ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಭಾರತೀಯ ಪರಂಪರೆಯ ಶಿಕ್ಷಣ ಸಂಸ್ಕೃತಿಯನ್ನು ಜೀವನದ ಭಾಗವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಧ್ಯಯನ ಮಾಡುವುದರ ಜೊತೆಗೆ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಉತ್ತರ ಕರ್ನಾಟಕದ ಹೆಮ್ಮೆಯ ಕೆಎಲ್‌ಇ ಸಂಸ್ಥೆಯ ಕೊಡುಗೆ ಶ್ಲಾಘನೀಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಡಾ.ಸೋಮಶೇಖರ್ ವಾಲಿ ಹೇಳಿದರು.ನಗರದ ಕೆ.ಎಲ್.ಇ ಸಂಸ್ಥೆಯ ಬಸವ ಪ್ರಭು ಕೋರೆ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ವಾರ್ಷಿಕ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಸತತ ಅಧ್ಯಯನ, ಪರಿಶ್ರಮ, ಉತ್ತಮ ಗುರಿ, ಪ್ರಾಮಾಣಿಕ ಪ್ರಯತ್ನ ಬಲದಿಂದ ಶ್ರೇಷ್ಠ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸು ಗಳಿಸಬೇಕು. ಸಾಹಿತ್ಯ ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಬರುವ ಕಷ್ಟಗಳನ್ನು ಎದುರಿಸಿ ಗೆಲ್ಲುವ ಮನೋಭಾವ, ಹೊಸ ಅವಿಷ್ಕಾರಗಳು ತಿಳುವಳಿಕೆ, ವ್ಯವಹಾರ ಜ್ಞಾನ, ಶಿಕ್ಷಣ ಮಾನವಿಯ ಧರ್ಮ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಕೆ.ಎಲ್.ಇ ಸಂಸ್ಥೆಯ ಸಪ್ತರ್ಷಿಗಳು, ಮೂವರು ಮಹಾದಾನಿಗಳು ಮತ್ತು ಪದ್ಮಶ್ರೀ ಡಾ.ಪ್ರಭಾಕರ ಕೋರೆ ಸಾರಥ್ಯದಲ್ಲಿ ನಾಡಿನಲ್ಲಿ ಶಿಕ್ಷಣದ ಕ್ರಾಂತಿ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.ಪ್ರಾಚಾರ್ಯ ಡಾ.ಬಿ.ಜಿ.ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನಕಾರಾತ್ಮಕ ಭಾವನೆ ಬಿಟ್ಟು ಸಕಾರಾತ್ಮಕ ಚಿಂತನೆ, ಆಶಾ ಭಾವನೆ ಬೆಳೆಸಿಕೊಳ್ಳಬೇಕು. ಬಿ.ಕೆ.ಮಹಾವಿದ್ಯಾಲಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಾರ್ಷಿಕ ಚಟುವಟಿಕೆಗಳ ಯಶಸ್ವಿವಾಗಿ ಮುಗಿಸಿದ ತೃಪ್ತಿ ಎಲ್ಲರಲ್ಲೂ ಇದೆ. ವಿದ್ಯಾರ್ಥಿಗಳು ಮುಂದಿನ ಭವಿಷ್ಯ ಉಜ್ವಲವಾಗಲಿ ಬದುಕಿನ ಯಶಸ್ಸಿಗೆ ಕಾರಣರಾದ ತಂದೆ-ತಾಯಿ ಗುರು ಹಿರಿಯರ ಮಾರ್ಗದರ್ಶನ ಆಶೀರ್ವಾದ ಎಲ್ಲ ವಿದ್ಯಾರ್ಥಿಗಳ ಮೇಲೆ ಇರಲಿ ಎಂದು ತಿಳಿಸಿದರು.ಉಪ ಪ್ರಾಚಾರ್ಯ ಪ್ರೊ.ಸುಧೀರ್ ಕೋಠಿವಾಲೇ ಸ್ವಾಗತಿಸಿದರು. ಕಾಲೇಜು ಒಕ್ಕೂಟದ ಉಪಾಧ್ಯಕ್ಷೆ ಪ್ರೊ.ಎಂ.ಆರ್.ಛಾಯ ವಾರ್ಷಿಕ ವರದಿ ಮಂಡಿಸಿದರು. ಕಾಲೇಜು ಕ್ರೀಡಾ ವಿಭಾಗದ ಉಪಾಧ್ಯಕ್ಷ ಡಾ.ಎಚ್.ಈ.ಬಸವರಾಜಪ್ಪ ವಾರ್ಷಿಕ ಕ್ರೀಡಾ ಚಟುವಟಿಕೆಗಳ ವರದಿ ಓದಿದರು. ಮಹಾ ಶ್ವೇತಾ ಭೀಷ್ಠೆ ಪ್ರಾರ್ಥನೆ ಗೀತೆ ಹಾಡಿದರು. ಸಿದ್ಧಣ್ಣ ನಾಯಕ, ಪದ್ಮಶ್ರೀ ಚೌಗಲಾ ನಿರೂಪಿಸಿದರು. ಪ್ರೊ.ಜಗದೀಶ್ ಬಾರoಗಿ ಅತಿಥಿ ಪರಿಚಯಿಸಿದರು. ಐ.ಕ್ಯೂ.ಎ.ಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ ವಂದಿಸಿದರು. ಇದೇ ಸಂದರ್ಭದಲ್ಲಿ 2025-2026ನೇ ಸಾಲಿನಲ್ಲಿ ವಿಶ್ವವಿದ್ಯಾಲಯಕ್ಕೆ ರ್‍ಯಾಂಕ್ ವಿಜೇತರು, 3 ಸಂಶೋಧನಾ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಂಶೋಧನಾ ಲೇಖನ ಮಂಡಿಸಿದಕ್ಕೆ ಹಾಗೂ ನೂರಕ್ಕೆ ನೂರು ಅಂಕ ಗಳಿಸಿದ ಕಲಾ, ವಿಜ್ಞಾನ, 5 ಮತ್ತು ವಾಣಿಜ್ಯ ವಿಭಾಗದಲ್ಲಿ 17 ಮತ್ತು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪದಕಗಳೊಂದಿಗೆ ಸನ್ಮಾನ ಮಾಡಲಾಯಿತು. ಪ್ರೊ.ರಾಜೇಶ್ ನಾಯ್ಕ, ದೈಹಿಕ ನಿರ್ದೇಶಕ ಪ್ರೊ.ಪ್ರವೀಣಕುಮಾರ್ ವಾಘಮೋರೆ, ಡಾ.ಎಸ್.ಎಂ.ಪಾಟೀಲ, ಡಾ.ಸಿದ್ಧಲಿಂಗ.ಎಂ, ಪ್ರೊ. ರೋಹಿತ್ ತೇಲಿ, ಡಾ.ಲಕ್ಷ್ಮೀಕಾಂತ ನಾಯಕ, ಡಾ.ಆರ್.ರಾಮಣ್ಣ, ಪ್ರೊ.ಆನಂದ.ಆರ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.