ಸಾರಾಂಶ
ಕನ್ನಡಪ್ರಭ ವಾರ್ತೆ ಚವಡಾಪುರ
ಶೈಕ್ಷಣಿಕವಾಗಿ ಹಿಂದುಳಿದ ಹಣೆಪಟ್ಟಿ ಎನ್ನುವ ಕಳಂಕ ಕಳಚಿ ಹಾಕುವ ನಿಟ್ಟಿನಲ್ಲಿ ಕೆಕೆಆರ್‌ಡಿಬಿ ಕೆಲಸ ಮಾಡುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಪ್ರಗತಿಗೆ ಕೆಕೆಆರ್‌ಡಿಬಿ ಬದ್ಧವಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್ ತಿಳಿಸಿದರು.ಅಫಜಲ್ಪುರ ತಾಲೂಕಿನ ದಣ್ಣೂರ ಗ್ರಾಮದಲ್ಲಿ 2022-23ನೇ ಸಾಲಿನ ನಬಾರ್ಡ್ ಆರ್‌ಐಡಿಎಫ್ 28 ಯೋಜನೆಯಡಿ ರು.1 ಕೋಟಿ 64 ಲಕ್ಷ ವೆಚ್ಚದ ಪ್ರೌಢಶಾಲೆ ಕಟ್ಟಡಕ್ಕೆ ಶಾಸಕ ಎಂ.ವೈ ಪಾಟೀಲ್ ಅವರೊಂದಿಗೆ ಅಡಿಗಲ್ಲು ನೇರವೇರಿಸಿ ಅವರು ಮಾತನಾಡಿದರು.
ಕೆಕೆಆರ್‌ಡಿಬಿಗೆ ರಾಜ್ಯ ಸರ್ಕಾರ 5 ಸಾವಿರ ಕೋಟಿ ಅನುದಾನ ನೀಡಿದೆ. ಈ ಅನುದಾನದಲ್ಲಿ ಶೇ.25% ಅನುದಾನವನ್ನು ಶಿಕ್ಷಣ ಕ್ಷೇತ್ರದ ಪ್ರಗತಿಗೆ ಬಳಕೆ ಮಾಡಲಾಗುತ್ತಿದೆ ಎಂದ ಅವರು, ಅಫಜಲ್ಪುರ ತಾಲೂಕಿನಲ್ಲಿ ಶಾಲಾ ಕಟ್ಟಡ, ವಸತಿ ಶಾಲೆ, ವಸತಿ ನಿಲಯಗಳ ಅಭಿವೃದ್ಧಿಗಾಗಿ ಅನುದಾನ ಬಳಕೆ ಮಾಡಲಾಗುತ್ತದೆ ಎಂದು ತಿಳಿಸಿದರು.ಕಲ್ಯಾಣ ಕರ್ನಾಟಕ ಸಾರಿಗೆ ನಿಮಗದ ಅಧ್ಯಕ್ಷ ಶಾಸಕ ಎಂ.ವೈ ಪಾಟೀಲ್ ಮಾತನಾಡಿ, ಶಾಲೆ, ವಸತಿ ನಿಲಯ, ರಸ್ತೆ, ಚರಂಡಿ, ಕುಡಿಯುವ ನೀರು, ಮೂಲಭೂತ ಸೌಕರ್ಯಗಳು ಸೇರಿದಂತೆ ಎಲ್ಲಾ ವಿಭಾಗದ ಪ್ರಗತಿಗಾಗಿ ಸರ್ಕಾರದಿಂದ ನಿರಂತರವಾಗಿ ಅನುದಾನ ಹರಿದು ಬರುತ್ತಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಸದಾ ಬದ್ದವಾಗಿದ್ದೇನೆ ಎಂದ ಅವರು ದಣ್ಣೂರ ಗ್ರಾಮದಲ್ಲಿ ನಿರ್ಮಾಣವಾಗುವ ಪ್ರೌಢಶಾಲೆ ಕಟ್ಟಡವನ್ನು ಗುಣಮಟ್ಟದಲ್ಲಿ ನಿರ್ಮಿಸಿ ಎಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.
ಪಿಆರ್‌ಇ ಇಲಾಖೆ ಎಇಇ ಬಾಬುರಾವ್ ಜ್ಯೋತಿ ಮಾತನಾಡಿ, ದಣ್ಣೂರ ಗ್ರಾಮದ ಪ್ರೌಢ ಶಾಲೆ ಕಟ್ಟಡವನ್ನು ಗುಣಮಟ್ಟದಲ್ಲಿ ನಿರ್ಮಿಸಲು ಇಲಾಖೆ ಶ್ರಮಿಸಲಿದೆ. ಅನೇಕ ಕಡೆಗಳಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಬೇರಾವುದೆ ಕಟ್ಟಡ ಕಟ್ಟಿಸಲು ನಿವೇಶನ ಸಿಗದೇ ಸಮಸ್ಯೆ ಆಗುತ್ತಿರುತ್ತದೆ. ಆದರೆ ದಣ್ಣೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡಕ್ಕಾಗಿ ದಣ್ಣೂರ ಗ್ರಾಮದ ದಿ. ಬಾಬುಸಿಂಗ್ ಕುಟುಂಬಸ್ಥರು 2 ಎಕರೆ ಭೂಮಿ ದಾನವಾಗಿ ಸರ್ಕಾರಕ್ಕೆ ನೀಡಿದ್ದಾರೆ. ಒಂದು ಅಡಿ ಜಾಗ ಬಿಟ್ಟು ಕೊಡಲು ಕೋರ್ಟು ಕಚೇರಿ ಅಲೇದಾಡುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕಾಗಿ 2 ಎಕರೆ ಜಮೀನು ದಾನವಾಗಿ ನೀಡಿದ್ದು ನಿಜಕ್ಕೂ ಮಾದರಿ ಕೆಲಸ ಎಂದರು.ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಗುರುಬಾಯಿ ಇಂಗಳಗಿ, ಸದಸ್ಯರಾದ ಮಡಿವಾಳಪ್ಪ ಜಮಖಂಡಿ, ಲೋಕೇಶ ಪಾಟೀಲ, ಮುಖಂಡರಾದ ಈರಣ್ಣಗೌಡ ಪಾಟೀಲ, ಯಲ್ಲನಗೌಡ ಪಾಟೀಲ, ರವಿರಾಜ ದುಬೆ, ಖೇಮಸಿಂಗ್ ದುಬೆ, ಪ್ರಕಾಶ ಪಟ್ಟಣ, ದತ್ತು ಮ್ಯಾಕೇರಿ, ಸೋಮಯ್ಯ ಹಿರೆಮಠ, ಪ್ರತಾಪಸಿಂಗ್ ದುಬೆ, ಸಂಗಮೇಶ ಹೆರೂರ, ಹಳ್ಯಾಳಿ ಪೂಜಾರಿ, ಬಸಣ್ಣ ನಾಯ್ಕೋಡಿ, ತುಕಾರಾಮ, ಎಸ್‌ಡಿಎಂಸಿ ಅಧ್ಯಕ್ಷ ಭೀಮಾಶಂಕರ ಪಾಟೀಲ, ಮಲ್ಲಿಕಾರ್ಜುನ ಮೇಳಕುಂದಿ, ನಿಜಾಮುದ್ದಿನ್ ಸೇರಿದಂತೆ ಶಾಲೆಯ ಮುಖ್ಯಗುರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದ್ದರು.