ಕನ್ನಡ ನಾಡಿನ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದು ಕಿತ್ತೂರು ರಾಣಿ ಚೆನ್ನಮ್ಮ

| Published : Oct 24 2024, 12:35 AM IST

ಕನ್ನಡ ನಾಡಿನ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದು ಕಿತ್ತೂರು ರಾಣಿ ಚೆನ್ನಮ್ಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿ ಚೆನ್ನಮ್ಮ ಭಾರತ ದೇಶದಲ್ಲಿ ಎಲ್ಲರ ಮನಸನ್ನು ಗೆದ್ದಂತಹ ಅಪ್ರತಿಮ ಹೋರಾಟಗಾರ್ತಿ, ಇತಿಹಾಸದಲ್ಲಿಯೇ ಮಹಿಳೆಯರಲ್ಲಿ ಮಂಚೂಣಿಯಲ್ಲಿರುವ ಹೆಸರು ಇವರದು. ಚೆನ್ನಮ್ಮ ಅವರು ಬ್ರಿಟಿಷರಿಗೆ ನಿಮಗೇಕೆ ಕೊಡಬೇಕು ಕಪ್ಪ ಎಂಬ ಸವಾಲಿನ ಮಾತನ್ನು ನೆನಪಿಸುತ್ತಾ ನಮ್ಮ ನಾಡಿನ ಮಹಿಳೆಯರು ಹಾಗೂ ಪುರುಷರಲ್ಲಿ ದೇಶ ಭಕ್ತಿಯನ್ನು ಹಚ್ಚಿ, 128 ವರ್ಷಗಳ ಮುಂಚೆಯೇ ಸ್ವಾತಂತ್ರ್ಯದ ಕಿಚ್ಚನ್ನು ಬೆಳಗಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ರಾಣಿ ಚೆನ್ನಮ್ಮ ಅವರು ಕನ್ನಡ ನಾಡಿನ ಹೆಸರನ್ನು ಭೂಗೋಳದಲ್ಲಿ ಅವಿಸ್ಮರಣೀಯ ಮಾಡಿದ ವೀರ ಮಹಿಳೆ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್ ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ, ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಇಂದು ನಾವು ಇತಿಹಾಸವನ್ನು ನೆನಪಿಸಿಕೊಳ್ಳುವ ಪ್ರಮುಖವಾದ ದಿನ. ಚೆನ್ನಮ್ಮ ಎಂಬ ಹೆಸರನ್ನು ಕೇಳಿದಾಕ್ಷಣ ಎಲ್ಲರಲ್ಲೂ ಮೈ ರೋಮಾಂಚನಗೊಳಿಸುವಂತಹ ಶಕ್ತಿ ಎಂದರು.

ರಾಣಿ ಚೆನ್ನಮ್ಮ ಭಾರತ ದೇಶದಲ್ಲಿ ಎಲ್ಲರ ಮನಸನ್ನು ಗೆದ್ದಂತಹ ಅಪ್ರತಿಮ ಹೋರಾಟಗಾರ್ತಿ, ಇತಿಹಾಸದಲ್ಲಿಯೇ ಮಹಿಳೆಯರಲ್ಲಿ ಮಂಚೂಣಿಯಲ್ಲಿರುವ ಹೆಸರು ಇವರದು. ಚೆನ್ನಮ್ಮ ಅವರು ಬ್ರಿಟಿಷರಿಗೆ ನಿಮಗೇಕೆ ಕೊಡಬೇಕು ಕಪ್ಪ ಎಂಬ ಸವಾಲಿನ ಮಾತನ್ನು ನೆನಪಿಸುತ್ತಾ ನಮ್ಮ ನಾಡಿನ ಮಹಿಳೆಯರು ಹಾಗೂ ಪುರುಷರಲ್ಲಿ ದೇಶ ಭಕ್ತಿಯನ್ನು ಹಚ್ಚಿ, 128 ವರ್ಷಗಳ ಮುಂಚೆಯೇ ಸ್ವಾತಂತ್ರ್ಯದ ಕಿಚ್ಚನ್ನು ಬೆಳಗಿಸಿದರು. ಯಾವುದೇ ಒಂದು ಕೆಲಸ ಅಥವಾ ಸವಾಲು ತೆಗೆದುಕೊಳ್ಳುವಾಗ ಹೆಣ್ಣು ಮಕ್ಕಳಿಗೆ ಸ್ಫೂರ್ತಿ ಕೊಡುವ ಶಕ್ತಿ ಈಕೆಯದ್ದು. ಬುದ್ಧ, ಬಸವವಣ್ಣ ಅವರ ಹಾದಿಯಲ್ಲಿ ನಮ್ಮ ದೇಶದ ಕೀರ್ತಿ ಪತಾಕೆ ಆರಿಸುವಲ್ಲಿ ಇವರ ಕೊಡುಗೆಯನ್ನು ಅಪಾರ ಎಂದು ತಿಳಿಸಿದರು.

ವಿಧಾನ ಪರಿಷತ್ತಿನ ಸದಸ್ಯ ಸಿ.ಎನ್. ಮಂಜೇಗೌಡ ಮಾತನಾಡಿ, ಪ್ರಸ್ತುತ ಕಾಲಮಾನದಲ್ಲಿ ಇತಿಹಾಸ ತಿಳಿದುಕೊಳ್ಳವುದು ಪ್ರತಿಯೊಬ್ಬರ ಕರ್ತವ್ಯ. ಏಕೆಂದರೆ ಝಾನ್ಸಿರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಬಸವಣ್ಣ ಇವರೆಲ್ಲರೂ ತಮ್ಮ ಪ್ರಾಣವನ್ನು ದೇಶದ ಏಳಿಗೆಗೆ, ಸ್ವಾತಂತ್ರ್ಯಕ್ಕಾಗಿ ಹಾಗೂ ನಾಡಿನ ರಕ್ಷಣೆಗಾಗಿ ಬಲಿದಾನ ಮಾಡಿದಂತಹ ಮಹಾನ್ ವ್ಯಕ್ತಿಗಳಾಗಿರುತ್ತಾರೆ. ಇಂತಹ ಮಹಾನ್ ದಾರ್ಶನಿಕರನ್ನು ನಾವು ಸ್ಮರಿಸಿಕೊಳ್ಳುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು. ಬದುಕು ಬದುಕಾಗಬೇಕಾದರೆ, ಬದುಕಿ ಹೋದಂತಹ ಇತಿಹಾಸವನ್ನು ನಾವು ತಿಳಿದುಕೊಳ್ಳಬೇಕು ಎಂದು ಆಗ ನಮ್ಮ ಬದುಕಿಗೆ ಒಂದು ಸಾರ್ಥಕತೆ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಪ್ರದೀಪ್ ಕುಮಾರ್ ಹೆಬ್ರಿ ಮಾತನಾಡಿ, ನಾವೆಷ್ಟು ನಮ್ಮ ದೇಶ, ಭಾಷೆಯ ಬಗ್ಗೆ ಪ್ರಾಮಾಣಿಕತೆ ಹಾಗೂ ಛಲ ಅಳವಡಿಸಿಕೊಂಡಿದ್ದೇವೆ ಎಂಬ ಚಿಂತೆಯು ಕಿತ್ತೂರು ರಾಣಿ ಚೆನ್ನಮ್ಮನ ವಿಜಯೋತ್ಸವದ ಈ ವೇಳೆ ಸ್ಮರಿಸಿಕೊಳ್ಳಬೇಕು. ಈ ನಾಡು ಅನ್ಯರ ಪಾಲಾಗದೆ ನಮಗೇ ಉಳಿಯಬೇಕೆಂಬ ದಿಟ್ಟ ಕನಸನ್ನು ಇಟ್ಟುಕೊಂಡು ಹೋರಾಟ ನಡೆಸಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಈಕೆಯ ಬದುಕು, ಹೋರಾಟ ಅನನ್ಯ. ಅವರ ದೇಶಪ್ರೇಮ ಎಲ್ಲರಿಗೂ ಅನುಕರಣೀಯ ಎಂದರು.

ನಾಡಿನ ಜನರನ್ನು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಹುರಿದುಂಬಿಸಿ, ಕನ್ನಡಿಗರ ಪೌರುಷ, ಸಾಹಸ, ಸ್ವಾಭಿಮಾನ ಹೋರಾಟದ ಮೂಲಕ ತೋರ್ಪಡಿಸಿ, ಕನ್ನಡನಾಡಿನ ಉಳಿವಿಗೆ ಪ್ರಾಣವನ್ನೇ ಒತ್ತೆ ಇಟ್ಟ ಧೀರ ಮಹಿಳೆ. ಆಕೆಯ ಆಪ್ತರು ಮಾಡಿದ ಕುತಂತ್ರದ ಫಲವಾಗಿ ಮೋಸ, ವಂಚನೆಯಿಂದ ಬ್ರಿಟಿಷರ ದಾಳಿಗೆ ಚೆನ್ನಮ್ಮ ಬಲಿಯಾದರು ಎಂದು ವಿಷಾದಿಸಿದರು.

200ನೇ ಜಯಂತಿಯ ಈ ಸಂದರ್ಭದಲ್ಲಿ ನಮ್ಮ ಕೊನೆಯ ಉಸಿರು ಇರುವ ತನಕ ಈ ದೇಶಕ್ಕೆ ಯಾರೆಲ್ಲ ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೋ ಅವರನ್ನ ನಾವು ಸ್ಮರಿಸಬೇಕು. ಪ್ರತಿ ಮನೆಯಲ್ಲೂ ರಾಣಿ ಚೆನ್ನಮ್ಮನಂತಹ ಮಹಿಳೆಯರು ಹುಟ್ಟಿಬರಬೇಕೆಂಬ ಆಶಯ ವ್ಯಕ್ತಪಡಿಸಿದರು.

ಸಾನ್ನಿಧ್ಯವಹಿಸಿದ್ದ ಬಸವ ಜ್ಞಾನ ಮಂದಿರದ ಪೀಠಾಧ್ಯಕ್ಷೆ ಮಾತೆ ಬಸವಾಂಜಲಿ ದೇವಿ ಅವರು ಮಾತನಾಡಿ, ಮಹಿಳೆಯರ ಶಕ್ತಿ ಅಪರವಾಗಿದ್ದು, ಅದು ಸುಪ್ತವಾಗಿ ಅಡಗಿರುತ್ತದೆ. ಅದು ವ್ಯಕ್ತವಾಗಬೇಕಾದರೆ ಅವಕಾಶಗಳು ಅವಶ್ಯಕ. ಬ್ರಿಟಿಷರ ರಾಜ ನೀತಿಯನ್ನು ಪ್ರತಿಭಟನೆ ಮಾಡಿದಂತಹ ದೊಡ್ಡ ಹೋರಾಟಗಾರ್ತಿ ಚೆನ್ನಮ್ಮ ಎಂದರು.

ಮಹಿಳೆಯರು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಮಹಾತ್ಮಾ ಗಾಂಧೀಜಿ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸ್ವಾತಂತ್ರ್ಯದ ಹೋರಾಟಕ್ಕೆ ಕರೆ ಕೊಟ್ಟಾಗ ಸಾಕಷ್ಟು ಮಹಿಳೆಯರು ಭಾಗವಹಿಸಿದ ಕೀರ್ತಿ ಭಾರತಕ್ಕಿದೆ ಎಂದರು.

ಚೆನ್ನಮ್ಮನವರ 200 ವರ್ಷಗಳ ಸಾಧನೆಯು ನಮ್ಮ ಮಕ್ಕಳಿಗೆ ಹಾಗೂ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಮತ್ತು ದೇಶವನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಧೈರ್ಯ ತಂದುಕೊಡುವ ಸ್ಫೂರ್ತಿ ಕಿತ್ತೂರು ಚೆನ್ನಮ್ಮ ಎಂದರು.

12ನೇ ಶತಮಾನದಲ್ಲಿ ಧರ್ಮ ಮತ್ತು ವಚನ ಸಾಹಿತ್ಯದ ರಕ್ಷಣೆಗಾಗಿ ಮಹಿಳೆಯರು ಹಲವಾರು ಹೋರಾಟ ಮಾಡಿರುವುದು ನಿಜಕ್ಕೂ ಅಭಿನಂದನೀಯವಾಗಿದೆ. ನಮ್ಮ ನಾಡು, ನುಡಿ ಧರ್ಮಕ್ಕಾಗಿ ಇಂಥ ಕಾರ್ಯಕ್ರಮ ಹೆಚ್ಚೆಚ್ಚು ಆಯೋಜನೆಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ. ಸುದರ್ಶನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಸೋಮಶೇಖರ್ ಮೊದಲಾದವರು ಇದ್ದರು.