ಮಹಾಲಿಂಗಪುರದಲ್ಲಿ ಕೆಎಲ್ಇ ಸಂಸ್ಥೆಯ ೧೧೧ನೇ ಸಂಸ್ಥಾಪನಾ ದಿನಾಚರಣೆಯನ್ನು ಸಪ್ತಋಷಿಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಕೆಎಲ್ಇ ಸಂಸ್ಥೆ ಕರ್ನಾಟಕದ ಕಿರೀಟವಿದ್ದಂತೆ. ಬೆಳಗಾವಿ ಕರ್ನಾಟಕದಲ್ಲಿ ಉಳಿಯಲು ಕೆಎಲ್ಇ ಸಂಸ್ಥೆ ಹಾಗೂ ಸಪ್ತಋಷಿಗಳ ಕೊಡುಗೆ ಮಹತ್ವದ್ದಾಗಿದೆ. ದೂರದೃಷ್ಟಿ ಮತ್ತು ಸೇವಾ ಮನೋಭಾವದಿಂದ ಸಪ್ತಋಷಿಗಳು ಈ ಸಂಸ್ಥೆಗೆ ಭದ್ರ ಬುನಾದಿ ಹಾಕಿದ್ದು, ಇಂದು ಅದು ಬೃಹತ್ ಶೈಕ್ಷಣಿಕ ಹಾಗೂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ ಎಂದು ಕೆಎಲ್ಇ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಐ. ಕುಂದಗೋಳ ಹೇಳಿದರು.ಪಟ್ಟಣದ ಕೆಎಲ್ಇ ಸಂಸ್ಥೆಯ ಅಂಗಸಂಸ್ಥೆಯಾದ ಎಸ್.ಸಿ.ಪಿ. ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಕೆಎಲ್ಇ ಸಂಸ್ಥೆಯ ೧೧೧ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಶಿಕ್ಷಕ ಎಸ್.ಎ.ಗೋಠೆ ಮಾತನಾಡಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಜವಾಬ್ದಾರಿ ಮೈಗೂಡಿಸಿಕೊಂಡವರು ಮಾತ್ರ ಸಮಾಜದಲ್ಲಿ ಶ್ರೇಷ್ಠ ಸಾಧಕರಾಗಲು ಸಾಧ್ಯ. ಇದಕ್ಕೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಉತ್ತಮ ಉದಾಹರಣೆಯಾಗಿದ್ದು, ಅವರ ಸಾಧನೆಗಳು ಬೆರಳು ಕಚ್ಚುವಂತಿವೆ ಎಂದರು.ಪ್ರಾಚಾರ್ಯ ಎನ್.ಬಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಎಲ್ಇ ಸಂಸ್ಥೆ ಸಮಾಜಕ್ಕೆ ಶಿಕ್ಷಣವೆಂಬ ಶಕ್ತಿ ಹಾಗೂ ಆರೋಗ್ಯವೆಂಬ ಭಾಗ್ಯ ಒದಗಿಸುತ್ತಿರುವ ಕಾಮಧೇನು ಇದ್ದಂತೆ ಎಂದು ಬಣ್ಣಿಸಿದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರು ಸಪ್ತಋಷಿಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಪ.ಪೂ ಕಾಲೇಜಿನ ಪ್ರಾಚಾರ್ಯ ಎಲ್.ಬಿ. ತುಪ್ಪದ, ಉಪನ್ಯಾಸಕ ಎಸ್.ವಿ. ಸಿದ್ನಾಳ, ಐಟಿಐ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಅಂಗಡಿ, ಪ್ರೌಢಶಾಲೆ ಉಪಪ್ರಾಚಾರ್ಯ ಬಿ.ಎನ್. ಅರಕೇರಿ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಮೀತ ಚಮಕೇರಿ ಸೇರಿ ಕೆಎಲ್ಇ ಸಂಸ್ಥೆಯ ಎಲ್ಲ ವಿಭಾಗಗಳ ಶಿಕ್ಷಕರು, ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಉಪನ್ಯಾಸಕ ಎಸ್.ಎಚ್. ಮೆಳವಂಕಿ ನಿರೂಪಿಸಿದರು.