಿಸಲು ಜಿಲ್ಲಾ ಕೇಂದ್ರದಲ್ಲಿ ಜಯದೇವ ಆಸ್ಪತ್ರೆ ರೀತಿಯ 100 ಹಾಸಿಗೆ ಬೆಡ್ ಕಟ್ಟಿದರೆ ಬಡಜನರು ಜೀವ ಉಳಿಸಿಕೊಳ್ಳುತ್ತಾರೆ. ಇಂತಹ ಯೋಜನೆಯನ್ನು ಸರ್ಕಾರದ ಮುಖ್ಯಮಂತ್ರಿಗಳು, ಜಿಲ್ಲೆಯ ಪ್ರತಿನಿಧಿಸುವ ಜನಪ್ರತಿನಿಧಿಗಳು, ಅಧಿಕಾರಿಗಳು ಕೈಜೋಡಿಸಬೇಕು ಎಂದು ಆಗ್ರಹಿಸಿದ್ದಾರೆ.