ಕೆಎಂಸಿ: ಇಮ್ಯುನೊಹೆಮಾಟಾಲಜಿ ಶ್ರೇಷ್ಠತೆಯ ಕೇಂದ್ರ ಆರಂಭ

| Published : Feb 27 2024, 01:32 AM IST

ಸಾರಾಂಶ

ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಇಮ್ಯುನೊಹೆಮಾಟಾಲಜಿ (ರಕ್ತವಿಜ್ಞಾನ) ವಿಭಾಗದ ಶ್ರೇಷ್ಠತಾ ಕೇಂದ್ರವನ್ನು ಆರಂಭಿಸಲಾಗಿದೆ. ಇದೇ ಸಂದರ್ಭದಲ್ಲಿ ‘ಎಸೆನ್ಸ್ ಆಫ್ ಇಮ್ಯುನೊಹೆಮಾಟಾಲಜಿ’ ಎಂಬ ಕುರಿತು ಕಾರ್ಯಾಗಾರವನ್ನೂ ಕೂಡ ನಡೆಸಲಾಯಿತು. ಇದರಲ್ಲಿ ಆಸ್ಪತ್ರೆಯ ಸುಮಾರು 70ಕ್ಕೂ ಹೆಚ್ಚು ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ಇಮ್ಯುನೊಹೆಮಾಟಾಲಜಿ (ರಕ್ತವಿಜ್ಞಾನ) ವಿಭಾಗದ ಶ್ರೇಷ್ಠತಾ ಕೇಂದ್ರವನ್ನು ಆರಂಭಿಸಲಾಗಿದೆ. ಕಾಲೇಜಿನ ಡೀನ್ ಡಾ. ಪದ್ಮರಾಜ್ ಹೆಗ್ಡೆ ಅವರು ಈ ಶ್ರೇಷ್ಠತಾ ಕೇಂದ್ರವನ್ನು ಇತ್ತೀಚೆಗೆ ಅಧಿಕೃತವಾಗಿ ಉದ್ಘಾಟಿಸಿ, ಶುಭಹಾರೈಸಿದರು.ಇದೇ ಸಂದರ್ಭದಲ್ಲಿ ‘ಎಸೆನ್ಸ್ ಆಫ್ ಇಮ್ಯುನೊಹೆಮಾಟಾಲಜಿ’ ಎಂಬ ಕುರಿತು ಕಾರ್ಯಾಗಾರವನ್ನೂ ಕೂಡ ನಡೆಸಲಾಯಿತು. ಇದರಲ್ಲಿ ಆಸ್ಪತ್ರೆಯ ಸುಮಾರು 70ಕ್ಕೂ ಹೆಚ್ಚು ವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಸಕ್ರಿಯವಾಗಿ ಭಾಗವಹಿಸಿದ್ದರು.

ಈ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದ ಅಮೆರಿಕದ ಕ್ವಿಡೆಲ್ ಆರ್ಥೋ ಸಂಸ್ಥೆಯ ಭಾರತ-ಸಾರ್ಕ್‌ ನಿರ್ದೇಶಕ ರವಿ ಸಿನ್ಹಾ, ಭಾರತದ ಪ್ರಧಾನ ವ್ಯವಸ್ಥಾಪಕ ಕೃಷ್ಣಮೂರ್ತಿ, ಈ ಶ್ರೇಷ್ಠತಾ ಕೇಂದ್ರದ ವೈದ್ಯಕೀಯ ಸಂಶೋಧನೆ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಗೆ ಕ್ವಿಡೆಲ್ ಆರ್ಥೋ ಕಡೆಯಿಂದ ಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.ಕೇಂದ್ರದ ಸಂಯೋಜಕ ಡಾ.ಶಮೀ ಶಾಸ್ತ್ರಿ ಸ್ವಾಗತಿಸಿದರು. ಸುಧಾರಿತ ಇಮ್ಯುನೊಹೆಮಟಾಲಜಿ ಪ್ರಯೋಗಾಲಯವು ಸ್ವಯಂ ಚಾಲಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ. ಸಂಕೀರ್ಣ ಆರೋಗ್ಯ ತೊಂದರೆಗಳನ್ನು ಪರಿಹರಿಸಲು ಈ ಪ್ರಯೋಗಾಲಯವನ್ನು ವಿನ್ಯಾಸಗೊಳಿಸಲಾಗಿದೆ. ದೇಶದ ಇತರ ರಕ್ತ ಕೇಂದ್ರಗಳಿಗೆ ಈ ಅತ್ಯಾಧುನಿಕ ಸೇವೆಗಳನ್ನು ನೀಡಲು ಸಿದ್ಧವಾಗಿದೆ ಎಂದರು.ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಶ್ರೇಷ್ಠತಾ ಕೇಂದ್ರದ ಕರಪತ್ರ ಬಿಡುಗಡೆ ಮಾಡಿ, ಕೇಂದ್ರದಲ್ಲಿರುವ ಅತ್ಯಾಧುನಿಕ ಸೌಲಭ್ಯಗಳು ಮತ್ತು ಸೇವೆಗಳ ಸಮಗ್ರ ಅವಲೋಕನವನ್ನು ನೀಡಿದರು. ವಿಭಾಗದ ಸಹ ಪ್ರಾಧ್ಯಾಪಕ ಡಾ.ಗಣೇಶ್ ಮೋಹನ್ ವಂದಿಸಿದರು.