ರಾಜ್ಯ ಕಿತ್ತೂರು ರಾಣಿ ಚನ್ನಮ್ಮ ಉತ್ಸವ ಸಮಿತಿಯಿಂದ ನವೆಂಬರ್‌ 22ರಂದು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸುರೇಶ ಬಿರಾದಾರ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಕಿತ್ತೂರು ರಾಣಿ ಚನ್ನಮ್ಮ ಉತ್ಸವ ಸಮಿತಿಯಿಂದ ನವೆಂಬರ್‌ 22ರಂದು ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಹಾಗೂ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಸುರೇಶ ಬಿರಾದಾರ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭವಾಗುವ ಭವ್ಯ ಮೆರವಣಿಗೆಯು ಗಾಂಧಿಚೌಕ್, ಬಸವೇಶ್ವರ ವೃತ್ತದ ಮೂಲಕ ಚನ್ನಮ್ಮ ವೃತ್ತಕ್ಕೆ ಮುಕ್ತಾಯಗೊಳ್ಳಲಿದೆ. ಬಳಿಕ ಅಲ್ಲಿಯೇ ಸಾರ್ವಜನಿಕ ಸಭೆ ನಡೆಯಲಿದೆ. ಮೆರವಣಿಗೆಯಲ್ಲಿ ಚನ್ನಮ್ಮಳ ವೇಷಧಾರಿಗಳು, 10 ಸೈನಿಕರು, 11 ಕುದುರೆಗಳ ಸವಾರಿ ಹಾಗೂ 30 ಮಹಿಳೆಯರಿಂದ ಡೊಳ್ಳು ಕುಣಿತ ಸೇರಿದಂತೆ ವಿವಿಧ ಆಕರ್ಷಣೆಗಳು ಇರಲಿವೆ. ಮೆರವಣಿಗೆ ಮುನ್ನ ಚನ್ನಮ್ಮ ವೃತ್ತದಿಂದ 20 ಬೈಕರ್‌ಗಳು ಹಾಗೂ 10 ತೆರೆದ ಜೀಪ್‌ಗಳಲ್ಲಿ ಮಹಿಳೆಯರ ನೇತೃತ್ವದಲ್ಲಿ ರ್‍ಯಾಲಿ ನಡೆಯಲಿದೆ ಎಂದು ವಿವರಿಸಿದರು.

ರಾಣಿ ಚನ್ನಮ್ಮಳ ಹೋರಾಟ ಮತ್ತು ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸುವ ಜತೆಗೆ ನಾಡಿಗೆ ಒಗ್ಗಟ್ಟಿನ ಸಂದೇಶ ಸಾರುವುದು ಉತ್ಸವದ ಮುಖ್ಯ ಉದ್ದೇಶ. ಮುಂದಿನ ದಿನಗಳಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸಂಸ್ಕೃತಿ ಉತ್ಸವ ಆಯೋಜಿಸುವ ಯೋಜನೆಯಿದ್ದು, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಹಾಗೂ ಪ್ರತಿಭಾವಂತರಿಗೆ ಪುರಸ್ಕಾರ, ಕೃಷಿಕರಿಗೆ ಉಪನ್ಯಾಸ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.ನಾಳೆ ಪೂರ್ವಭಾವಿ ಸಭೆ

ಕಾರ್ಯಕ್ರಮದ ರೂಪುರೇಷಗಳ ಕುರಿತು ನ.19ರಂದು ಸಂಜೆ 5ಕ್ಕೆ ನಗರದ ಶಾಂತಿನಿಕೇತನ ಸಿಬಿಎಸ್‌ಇ ಶಾಲೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ. ಎಲ್ಲ ಸಮಾಜಗಳ ಮುಖಂಡರು ಹಾಗೂ ಬಾಂಧವರು ಸಭೆಯಲ್ಲಿ ಭಾಗವಹಿಸಿ ಸಲಹೆ, ಸೂಚನೆ ನೀಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಸಮಿತಿಯ ಪ್ರಧಾನ ಕಾರ್ಯದರ್ಶಿ ಹೊನ್ನಮಲ್ಲ ಸಾರವಾಡ ಮಾತನಾಡಿ, ನಾಡಿನ ನೆಲ, ಜಲದ ರಕ್ಷಣೆಗಾಗಿ ಹೋರಾಡಿದ ಎಲ್ಲ ಹೋರಾಟಗಾರರು ಹಾಗೂ ಮಹಾತ್ಮರನ್ನು ಗೌರವಿಸುವ ಕಾರ್ಯವಾಗಬೇಕು. ಈ ನಿಟ್ಟಿನಲ್ಲಿ ಚನ್ನಮ್ಮ ಅವರ ಹೋರಾಟಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಉತ್ಸವ ಆರಂಭಿಸಲಾಗಿದೆ. ಇದರಲ್ಲಿ ಸರ್ವ ಜನಾಂಗದ ನಾಯಕರು ಭಾಗವಹಿಸಲಿದ್ದಾರೆ. ಕಳೆದ ವರ್ಷ ಸಮಾಜದ 470ಕ್ಕೂ ಅಧಿಕ ಪ್ರತಿಭಾವಂತರನ್ನು ಪುರಸ್ಕರಿಸಲಾಗಿತ್ತು. ಮುಂದಿನ ದಿನಗಳಲ್ಲಿಯೂ ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಉತ್ಸವ ಸಮಿತಿ ಪದಾಧಿಕಾರಿಗಳಾದ ಅಶೋಕ ಪಾಟೀಲ, ಬಿ.ಎಂ.ಬಿರಾದಾರ, ಬಸವರಾಜ ಕಳಸಗೊಂಡ, ಅಶೋಕ ಬಿರಾದಾರ, ಎಂ.ಎಂ.ಪಾಟೀಲ ಹಾಗೂ ಶಂಕರ ಸೋಂಪುರ ಉಪಸ್ಥಿತರಿದ್ದರು.