ಬಲವಂತ ಹಾಗೂ ಅನ್ಯಾಯದ ಭೂ ಸ್ವಾಧೀನ-ಕಾರ್ಪೊರೇಟ್ ಭೂ ಕಬಳಿಕೆ, ಕಾರ್ಮಿಕ ಸಂಹಿತೆಗಳ ಜಾರಿ ವಿರೋಧಿಸಿ ಪರಿಷ್ಕರಿಸಿದ ಕನಿಷ್ಠ ವೇತನದ ಜಾರಿಗಾಗಿ ಒತ್ತಾಯಿಸಿ, ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಪಡಿಸಲು, ವಿದ್ಯುತ್ ತಿದ್ದುಪಡಿ ಕಾಯ್ದೆ 2025, ಬೀಜ ಕಾಯ್ದೆ ಮತ್ತು ಕೃಷಿ ಮಾರುಕಟ್ಟೆ ಕುರಿತ ರಾಷ್ಟ್ರೀಯ ಧೋರಣಾ ಚೌಕಟ್ಟು ನೀತಿ ವಿರೋಧಿಸಿ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದಿಂದ ಪೋಸ್ಟರ್ ಮತ್ತು ಕರಪತ್ರ ಬಿಡುಗಡೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಜಯದೇವ ವೃತ್ತದಲ್ಲಿ ಶುಕ್ರವಾರ ಕಾರ್ಮಿಕರ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಕಿಸಾನ್ ಮೋರ್ಚಾ ಪದಾಧಿಕಾರಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಮುಂದಿನ ಹೋರಾಟ ಕುರಿತ ಪೋಸ್ಟರ್ ಮತ್ತು ಕರಪತ್ರವನ್ನು ಬಿಡುಗಡೆ ಮಾಡಿದರು.

ಈ ವೇಳೆ ಮುಖಂಡ ಆವರಗೆರೆ ಎಚ್‌.ಜಿ.ಉಮೇಶ್ ಮಾತನಾಡಿ, ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗೆ ಸವಾಲಾಗಿದ್ದ ಕ್ವಿಟ್ ಇಂಡಿಯಾ ಚಳವಳಿಯ ಸ್ಫೂರ್ತಿ ಮತ್ತು ನೆನಪಿನಲ್ಲಿ ನವ ವಸಾಹತುಶಾಹಿ ಕಾರ್ಪೊರೇಟ್ ಆಳ್ವಿಕೆಯಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಎಂ.ಎಸ್ ಸ್ವಾಮಿನಾಥನ್ ಶಿಪಾರಸ್ಸಿನಂತೆ ರೈತರ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಶಾಸನ, ಎಲ್ಲಾ ರೈತ-ಕೃಷಿಕೂಲಿಕಾರ-ಮಹಿಳೆಯರ ಎಲ್ಲಾ ರೀತಿಯ ಸಾಲ ಮನ್ನಾ ಮಾಡಲು ಹಾಗೂ ಋಣ ಮುಕ್ತ ಕಾಯ್ದೆ ಜಾರಿಗೆ ಮತ್ತು ಶಾಸನಬದ್ಧ ಜೀವನಾವಶ್ಯಕ ಕನಿಷ್ಟ ಕೂಲಿ ಶಾಸನಕ್ಕೆ. ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಆಗ್ರಹಿಸಲಾಗುತ್ತಿದೆ ಎಂದರು.

ಬ್ರಿಟಿಷ್ ಸಾಮ್ರಾಜ್ಯದ ಪತನಕ್ಕೆ ಭದ್ರವಾದ ಅಡಿಪಾಯ ಹಾಕಿದ್ದ ಕ್ವಿಟ್ ಇಂಡಿಯಾ ಚಳವಳಿಯನ್ನು ಮಾಡು ಇಲ್ಲವೇ ಮಡಿ ಎಂಬ ಕರೆಯೊಂದಿಗೆ 1942ರ ಅ.9ರಂದು ಆರಂಭಗೊಂಡಿತ್ತು. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯ ಬುಡವನ್ನು ದೊಡ್ಡ ಪ್ರಮಾಣದಲ್ಲಿ ಅಲುಗಾಡಿಸಿ ಬ್ರಿಟಿಷರೂ ಭಾರತ ಬಿಟ್ಟು ತೊಲಗಬೇಕಾದ ಪರಿಸ್ಥಿತಿಯನ್ನು ಸೃಷ್ಟಿಸಿತ್ತು ಎಂದು ಹೇಳಿದರು.

ರಸಗೊಬ್ಬರ-ಡೀಸೆಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೇಲೆ ಹಾಗೂ ಎಲ್ಲಾ ವಲಯಗಳಲ್ಲಿ ಹೆಚ್ಚುತ್ತಿರುವ ಖಾಸಗೀಕರಣ-ಕಾರ್ಪೋರೇಟ್ ಶೋಷಣೆ ಮೇಲೆ ಸೂಕ್ತ ನಿಯಂತ್ರಣ ಹಾಕುವಂತೆ ಹಾಗೂ ಬ್ಯಾಂಕ್, ವಿಮೆ. ಆರೋಗ್ಯ, ಶಿಕ್ಷಣ ಖಾಸಗೀಕರಣ ನಿಲ್ಲಿಸುವಂತೆ ಆಗ್ರಹಿಸಿ. "ಕಾರ್ಪೋರೆಟ್‌ಗಳೇ ದೇಶ ಬಿಟ್ಟು ತೊಲಗಿ " ಎಂಬ ಘೋಷಣೆಯಡಿಯಲ್ಲಿ ದೇಶದಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆ.10ರಂದು ಬೃಹತ್ ಮತ ಪ್ರದರ್ಶನ -ಜೈಲ್ ಭರೋ ನಡೆಸುವಂತೆ ಎಸ್.ಕೆ.ಎಂ-ಜೆ.ಸಿ.ಟಿ.ಯು. ಜಂಟಿಯಾಗಿ ಕರೆ ನೀಡಿದೆ. ಅದರ ಭಾಗವಾಗಿ ಇಂದು ಪೋಸ್ಟರ್ ಮತ್ತು ಕರಪತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಕೆ.ಎಚ್.ಆನಂದರಾಜು, ಡಿ.ಸುರೇಶ್, ರಂಗನಾಥ, ಎ.ಮರಿಯಪ್ಪ, ಪವಿತ್ರ, ರಘು, ರಮೇಶ್, ಐರಣಿ ಚಂದ್ರು, ಹೊನ್ನೂರು ಮುನಿಯಪ್ಪ, ಶ್ರೀನಿವಾಸ, ಮಂಜುನಾಥ ಕೈದಾಳೆ, ಮಧು ತೊಗಲೇರಿ, ಸತೀಶ ಅರವಿಂದ, ನೇತ್ರಾವತಿ ಇತರರು ಇದ್ದರು.