ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಗಿದೆಯೇ ವಿನಃ ಯಾವ ಕಲ್ಯಾಣವೂ ಆಗಿಲ್ಲ.
ಬಳ್ಳಾರಿ: ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಜಾರಿಯಾದ 371(ಜೆ) ತಿದ್ದುಪಡಿಯಿಂದ ದುಷ್ಟ ಗುತ್ತಿಗೆದಾರರು ಹಾಗೂ ಭ್ರಷ್ಟ ಅಧಿಕಾರಿಗಳಿಗೆ ಅನುಕೂಲವಾಗಿದೆಯೇ ವಿನಃ ಈ ಭಾಗದ ಪ್ರಗತಿದಾಯಿಕ ಕೆಲಸಗಳಿಗೆ ಯಾವ ಅನುಕೂಲವೂ ಆಗಿಲ್ಲ ಎಂದು ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಮುಖ್ಯಸ್ಥ ರಾಘವೇಂದ್ರ ಕುಷ್ಟಗಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಗಿದೆಯೇ ವಿನಃ ಯಾವ ಕಲ್ಯಾಣವೂ ಆಗಿಲ್ಲ. ಸಂವಿಧಾನ ತಿದ್ದುಪಡಿಯಿಂದ ಪ್ರಾದೇಶಿಕ ಅಸಮತೋಲನ ನಿವಾರಣೆಯ ಕೆಲಸವಾಗಬೇಕಿತ್ತು. ಆದರೆ ನಂಜುಡಪ್ಪ ಸಮಿತಿ ವರದಿಯ ಆಧಾರದಲ್ಲಿ ಮಂಜೂರಾದ ಸಾವಿರಾರು ಕೋಟಿ ರು. ಭ್ರಷ್ಟರ ಪಾಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು 12 ವರ್ಷಗಳಾಗಿವೆ. ಸುಮಾರು ₹16 ಸಾವಿರ ಕೋಟಿ ಈ ಭಾಗಕ್ಕೆ ಮಂಜೂರು ಮಾಡಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, 2022ರ ಸಿಎಜಿ ವರದಿಯು ಮಂಡಳಿಯಿಂದ ₹7 ಸಾವಿರ ಕೋಟಿ ದುರುಪಯೋಗವಾಗಿದೆ ಎಂದು ದಾಖಲಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ₹5 ವರ್ಷ ಸಾವಿರ ಕೋಟಿ ಪೈಕಿ ಕೇವಲ ₹800 ಕೋಟಿಗೆ ಮಾತ್ರ ಕ್ರಿಯಾ ಯೋಜನೆ ಸಲ್ಲಿಸಲಾಗಿದೆ. ಉಳಿದ ಹಣ ಬಳಕೆಯಾಗದೇ ಕೊಳೆಯುತ್ತಿದೆ. ಪ್ರೊ.ಗೋವಿಂದರಾವ್ ವರದಿ ಪ್ರಕಾರ ನಂಜುಂಡಪ್ಪ ವರದಿ ಜಾರಿ ಬಳಿಕ ಕಲ್ಯಾಣ ಕರ್ನಾಟಕದ ಮಾನವಾಭಿವೃದ್ಧಿ ಸೂಚ್ಯಂಕ ಸುಧಾರಣೆ ಬದಲು ಕುಸಿತ ಕಂಡಿದೆ. ಕಲ್ಯಾಣ ಕರ್ನಾಟಕದಲ್ಲಿ 30 ಸಾವಿರಕ್ಕೂ ಹೆಚ್ಚು ಶಿಕ್ಷ ಕರ ಹುದ್ದೆಗಳು ಖಾಲಿಯಿದ್ದು, ಇದರಲ್ಲಿ10 ಸಾವಿರದಷ್ಟು ವಿಜ್ಞಾನ ಮತ್ತು ಗಣಿತದ ಶಿಕ್ಷಕರ ಕೊರತೆಯಿದೆ. ಈ ಪ್ರದೇಶದ ಶಿಕ್ಷ ಣದ ಗುಣಮಟ್ಟ ಪಾತಾಳ ಸೇರಿದೆ. ಶಿಕ್ಷಣದ ಗುಣಮಟ್ಟ, ಶಾಲೆಗಳ ದುಸ್ಥಿತಿ ನಡುವೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರಾರಂಭಿಸುವ ನೆಪಮಾಡಿ ಕಲ್ಯಾಣ ಕರ್ನಾಟಕದ 8 ಸಾವಿರ ಸಕಾರ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆದಿದೆ. ಅಹಿಂದ ನಾಯಕರೆಂದು ಕಿರೀಟ ಹೊಂದಿರುವ ಸಿಎಂ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಭಾಗದ ಅಹಿಂದ ವರ್ಗ ಜನರನ್ನೇ ಮರೆತು ಅನ್ಯಾಯ ಮಾಡಿದ್ದಾರೆ ಎಂದು ರಾಘವೇಂದ್ರ ಕುಷ್ಟಗಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿರಿಗೇರಿ ಪನ್ನರಾಜ್, ರೈತ ಸಂಘದ ರಾಜ್ಯಾಧ್ಯಕ್ಷ ಮಾಧವರೆಡ್ಡಿ ಕರೂರು, ವೀರಣ್ಣ ಭಂಡಾರಿ, ಟಿ.ಎಂ.ಶಿವಕುಮಾರ್ ಇದ್ದರು.ಮೇ 24ಕ್ಕೆ ರಾಯಚೂರಿನಲ್ಲಿ ಸಮಾವೇಶ:
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಅನ್ಯಾಯಗಳ ವಿರುದ್ಧ ಅಸಮಾನತೆ ನಿವಾರಣೆಗಾಗಿ ಮೇ 24ರಂದು ರಾಯಚೂರಿನ ಕೊಠಾರಿ ಫಂಕ್ಷನ್ ಹಾಲ್‌ನಲ್ಲಿ 371(ಜೆ) ಹೋರಾಟಗಾರರ ಸಮಾವೇಶ ಏರ್ಪಡಿಸಲಾಗಿದೆ. ಇದರೊಂದಿಗೆ ಕಲ್ಯಾಣ ಕರ್ನಾಟಕ ಪ್ರದೇಶದ ಜನಪ್ರತಿನಿಧಿಗಳ ದುಂಡು ಮೇಜಿನ ಸಭೆ ಸಹ ಆಯೋಜಿಸಿದೆ ಎಂದು ರಾಘವೇಂದ್ರ ಕುಷ್ಟಗಿ ತಿಳಿಸಿದರು.ಕಲಬುರಗಿ ಜಿಲ್ಲೆಯ ಅಳಂದ ಶಾಸಕ ಬಿ.ಆರ್. ಪಾಟೀಲ್ ದುಂಡು ಮೇಜಿನ ಸಭೆಗೆ ಚಾಲನೆ ನೀಡಲಿದ್ದಾರೆ. ಸಚಿವ ಎನ್.ಎಸ್. ಭೋಸರಾಜು ಸೇರಿ 30ಕ್ಕೂ ಅಧಿಕ ಜನಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ವಿಕಾಸ ವೇದಿಕೆಯೆಂಬ ಹೋರಾಟದ ವೇದಿಕೆ ಸ್ಥಾಪಿಸಿ ಹೋರಾಟದ ಕರೆ ನೀಡಲು ತೀರ್ಮಾನಿಸಲಾಗಿದೆ. ಅಖಂಡ ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.