ಅಡುಗೆ ಸಿಬ್ಬಂದಿ ನರಸಿಂಹಪ್ಪ ಅಮಾನತು

| Published : Aug 12 2024, 12:46 AM IST

ಸಾರಾಂಶ

ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್ ಹಾಸ್ಟೆಲ್‌ಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಲು ಸೂಚಿಸಿದ್ದರು.

ಕನ್ನಡಪ್ರಭ ವಾರ್ತೆ ಕೋಲಾರತಾಲ್ಲೂಕಿನ ಅಮ್ಮನಲ್ಲೂರು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ೧೮ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಡುಗೆ ಸಿಬ್ಬಂದಿ ನರಸಿಂಹಪ್ಪರನ್ನು ಅಮಾನತು ಮಾಡಲಾಗಿದೆ.ಈ ಘಟನೆ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ರಾಕೇಶ್ ಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿದ್ದರು. ಅಡುಗೆ ಸಿಬ್ಬಂದಿ ನರಸಿಂಹಪ್ಪ ಕರ್ತವ್ಯ ಲೋಪ ಎಸಗಿರುವುದು ಕಂಡು ಬಂದಿದ್ದು, ಇಲಾಖಾ ವಿಚಾರಣೆ ನಡೆಸುವಂತೆ ಸೂಚನೆ ನೀಡಿದ್ದಾರೆ. ಘಟನೆ ಕುರಿತು ಆಯುಕ್ತರಿಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಪತ್ರ ಬರೆದಿದ್ದರು.ಹಾಸ್ಟೆಲ್‌ನ ವಾರ್ಡನ್ ಗುರುಶಾಂತಪ್ಪ ರಜೆ ಮೇಲೆ ತೆರಳಿದ್ದಾರೆ, ಅಡುಗೆ ಸಿಬ್ಬಂದಿ ನರಸಿಂಹಪ್ಪ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಹಾಸ್ಟೆಲ್‌ನಲ್ಲಿ ಸ್ವಚ್ಛತೆ ಕಾಪಾಡಿಲ್ಲ. ವಿದ್ಯಾರ್ಥಿಗಳನ್ನು ನಿಂದಿಸುವುದು, ಹೊಡೆಯುವುದು ಸಹ ಕಂಡು ಬಂದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಸಹಾಯಕ ನಿರ್ದೇಶಕಗೆ ನೋಟಿಸ್ಸಮಾಜ ಕಲ್ಯಾಣ ಇಲಾಖೆ ಕೋಲಾರ ತಾಲ್ಲೂಕಿನ ಸಹಾಯಕ ನಿರ್ದೇಶಕ ಡಿ.ಚನ್ನಬಸಪ್ಪ ಅವರಿಗೆ ನೋಟಿಸ್ ನೀಡಲಾಗಿದೆ. ಕರ್ತವ್ಯ ಲೋಪವೆಸಗಿದ್ದು, ತಮ್ಮ ಮೇಲೆ ಏಕೆ ಶಿಸ್ತು ಕ್ರಮ ವಹಿಸಬಾರದೆಂದು ೧೫ ದಿನಗಳೊಳಗೆ ಸಮಜಾಯಿಷಿ ನೀಡುವಂತೆ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ಹಾಸ್ಟೆಲ್‌ನ ವಾರ್ಡನ್ ರಜೆ ಇದ್ದಾಗ ಮತ್ತೊಬ್ಬ ವಾರ್ಡನ್‌ಗೆ ಪ್ರಭಾರದಲ್ಲಿ ನಿಯೋಜಿಸಬೇಕಿತ್ತು. ಅದನ್ನು ಬಿಟ್ಟು ಅಡುಗೆ ಸಿಬ್ಬಂದಿಗೆ ಜವಾಬ್ದಾರಿ ನೀಡಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ. ಘಟನೆ ಕುರಿತಂತೆ ಶನಿವಾರ ಶಾಸಕ ಕೊತ್ತೂರು ಮಂಜುನಾಥ್ ಹಾಗೂ ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್ ಹಾಸ್ಟೆಲ್‌ಗೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿಯನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಲು ಸೂಚಿಸಿದರು.