ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬಾಗಲಕೋಟೆಯ ಶ್ರೀ ವೀರೇಶ್ವರ ನಾಟ್ಯಸಂಘದಿಂದ ಮಾ.2ರಂದು ಮಧ್ಯಾಹ್ನ 3 ಮತ್ತು ಸಂಜೆ 6ಕ್ಕೆ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಕಿವುಡ ಮಾಡಿದ ಕಿತಾಪತಿ ನಾಟಕ ಪ್ರದರ್ಶನವಾಗಲಿದೆ ಎಂದು ರಂಗಸಂಪದ ಅಧ್ಯಕ್ಷ ಡಾ.ಅರವಿಂದ ಕುಲಕರ್ಣಿ ತಿಳಿಸಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿ ರಂಗಭೂಮಿ ಸಂಕಷ್ಟದಲ್ಲಿದ್ದು, ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು. ಒಂದು ಕಾಲದಲ್ಲಿ ಏಣಗಿ ಬಾಳಪ್ಪ, ಚಿಂದೋಡಿ ಲೀಲಾ, ಹುಚ್ಚೇಶ್ವರ ತಂಡ ಹೀಗೆ ಕರ್ನಾಟಕದಲ್ಲಿ ವೃತ್ತಿಪರ ನಾಟಕ ತಂಡಗಳು ವಿಜೃಂಭಿಸುತ್ತಿದ್ದವು. 30-35ರಷ್ಟು ಹೆಸರಾಂತ ನಾಟಕ ತಂಡಗಳಿದ್ದವರು. ಒಂದೊಂದು ತಂಡ 40 ರಿಂದ 50ರಷ್ಟು ಕುಟುಂಬಗಳನ್ನು ಸಾಕಿ ಸಲಹುತ್ತಿದ್ದವು. ಹವ್ಯಾಸಿ ನಾಟಕಗಳು ಬಂದು ವೃತ್ತಿ ನಾಟಕಗಳ ಸಂಖ್ಯೆ ಕಡಿಮೆಯಾಗುತ್ತ ಬಂದಿತು. ದೂರದರ್ಶನ, ಯುಟ್ಯೂಬ್ ಹಾವಳಿಗಳಿಂದ ವೃತ್ತಿರಂಗಭೂಮಿ ನಶಿಸಿ ಹೋಗುತ್ತಿವೆ. ವೃತ್ತಿ ರಂಗಭೂಮಿ ಕಲಾವಿದರ ಜೀವನ ದುಸ್ತರವಾಗಿದೆ ಎಂದರು.
ತಾಲೂಕಿಗೊಂದು ರಂಗಮಂದಿರ ನಿರ್ಮಿಸುವ ಮೂಲಕ ವೃತ್ತಿರಂಗಭೂಮಿ, ಕಲಾವಿದರ ಕೈ ಹಿಡಿಯಬೇಕು. ವೃತ್ತಿ ರಂಗಭೂಮಿ ಸಾಕಷ್ಟು ನಾಟಕಗಳು ಸಮಾಜದ ಮೇಲೆ ಪ್ರಭಾವ ಬೀರಿವೆ. ನೂರಾರು ಕುಟುಂಬಗಳನ್ನು ಸಾವಿರಾರು ಜನರನ್ನು ತಿದ್ದಿತೀಡಿ ಸರಿದಾರಿಗೆ ತಂದಿವೆ. ತಿಳುವಳಿಕೆ ಹೇಳುವ ನಾಟಕಗಳಿವೆ. ಪ್ರೇಕ್ಷಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ದ್ವಂದಾರ್ಥದ ಸಂಭಾಷಣೆಗಳು ಇರುತ್ತವೆ. ಅವು ಅನಿವಾರ್ಯವೂ ಕೂಡ. ಇಲ್ಲಿಯ ಕಲಾವಿದರು ಯಾವುದೇ ಹವ್ಯಾಸಿ ಕಲಾವಿದರಗಿಂತಲೂ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲ. ಒಂದು ನಾಟಕ ತಂಡವೆಂದರೆ ಹಲವಾರು ಜನರಿಗೆ ಉದ್ಯೋಗ ನೀಡುವ ಹತ್ತಾರು ಕುಟುಂಬಗಳಿಗೆ ಅನ್ನ ನೀಡುವ ಸಂಸ್ಥೆಯಿದ್ದಂತೆ ಇವುಗಳನ್ನು ಉಳಿಸಿ ಬೆಳೆಸುವುದು ಸಮಾಜದ ಕರ್ತವ್ಯ ಎಂದು ಹೇಳಿದರು.ವೀರೇಶ್ವರ ನಾಟ್ಯ ಸಂಘದ ವ್ಯವಸ್ಥಾಪಕರಾದ ವೀರೇಶ ಚಳಗೇರಿ ಮತ್ತು ಮೀನಾಕ್ಷಿ ದಾವಣಗೇರಿ ಮಾತನಾಡಿ, ನಮ್ಮ ನಾಟಕ ತಂಡ ಪ್ರಾರಂಭಿಸಿ 13 ವರ್ಷಗಳಾದವು. ಕಲಾವಿದರು, ಸಂಗೀತ ಸಂಯೋಜಕರು, ಮೇಕಪಮನ್, ಕೆಲಸಗಾರರು ಹೀಗೆ ಒಟ್ಟು 22 ಜನ ತಂಡದಲ್ಲಿದ್ದಾರೆ. ಈ ಪ್ರದರ್ಶನವನ್ನು ಮಕ್ಕಳ ಶಿಕ್ಷಣದ ಸಹಾಯಾರ್ಥವಾಗಿ ಇಟ್ಟುಕೊಂಡಿದ್ದು ಎಲ್ಲರೂ ಹಣ ಕೊಟ್ಟು ನಾಟಕವನ್ನು ನೋಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.