ಸಾರಾಂಶ
ಚೆನ್ನಮ್ಮಳ 200ನೇ ವಿಜಯೋತ್ಸವ, 245ನೇ ಜಯಂತಿ ಕಾರ್ಯಕ್ರಮ
ಗದಗ: ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಉಳಿವಿಗಾಗಿ ವೀರರಾಣಿ ಕಿತ್ತೂರು ಚೆನ್ನಮ್ಮಳ ಧೈರ್ಯ, ಶೌರ್ಯ, ತ್ಯಾಗ, ಆಧ್ಯಾತ್ಮಿಕತೆಯನ್ನು ಇಂದಿನ ಮಹಿಳೆಯರು ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿಯ ಮಹಾಪೀಠದ ಬಸವ ಜಯಮೃತ್ಯಂಜಯ ಸ್ವಾಮಿಗಳು ಹೇಳಿದರು.ಅವರು ತಾಲೂಕಿನ ಲಕ್ಕುಂಡಿ ಗ್ರಾಮದ ಲಿಂಗಾಯತ ಪಂಚಮಸಾಲಿ ಸಮಾಜವು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರ ರಾಣಿ ಚೆನ್ನಮ್ಮಳ 200ನೇ ವಿಜಯೋತ್ಸವ ಹಾಗೂ 245ನೇ ಜಯಂತಿ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಖಂಡಿಸಿದ್ದ ಚೆನ್ನಮ್ಮ ಯಾರೊಂದಿಗೆ ರಾಜಿ ಮಾಡಿಕೊಳ್ಳದೇ ಸ್ವಾಭಿಮಾನದಿಂದ ತನ್ನ ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಸ್ವಾಭಿಮಾನದಿಂದ ಹೋರಾಟ ಮಾಡಿದ ಧೈರ್ಯಶಾಲಿ ಚೆನ್ನಮ್ಮ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದ್ದಾಳೆ. ಈ ನಾಡಿನಲ್ಲಿ ಹೊಯ್ಸಳ, ಕದಂಬ, ಚಾಲುಕ್ಯರು, ವಿಜಯನಗರದ ಅರಸರು ಸೇರಿದಂತೆ 600 ಸಂಸ್ಥಾನಗಳಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ರಾಣಿಯರಾಗಿ ಆಳಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ಹೋರಾಟ ಮುಂದುವರೆಯಲಿದ್ದು ಬೇಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಮಾಡಲಾಗುವುದು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡಿದರು.
ಶಾಸಕ ಸಿ.ಸಿ. ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಮ್ಮ ಪಂಚಮಸಾಲಿ ಸಮಾಜದ ಮಗಳು ಕಿತ್ತೂರ ರಾಣಿ ಚೆನ್ನಮ್ಮಳ ಸ್ವಾಭಿಮಾನದ ಬದುಕು ನಮಗೆಲ್ಲಾ ದಾರಿದೀಪವಾಗಿದೆ. ಕೃಷಿಯನ್ನೇ ಅವಲಂಬಿಸಿದ ಪಂಚಮಸಾಲಿ ಸಮಾಜದ ಹಿರಿಯರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು. ವಿದ್ಯಾವಂತರನ್ನಾಗಿ ಮಾಡಬೇಕು. ಕೃಷಿಯನ್ನೇ ನಂಬಿ ಇಂದು ಸಮಾಜ ಬಾಂಧವರು ಆರ್ಥಿಕತೆಯಿಂದ ಹಿಂದುಳಿಯುತ್ತಿದ್ದಾರೆ. ಸಮಾಜದ ಯುವಕರು ಸರಕಾರದ ಶೈಕ್ಷಣಿಕ ಮತ್ತು ಉದ್ಯೋಗ ದೃಷ್ಟಿಯಿಂದ 2ಎ ಮೀಸಲಾತಿ ಪಡೆಯುವುದು ಅವಶ್ಯವಿದ್ದು, ನಮ್ಮ ಸರಕಾರದ ಅವಧಿಯಲ್ಲಿ ಮೀಸಲಾತಿ ಹೋರಾಟಕ್ಕೆ ಶ್ರೀಗಳಿಗೆ ಸಾಕಷ್ಟು ಬೆಂಬಲ ನೀಡಿದ್ದೇನೆ ಎಂದರು.ಕಾಂಗ್ರೆಸ್ ಮಾಧ್ಯಮ ವಕ್ತಾರ ಸಂಗಮೇಶ ಕೊಳ್ಳಿ ಮಾತನಾಡಿ, ಪಂಚಮಸಾಲಿ ಸಮಾಜವನ್ನು ಒಡೆದು ಆಳುವ ಬ್ರಟಿಷರು ಈ ನಾಡಿನಲ್ಲಿ ಬಹಳ ಜನರಿದ್ದು, ಅಂಥವರಿಂದ ಎಚ್ಚರಿಕೆಯಿಂದ ಇರಬೇಕು. ಪಕ್ಷಾತೀತ ಮತ್ತು ಜಾತ್ಯತೀತವಾಗಿ 2ಎ ಮೀಸಲಾತಿಯನ್ನು ಪಡೆದುಕೊಳ್ಳಲು ಪಂಚಮಸಾಲಿ ಸಮಾಜವು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದರು. ದಾವಣಗೆರೆ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಶೋಕ ಗೋಪನಾಳ, ಸಾಹಿತಿ ಮಹೇಶ ವಡ್ಡಿನ, ಗದಗ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ರೇಷ್ಮಾ ಅಂಗಡಿ ಮಾತನಾಡಿದರು. ಕೊತಬಾಳದ ಅರಣೋದಯ ಸಾಂಸ್ಕೃತಿಕ ಕಲಾ ತಂಡದಿಂದ ಜಾನಪದ ಕಾರ್ಯಕ್ರಮಗಳ ಜರುಗಿದವು. ರಾಷ್ಟಮಟ್ಟದ ಯೋಗಪಟು ಪ್ರೀತಿ ಹಡಗಲಿಯ ಯೋಗ ಪ್ರದರ್ಶನ ಗಮನ ಸೆಳೆಯಿತು. ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷ, ಗ್ರಾ.ಪಂ ಸದಸ್ಯ ಬಸವರಾಜ ಯಲಿಶಿರುಂಜ, ಗ್ರಾ.ಪಂ. ಅಧ್ಯಕ್ಷ ಕೆ.ಎಸ್. ಪೂಜಾರ, ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಬಿ. ಕಲಕೇರಿ, ಲಿಂಗದಾಳ ಗ್ರಾ. ಪಂ. ಅಧ್ಯಕ್ಷ ಪ್ರದೀಪ ನವಲಗುಂದ, ವಸಂತ ಮೇಟಿ, ತಾ.ಪಂ. ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ಗದಗ ಜಿಲ್ಲಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಅಯ್ಯಪ್ಪ ಅಂಗಡಿ ವೇದಿಕೆಯಲ್ಲಿದ್ದರು. ಶ್ವೇತಾ ಪವಾಡಶೆಟ್ಟರ ಪ್ರಾರ್ಥಿಸಿದರು. ಗ್ರಾ. ಪಂ ಸದಸ್ಯೆ ಲಲಿತಾ ಗದಗಿನ ಸ್ವಾಗತಿಸಿದರು. ಗಾಯತ್ರಿ ಹಡಗಲಿ ನಿರೂಪಿಸಿದರು. ಮುತ್ತಪ್ಪ ನೋಟಗಾರ ವಂದಿಸಿದರು.