ಸಾರಾಂಶ
ರಾಜ್ಯದಲ್ಲಿ ಯಾವುದಾದರೂ ಹೊಸ ಜಿಲ್ಲೆ, ತಾಲೂಕು ರಚಿಸುವ ಯೋಜನೆ ಇದ್ದಲ್ಲಿ ಡಿ. 31ರೊಳಗೆ ತಿಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ತ್ವರಿತವಾಗಿ ಮುಖ್ಯಮಂತ್ರಿ ಭೇಟಿಯಾಗಿ ಮನವಿ ಸಲ್ಲಿಸಬೇಕು.
ಗಂಗಾವತಿ:
ಗಂಗಾವತಿ ಕೇಂದ್ರವನ್ನಾಗಿಸಿಕೊಂಡು ಕನಕಗಿರಿ, ಕಾರಟಗಿ, ತಾವರಗೆರಾ ಮತ್ತು ಕಂಪ್ಲಿ ಒಳಗೊಂಡಂತೆ ನೂತನ ಕಿಷ್ಕಿಂಧಾ ಜಿಲ್ಲೆ ರಚನೆಗೆ ಒತ್ತಾಯಿಸಿ ಮುಖ್ಯಮಂತ್ರಿ ಭೇಟಿ ಮಾಡುವ ಬಗ್ಗೆ ಜಿಲ್ಲಾ ಹೋರಾಟ ಸಮಿತಿ ನಿರ್ಣಯ ಕೈಗೊಂಡಿತು.ನಗರದ ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದಲ್ಲಿ ಸಮಿತಿ ಸಂಚಾಲಕರಾದ ಸಿಂಗನಾಳ ಸುರೇಶ ಮತ್ತು ನಾರಾಯಣಪ್ಪ ನಾಯಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೂ ಪೂರ್ವದಲ್ಲಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ಇತರ ಹಾಲಿ-ಮಾಜಿ ಚುನಾಯಿತರನ್ನು ಸಂಪರ್ಕಿಸಿ ಬೆಂಗಳೂರಿಗೆ ನಿಯೋಗ ಹೋಗಬೇಕೆಂದು ನಿರ್ಧರಿಸಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಸ್ವಯಂ ಸೇವಕ ಮಂಜುನಾಥ ಕಟ್ಟಿಮನಿ, ರಾಜ್ಯದಲ್ಲಿ ಯಾವುದಾದರೂ ಹೊಸ ಜಿಲ್ಲೆ, ತಾಲೂಕು ರಚಿಸುವ ಯೋಜನೆ ಇದ್ದಲ್ಲಿ ಡಿ. 31ರೊಳಗೆ ತಿಳಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಹೀಗಾಗಿ ತ್ವರಿತವಾಗಿ ಮುಖ್ಯಮಂತ್ರಿ ಭೇಟಿಯಾಗಿ ಮನವಿ ಸಲ್ಲಿಸೋಣ ಎಂದರು..ಸಭೆಯಲ್ಲಿ ಜಗನ್ನಾಥ್ ಆಲಂಪಲ್ಲಿ, ಸರ್ವೇಶ ವಸ್ತ್ರದ, ಅನ್ನಪೂರ್ಣಸಿಂಗ್, ವಿಶ್ವನಾಥ ಮಾಲಿಪಾಟೀಲ್, ಹುಸೇನಪ್ಪ ಮಾದಿಗ, ನಾಗರಾಜ ಗುತ್ತೇದಾರ, ಗೀತಾವಿಕ್ರಂ, ಶ್ರೀನಿವಾಸ ಎಂ.ಜೆ, ಲಿಂಗೇಶ ಚಳ್ಳೂರು, ಕೃಷ್ಣ ಅಲೆಮಾರಿ, ವಿನಯ್ ಪಾಟೀಲ್, ವೀರೇಶ ಮಡಿವಾಳ ಸೇರಿದಂತೆ ಹಲವರು ಇದ್ದರು.