ಬೈಲಹೊಂಗಲದಲ್ಲಿಯೂ ಕಿತ್ತೂರು ಉತ್ಸವ ಆಯೋಜಿಸಿ

| Published : Oct 18 2025, 02:02 AM IST

ಬೈಲಹೊಂಗಲದಲ್ಲಿಯೂ ಕಿತ್ತೂರು ಉತ್ಸವ ಆಯೋಜಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಬೈಲಹೊಂಗಲ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಇದ್ದು, ಇಲ್ಲಿ ಉತ್ಸವ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸದಿರುವುದು ಸರಿಯಲ್ಲ

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಕಿತ್ತೂರು ಉತ್ಸವ ಅಂಗವಾಗಿ ಬೈಲಹೊಂಗಲದಲ್ಲಿಯೂ ವೀರರಾಣಿ ಚನ್ನಮ್ಮಾಜಿ ಸಮಾಧಿ ಸ್ಥಳದಲ್ಲಿಯೂ ಪ್ರತಿ ವರ್ಷ ಉತ್ಸವ ಕಾರ್ಯಕ್ರಮವನ್ನು ನಡೆಸುವಂತೆ ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಆಗ್ರಹಿಸಿದರು. ತಮ್ಮ ನೇತೃತ್ವದಲ್ಲಿ ಪುರಸಭೆ ಸರ್ವ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಗುರುವಾರ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.

ನಗರದ ವೀರರಾಣಿ ಕಿತ್ತೂರು ಚನ್ನಮ್ಮ ಸಮಾಧಿಯ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ, ಕಿತ್ತೂರು ಉತ್ಸವದರೊಳಗೆ ಉದ್ಘಾಟಿಸುವಂತೆ ಹಾಗೂ ಐತಿಹಾಸಿಕ ಸ್ಥಳವನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಣೆ ಮಾಡುವಂತೆ, ಇಲ್ಲಿಯೂ ಉತ್ಸವ ನಡೆಸುವಂತೆ ಆಗ್ರಹಿಸಿದರು. ಬೈಲಹೊಂಗಲ ಪಟ್ಟಣದಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮನ ಸಮಾಧಿ ಇದ್ದು, ಇಲ್ಲಿ ಉತ್ಸವ ಅಂಗವಾಗಿ ಯಾವುದೇ ಕಾರ್ಯಕ್ರಮ ನಡೆಸದಿರುವುದು ಸರಿಯಲ್ಲ. ಸಮಾಧಿಗೆ ಗೌರವ ಸಮರ್ಪಿಸುವುದು ಉತ್ಸವದ ಭಾಗವಾಗಿದೆ. ಜಿಲ್ಲಾಡಳಿತ ಇದನ್ನು ಗಮನಿಸಬೇಕೆಂದರು.

ಕಿತ್ತೂರು ಪ್ರಾಧಿಕಾರ ಇಲಾಖೆಯ ಕೆಆರ್‌ಐಡಿಎಲ್ ವತಿಯಿಂದ ₹4.5 ಕೋಟಿ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಚನ್ನಮ್ಮನ ಸಮಾಧಿ ಸ್ಥಳದ ಸುತ್ತ ಮುತ್ತಲಿನ ವಿನ್ಯಾಸ, ಉದ್ಯಾನವನ, ಕಿತ್ತೂರು ಸಂಸ್ಥಾನದ ಸಮಗ್ರ ಇತಿಹಾಸ ಸಾರುವ ರೂಪಕಗಳು, ಗ್ಲಾಸ್‍ಹೌಸ್, ವಸ್ತು ಸಂಗ್ರಹಾಲಯ ಹಾಗೂ ಸುತ್ತಮುತ್ತಲಿನಲ್ಲಿ ವಿದ್ಯುತ್ ದ್ವೀಪಗಳು ಹೀಗೆ ಸಾಕಷ್ಟು ಕಾಮಗಾರಿಗಳು ಒಂದು ವರ್ಷದಿಂದ ನಡೆಯುತ್ತಿವೆ. ಸ್ವಾತಂತ್ರ್ಯ ಹೋರಾಟಗಾರರು, ಸಾರ್ವಜನಿಕರು, ರೈತರು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಅಭಿಮಾನಿಗಳು, ಸುತ್ತಮುತ್ತಲಿನ ಸಾರ್ವಜನಿಕರು ಮತ್ತು ಪ್ರವಾಸಿಗರು ಇದೇ ತಿಂಗಳು ನಡೆಯುವ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಚನ್ನಮ್ಮ ಸಮಾಧಿಯ ಎಲ್ಲ ಅಭಿವೃದ್ಧಿ ಕಾಮಗಾರಿ ಮತ್ತು ರೂಪಕಗಳನ್ನು ಉದ್ಘಾಟನೆಯನ್ನು ಕೈಗೊಳ್ಳಬೇಕೆಂದು ಪುರಸಭೆಯ ಅಧ್ಯಕ್ಷರ, ಸರ್ವ ಸದಸ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಕಾಮಗಾರಿಗಳು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಇಲಾಖೆಯ ವ್ಯಾಪ್ತಿಗೆ ಬರುವ ಕಾರಣ ಸದರಿ ಅಭಿವೃದ್ಧಿ ಕಾಮಗಾರಿ ತ್ವರಿತವಾಗಿ ಮುಗಿಸಿ ಕಿತ್ತೂರು ಉತ್ಸವದ ಒಳಗೆ ಉದ್ಘಾಟಿಸಲು ಅಗತ್ಯ ಕ್ರಮವಹಿಸಬೇಕೆಂದು ಒತ್ತಾಯಿಸಿದರು.

ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ ಮಾತನಾಡಿ, ಕಿತ್ತೂರು ಉತ್ಸವ-2025ನ್ನು ಇದೇ ತಿಂಗಳು 23, 24, 25ರಂದು ಕಿತ್ತೂರಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಯದ ಅಭಾವ ಇರುವುದರಿಂದ ಮತ್ತು ಬೈಲಹೊಂಗಲ ನಗರದ ಸಾರ್ವಜನಿಕರು ಪ್ರತಿಭಟನೆ ಹಮ್ಮಿಕೊಳ್ಳುವ ಮುಂಚಿತವಾಗಿಯೇ ಐಕ್ಯ ಸ್ಥಳದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲು ಹಾಗೂ ಕಿತ್ತೂರು ಉತ್ಸವ ನಿಮಿತ್ತ ಬೈಲಹೊಂಗಲದಲ್ಲಿಯೂ ಚನ್ನಮ್ಮಾಜಿ ಉತ್ಸವ ನಡೆಸಬೇಕೆಂದರು.

ನೇಗಿಲಯೋಗಿ ರೈತ ಸೇವಾ ಸಂಘದ ಜಿಲ್ಲಾಧ್ಯಕ್ಷ ಶಂಕರ ಬೋಳನ್ನವರ, ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ಪ್ರವೀಣ ಮೂಗಿ, ನಿವೃತ್ತ ನೌಕರರ ಸಂಘದ ಮಹಾಬಳೇಶ್ವರ ಬೋಳನ್ನವರ ಮಾತನಾಡಿ, ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮಾಜಿಯವರ ಐಕ್ಯಸ್ಥಳ ಅಭಿವೃದ್ಧಿ ಮತ್ತು ಅಲ್ಲಿನ ಉದ್ಯಾನವನದಲ್ಲಿ ಚನ್ನಮ್ಮಾಜಿಯವರ ಜೀವನ ಚರಿತ್ರೆ ಸಾರುವ ರೂಪಕಗಳನ್ನು ಅಳವಡಿಸುವ ಕಾಮಗಾರಿಯನ್ನು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಕಳೆದ 2 ವರ್ಷದಿಂದ ಕೈಗೊಂಡು, ಪೂರ್ಣಗೊಳಿಸಿ ಹಲವಾರು ತಿಂಗಳುಗಳು ಕಳೆದರೂ ಕೂಡಾ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸದಿರುವುದು ವಿಷಾದದ ಸಂಗತಿ. ಇದರಿಂದ ಪ್ರವಾಸಿಗರು, ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಈಗ ಕಿತ್ತೂರು ಉತ್ಸವ-2025ರ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇರುವುದರಿಂದ ಶೀಘ್ರ ನವೀಕೃತ ಐತಿಹಾಸಿಕ ಸ್ಥಳದ ಉದ್ಘಾಟನೆ ಮಾಡಿ, ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷ ಬುಡ್ಡೇಸಾಬ ಶೀರಸಂಗಿ, ಸದಸ್ಯರಾದ ಅರ್ಜುನ ಕಲಕುಟಕರ, ಪ್ರಕಾಶ ಕೊಟಬಾಗಿ, ಮಲ್ಲೇಶಪ್ಪ ಹೊಸಮನಿ, ರೈತ ಸಂಘದ ಮುಖಂಡ ಮಲ್ಲಿಕಾರ್ಜುನ ಹುಂಬಿ, ರಾಜು ಸೊಗಲ, ಶಿವಾನಂದ ಬಡ್ಡಿಮನಿ, ಅದೃಶ್ಯಪ್ಪ ಹುಚ್ಚನ್ನವರ ಸೇರಿದಂತೆ ಅನೇಕರು ಇದ್ದರು.