ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕೋತ್ಸವ ಸಂಪನ್ನ

| Published : Feb 16 2024, 01:51 AM IST

ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕೋತ್ಸವ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಗೋಕರ್ಣ ಸಮೀಪದ ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಈ ಹಿನ್ನೆಲೆಯಲ್ಲಿ ಶಾಲೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗೋಕರ್ಣ: ಇಲ್ಲಿನ ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಾರ್ಷಿಕೋತ್ಸವ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಭಾರ ತಾಪಂ ಕಾರ್ಯನಿರ್ವಹಣಾಧಿಕಾರಿ ಆರ್.ಎಲ್. ಭಟ್ಟ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈ ವಸತಿ ಶಾಲೆಯು ಆರಂಭಗೊಂಡ ಬಳಿಕ ಎರಡೂ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ. 100ರಷ್ಟು ಸಾಧನೆಯಾಗಿದೆ. 3ನೇ ವರ್ಷವೂ ಸಾಧನೆಗೈಯಲು ಸಜ್ಜಾಗಿದೆ. ತಾಲೂಕಿನ ಘನತೆ ಹೆಚ್ಚಿಸಿದೆ ಎಂದರು.ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಆರ್.ಜಿ. ಗುಂದಿ ಮಾತನಾಡಿ, ಶಾಲೆಯ ಪರಿಸರ ಮತ್ತು ಶಿಸ್ತಿನ ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಸರ್ಕಾರದ ಮಟ್ಟದಲ್ಲಿ ಇಷ್ಟು ದೊಡ್ಡ ಯೋಜನೆಗಳನ್ನು ಹಮ್ಮಿಕೊಂಡು ದಿನ-ದಲಿತರ ಬಾಳಿಗೆ ಬೆಳಕು ನೀಡುವ ಕಾರ್ಯವನ್ನು ಆಂಗ್ಲ ಮಾಧ್ಯಮದ ಶಿಕ್ಷಣ ಶಾಲೆಗಳ ಶಿಕ್ಷಣ ವ್ಯವಸ್ಥೆಯನ್ನು ಗ್ರಾಮೀಣ ಭಾಗದಲ್ಲಿ ಸರ್ಕಾರ ಕಲ್ಪಿಸಿಕೊಟ್ಟಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಸತಿ ಶಾಲೆಯ ಪ್ರಾಂಶುಪಾಲ ಎನ್.ಆರ್. ನಾಯಕ ಮಾತನಾಡಿ, ವಸತಿ ಶಾಲೆಯ ಸೌಲಭ್ಯ ಬಳಸಿಕೊಂಡು ಸುಶಿಕ್ಷಿತರಾಗಿ ಭವ್ಯ ಭವಿಷ್ಯತ್ತಿನ ನಾಗರಿಕ ಪ್ರಜೆಗಳಾಗಿ ಸಮಾಜಮುಖಿಗಳಾಗಬೇಕು ಎಂಬ ಕಿವಿಮಾತು ಹೇಳಿದರು.ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್‍ನ ಕಾರ್ಯದರ್ಶಿ ಕೆ.ಆರ್. ನಾಯಕ, ಕ.ವ.ಶಿ.ಸ.ಸಂ. ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಮನ್ವಯಾಧಿಕಾರಿ ಶ್ರೀನಿವಾಸ ನಾಯ್ಕ, ನಾಡುಮಾಸ್ಕೇರಿ ಗ್ರಾಪಂ ಸದಸ್ಯರಾದ ರೋಹಿಣಿ ವಸಂತ ನಾಯ್ಕ, ದಯಾನಂದ ರಾಧಾಕೃಷ್ಣ ಮೇಥಾ, ಪಾಲಕ ಪ್ರತಿನಿಧಿಗಳಾದ ಮಂಜುನಾಥ ನಾಯ್ಕ, ವೀಣಾ ನಾಯ್ಕ ಪಾಲ್ಗೊಂಡಿದ್ದರು. ಕುಮಟಾದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೆಗಡೆಯ ಪ್ರಾಂಶುಪಾಲರಾದ ರಾಜು ಬಿ. ಗಾಂವಕರ, ಅಂಕೋಲಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಬೆಳಸೆಯ ಪ್ರಾಂಶುಪಾಲರಾದ ಅಶೋಕ ಗಾಂವಕರ, ಅಂಕೋಲಾ ಬೇಲೆಕೇರಿಯ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ ಪ್ರಾಂಶುಪಾಲ ವಿನೋದ ಗಾಂವಕರ ಉಪಸ್ಥಿತರಿದ್ದರು. ನಾಗಾಂಬಿಕಾ ಬಿ. ಸ್ವಾಗತಿಸಿ, ವರದಿ ವಾಚಿಸಿದರು. ವೆಂಕಟೇಶ ಬಿ. ಗೌಡ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಮೂರ್ತಿ ಪಟಗಾರ ವಂದಿಸಿದರು.