ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಜ. 20ರಿಂದ 23ರವರೆಗೆ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ವಾಣಿಜ್ಯೋದ್ಯಮ ಹಾಗೂ ಪ್ರವಾಸೋದ್ಯಮಕ್ಕೆ ಈ ಉತ್ಸವ ಸಹಕಾರಿಯಾಗಿದೆ. ಅಂತಾರಾಷ್ಟ್ರೀಯ ಖ್ಯಾತಿಯ 10 ಜನ ಹಾಗೂ ದೇಶದ ವಿವಿಧ ರಾಜ್ಯಗಳಿಂದ 32 ಜನ ಗಾಳಿಪಟ ಹಾರಿಸುವ ಪರಿಣಿತರು ಆಗಮಿಸುವರು.
ಈ ಬಾರಿ ಎರಡೂವರೆ ಲಕ್ಷಕ್ಕಿಂತಲೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆಯಿದೆ ಎಂದರು. ಶ್ರೀರಾಮನ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಶ್ರೀರಾಮನ ಭಾವಚಿತ್ರವಿರುವ ಗಾಳಿಪಟ ಹಾರಿಸಲಾಗುವುದು.
ಅಮೆರಿಕ, ಇಂಡೋನೇಷಿಯಾ, ಸ್ಲೋವೇನಿಯಾ, ನೆದರಲ್ಯಾಂಡ್ ದೇಶಗಳಿಂದ ಗಾಳಿಪಟ ಹಾರಿಸುವ ಅಂತಾರಾಷ್ಟ್ರೀಯ ಪಟುಗಳು ಆಗಮಿಸುವರು.
ಅಲ್ಲದೆ, ನಾಗ್ಪೂರ, ಸೂರತ್, ದೊಡ್ಡಬಳ್ಳಾಪುರ, ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್, ಓಡಿಶಾ, ಬೆಂಗಳೂರು ಸೇರಿದಂತೆ ಮತ್ತಿತರಕಡೆಗಳಿಂದಲೂ ಗಾಳಿಪಟ ಹಾರಿಸುವ ತಜ್ಞರು ಆಗಮಿಸುವರು.
ಯುವಕರಿಗಾಗಿ ಉಮಂಗ ಉತ್ಸವ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಭಾಷಣ, ವಾದ-ವಿವಾದ, ಸೋಲೋ ನೃತ್ಯ, ಗುಂಪು ನೃತ್ಯ, ಸೋಲಲೋ ಗಾಯನ, ಮೋಕ್ ಪ್ರೆಸ್ ಹಾಗೂ ಫ್ಯಾಷನ್ ಶೋ ಸ್ಪರ್ಧೆಗಳು ನಡೆಯಲಿವೆ.
ಕಾಲೇಜು ವಿದ್ಯಾರ್ಥಿಗಳಾಗಿ ಡಿಜೆ ಕಾರ್ಯಕ್ರಮ ಜ.20 ರಂದು ಸಂಜೆ 7 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದೇಹದಾರ್ಢ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
10 ಸಾವಿರ ಶಾಲಾ ಮಕ್ಕಳಿಗೆ ಉಚಿತ ಗಾಳಿಪಟ ವಿತರಿಸಲಾಗುವುದು. ಜ.22 ರಂದು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರದಲ್ಲಿ ರಾಮಲಲ್ಲ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಭವ್ಯ ಕ್ರ್ಯಾಕರ್ ಶೋ ಆಯೋಜಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚೈತನ್ಯ ಕುಲಕರ್ಣಿ, ಗಣೇಶ ಮಳಲಿಕರ, ದೀಪಕ ಗೋಜಗೆಕರ, ನಗರ ಸೇವಕ ಗಿರೀಶ ದೊಂಗಡಿ ಮೊದಲಾದವರು ಇದ್ದರು.