ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ಒಂದು ಮನರಂಜನಾತ್ಮಕ ಸ್ಪರ್ಧೆ ಎಂದು ನಟ ಶಂಕರ್ ಅಶ್ವತ್ಥ್ ಅಭಿಪ್ರಾಯಪಟ್ಟರು.ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸೇಂಟ್ ಜಾನ್ ಆ್ಯಂಬುಲೆನ್ಸ್ (ಇಂಡಿಯಾ), ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಗಾಳಿಪಟ ಹಾರಾಟ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜಾನಪದ ಆಟಗಳು ಮಕ್ಕಳಿಗೆ ಲಭ್ಯವಾಗುತ್ತಿಲ್ಲ, ಆಷಾಢ ಮಾಸದಲ್ಲಿ ಬೀಸುವ ಗಾಳಿ ಸ್ವಲ್ಪ ಬಿರುಸಾಗಿರುವುದರಿಂದ ಪಟ ಮೇಲೆ ಹಾರಿಸುವುದು ಸುಲಭವಾಗುತ್ತದೆ ಎಂದರು.ಭಗವಂತ ಸೂತ್ರಧಾರಿ, ಸೂತ್ರಧಾರ ಮತ್ತು ಬಾಲಂಗೋಚಿ ಗಾಳಿಪಟ ಹಾರಲು ಪ್ರಮುಖವಾಗಿಬೇಕು, ಹಾಗೆಯೇ ಮನುಷ್ಯ ಜೀವನದ ಗಾಳಿಪಟವನ್ನು ಸುಸುತ್ರವಾಗಿ ನಡೆಸಲು ಭಗವಂತ ಪ್ರೇರಣೆಯ ಸೂತ್ರಧಾರ ಮತ್ತು ಆಲೋಚನೆಯ ಬಾಲಂಗೋಚಿ ಉತ್ತಮವಾಗಿರಬೇಕೆಂದು ಸಲಹೆ ನೀಡಿದರು.
ಹಾಸ್ಯನಟ ರಮಾನಂದ್ ಮಾತನಾಡಿ, ಇಂದಿನ ದಿನಗಳಲ್ಲಿ ಗಾಳಿಪಟ ಹಾರಾಟ ಸ್ಪರ್ಧೆಗಳು ನಡೆಯುತ್ತಿಲ್ಲ. ಅದನ್ನು ಮಂಡ್ಯ ನೆಲದಲ್ಲಿ ನೋಡಲು ಸಾಧ್ಯವಾಗುತ್ತಿದೆ. ಮಕ್ಕಳು ಸಂತೋಷದಿಂದ ಪಟ ಹಾರಿಸುತ್ತಾ ಅದರ ಜೀವಂತಿಕೆಯನ್ನು ಉಳಿಸಿದ್ದಾರೆ ಎಂದರು.ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ ಗಾಳಿಪಟದ ಸದ್ದೇ ಇಲ್ಲ, ಬರೀ ಮೊಬೈಲ್ ನೋಡುವುದೇ ಒಂದು ಕೆಲಸವಾಗಿದೆ, ೮೦೦ ಕೋಟಿ ಜನಸಂಖ್ಯೆಯ ಪ್ರಪಂಚದಲ್ಲಿ ಸಾಕಷ್ಟು ಜನರು ಮೊಬೈಲ್ ನೋಡಿ ಮಂಕಾಗಿದ್ದಾರೆ, ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ ಎಂದು ಎಚ್ಚರಿಸಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಜಿ.ವಿ.ನಾಗರಾಜು ಮಾತನಾಡಿ, ಕಳೆದ ೨೭ ವರ್ಷಗಳಿಂದ ಗಾಳಿಪಟ ಹಾರಾಟ ಸ್ಪರ್ಧೆಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಇಂದು ೮೦ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಬಂದಿದ್ದಾರೆ, ಕಿರಿಯರ ವಿಭಾಗ, ಹಿರಿಯ ವಿಭಾಗ, ಮುಕ್ತ ವಿಭಾಗ ಎಂದು ವಿಂಗಡಿಸಿ ವಿಜೇತರನ್ನು ಆಯ್ಕೆಮಾಡಿ ಬಹುಮಾನ ನೀಡುತ್ತಿದ್ದೇವೆ ಎಂದು ತಿಳಿಸಿದರು.ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿದರು. ಸುಮಾರು ೮೫ಕ್ಕೂ ಹೆಚ್ಚು ಗಾಳಿಪಟ ಹಾರಾಟ ಸ್ಪರ್ಧಾರ್ಥಿಗಳು ನೋಂದಣಿ ಮಾಡಿಸಿಕೊಂಡು ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಜೇತರು ಗಣ್ಯರಿಂದ ಬಹುಮಾನ ಪಡೆದರು.
ಕಾರ್ಯಕ್ರದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಸಿ.ಶಿವಾನಂದ, ಖಚಾಂಚಿ ಎಸ್.ಕೆ.ಶಿವಪ್ರಕಾಶ್‌ಬಾಬು, ಸಮೃದ್ಧಿ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ನೀನಾಪಟೇಲ್, ನಿವೃತ್ತ ಉಪನ್ಯಾಸಕರ ಜಿ.ವಿ.ಕುಮಾರ್, ಜನಾರ್ಧನ್ ಕೊಡ್ಲಿ, ಉಷಾರಾಣಿ, ಕೃಷ್ಣೇಗೌಡ, ನಾರಾಯಣಸ್ವಾಮಿ, ಹಾಸ್ಯನಟ ಮಂಡ್ಯ ಸತ್ಯನ್, ಸೇವಾದಳದ ಜಿಲ್ಲಾ ಸಂಘಟಕ ಸಿ.ಎಸ್.ಗಣೇಶ್, ಸಂಭ್ರಮ ಕಾಲೇಜು ಅಧ್ಯಕ್ಷ ಸಿ.ಸ್ವಾಮಿ ಮತ್ತಿತರರಿದ್ದರು.