ಒಗ್ಗಟ್ಟಿನಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಿ: ನಾಗನಗೌಡ

| Published : Nov 11 2025, 02:15 AM IST

ಸಾರಾಂಶ

ನಮ್ಮ ಮಕ್ಕಳಿಗೆ ಇತಿಹಾಸವನ್ನು ತಿಳಿಸುವ ಹಾಗೂ ಜಾಗೃತಿಯನ್ನು ಉಂಟು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಡೂರು: ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ನ.24ರಂದು ಆಚರಿಸುತ್ತಿದ್ದು, ಪ್ರತಿಯೊಬ್ಬರು ಸಹ ಭಾಗಿಯಾಗುವ ಮೂಲಕ ಒಗ್ಗಟ್ಟಿನಿಂದ ಜಯಂತಿಯನ್ನು ಆಚರಿಸಬೇಕು ಎಂದು ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ನಿಕಟಪೂರ್ವ ಅಧ್ಯಕ್ಷ ಬಿ. ನಾಗನಗೌಡ ತಿಳಿಸಿದರು.

ಸಂಡೂರು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ತಾಲೂಕು ಘಟಕದಿಂದ ಬಿಕೆಜಿ ಕಚೇರಿಯ ಅವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಣಿ ಚೆನ್ನಮ್ಮ ಜಯಂತಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ಮಕ್ಕಳಿಗೆ ಇತಿಹಾಸವನ್ನು ತಿಳಿಸುವ ಹಾಗೂ ಜಾಗೃತಿಯನ್ನು ಉಂಟು ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿಯೊಬ್ಬರೂ ಸಹ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಸಮಾಜದ ಜಿಲ್ಲಾಧ್ಯಕ್ಷ ಬೊಪ್ಪಕಾನ್ ಕುಮಾರಸ್ವಾಮಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ. ಯುವಕರ ಹಾಗೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕಾಗಿದೆ. ಅದಕ್ಕೆ ವಿನೂತನವಾದ ಕಾರ್ಯಕ್ರಮ ಕೈಗೊಳ್ಳಬೇಕು ಎಂದರು.

ಸಮಾಜದ ತಾಲೂಕು ಅಧ್ಯಕ್ಷ ಗಡಾದ ರಮೇಶ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯಂದು ಪ್ರಮುಖವಾಗಿ 501 ಕುಂಭ ಮೆರವಣಿಗೆ, ಕಲಾ ತಂಡಗಳು, ಕಿತ್ತೂರು ರಾಣಿ ಚನ್ನಮ್ಮನ ವೇಷಧಾರಿಗಳು, ಕೋಲಾಟ ಹೀಗೆ ಹಲವೂ ರೀತಿಯ ಸಾಂಸ್ಕೃತಿಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಮಾಜದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸುವುದು, ಗಣ್ಯರಿಂದ ವಿಶೇಷವಾದ ಚೆನ್ನಮ್ಮಾಜಿಯ ವಿಷಯ ಪ್ರಸ್ತುತ ಪಡಿಸುವುದು, ಚೆನ್ನಮ್ಮಾಜಿಯ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು ಎಲ್ಲರೂ ಭಾಗಿಯಾಗುವ ಮೂಲಕ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಬನ್ನಿಹಟ್ಟಿಯ ಮಹೇಶ್, ತಾರಾನಗರದ ಬಸೆಟ್ಟಿ ಕುಮಾರಸ್ವಾಮಿ, ತಾಳೂರಿನ ಮೇಘನಾಥ, ಗೌರಣ್ಣ, ಸುಶೀಲಾನಗರದ ಸಕ್ರಪ್ಪ, ಗೌರವಾಧ್ಯಕ್ಷ ಮೇಲು ಸೀಮೆ ಶಂಕ್ರಪ್ಪ, ಕೆರೆನಹಳ್ಳಿಯ ಗುರುಬಸವರಾಜ, ಮಹಿಳಾ ಘಟಕದ ಅಧ್ಯಕ್ಷೆ ಅರುಂಧತಿ, ಇತರ ಗ್ರಾಮಗಳಿಂದ ಅಗಮಿಸಿ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದ ಕಾರ್ಯದರ್ಶಿ ಬಸವರಾಜ ಬಣಕಾರ ಕಾರ್ಯಕ್ರಮ ನಿರೂಪಿಸಿದರು.

ಸಂಡೂರಿನ ಬಿಕೆಜಿ ಕಚೇರಿಯ ಆವರಣದಲ್ಲಿ ಸೋಮವಾರ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ತಾಲೂಕು ಘಟಕದಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಪೂರ್ವಭಾವಿ ಸಭೆ ಜರುಗಿತು.