ಲಾರಿ ಕ್ಲೀನರ್‌ ಎದೆ ಸೀಳಿದ್ದ ಪೈಪ್‌ ತೆಗೆದ ಕೆಎಂಸಿಆರ್‌ಐ ವೈದ್ಯರು!

| Published : Oct 04 2024, 01:00 AM IST

ಲಾರಿ ಕ್ಲೀನರ್‌ ಎದೆ ಸೀಳಿದ್ದ ಪೈಪ್‌ ತೆಗೆದ ಕೆಎಂಸಿಆರ್‌ಐ ವೈದ್ಯರು!
Share this Article
  • FB
  • TW
  • Linkdin
  • Email

ಸಾರಾಂಶ

ಬುಧವಾರ ರಾಣಿಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕ್ಲೀನರ್‌ ಶಿರಸಿಯ ಜವಳಮಕ್ಕಿಯ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು.

ಹುಬ್ಬಳ್ಳಿ:

ಅಪಘಾತದಲ್ಲಿ ಲಾರಿ ಕ್ಲೀನರ್ ಎದೆ ಸೀಳಿದ್ದ 98 ಸೆಂ.ಮೀ. ಉದ್ದದ ಪೈಪ್ ಹೊರ ತೆಗೆಯುವಲ್ಲಿ ಇಲ್ಲಿಯ ಕೆಎಂಸಿಆರ್‌ಐ ವೈದ್ಯರು ಯಶಸ್ವಿಯಾಗಿದ್ದಾರೆ.

ವೈದ್ಯರ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ಬುಧವಾರ ರಾಣಿಬೆನ್ನೂರಿನ ಹೂಲಿಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಕ್ಲೀನರ್‌ ಶಿರಸಿಯ ಜವಳಮಕ್ಕಿಯ ದಯಾನಂದ ಶಂಕರ ಬಡಗಿ (27)ಯ ಎದೆ ಸೀಳಿ ಸರ್ವಿಸ್ ರಸ್ತೆಯ ಕಬ್ಬಿಣದ ಪೈಪ್ ಹೊರ ಬಂದಿತ್ತು. ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲವೆಂದು ಹುಬ್ಬಳ್ಳಿಯ ಕೆಎಂಸಿಆರ್‌ಐನ ತುರ್ತು ಚಿಕಿತ್ಸಾ ಘಟಕಕ್ಕೆ ಕರೆ ತರಲಾಗಿತ್ತು. ಘಟಕದ ಮುಖ್ಯಸ್ಥ ಡಾ. ನಾಗರಾಜ ಚಾಂದಿ ಅವರು ಅಪಾಯವರಿತು ತುರ್ತು ಚಿಕಿತ್ಸೆ ನೀಡಿ ಹಿರಿಯ ವೈದ್ಯರ ಗಮನಕ್ಕೆ ತಂದರು. ಶೀಘ್ರವೇ ಶಸ್ತ್ರ ಚಿಕಿತ್ಸೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಶಸ್ತ್ರ ಚಿಕಿತ್ಸಾ ವಿಭಾಗದ ಸಿ ಯುನಿಟ್ ಮುಖ್ಯಸ್ಥ ಡಾ. ರಮೇಶ ಹೊಸಮನಿ, ವಿವಿಧ ವಿಭಾಗದ ಡಾ. ವಿಜಯ ಕಾಮತ್, ಡಾ. ವಿನಾಯಕ ಬ್ಯಾಟೆಪ್ಪನವರ, ಡಾ. ವಸಂತ ತೆಗ್ಗಿನಮನಿ, ಹೃದ್ರೋಗ ಶಸ್ತ್ರಚಿಕಿತ್ಸಕ ಡಾ. ಕೋಬಣ್ಣ ಕಟ್ಟಿಮನಿ, ಡಾ. ಧರ್ಮೇಶ ಲದ್ದಡ ನೇತೃತ್ವದ ವೈದ್ಯಕೀಯ ತಂಡವು ಬುಧವಾರ ಮಧ್ಯಾಹ್ನ 2 ರಿಂದ 4.30ರ ವರೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದೆ ಎಂದು ಮಾಹಿತಿ ನೀಡಿದರು.

ಈ ಅಪಘಾತದಲ್ಲಿ ವ್ಯಕ್ತಿಯ ದೇಹದೊಳಗೆ ಹೊಕ್ಕ ಪೈಪ್‌ನಿಂದಾಗಿ ಎದೆ ಮೂಳೆ ಕೆಲವೆಡೆ ಮುರಿದಿತ್ತು. ಶ್ವಾಸಕೋಶಕ್ಕೆ ಹೆಚ್ಚಿನ ಹಾನಿಯಾಗಿತ್ತು. ಎದೆ ಹಿಂಭಾಗದಿಂದ ಹೊರಬಂದಿರುವ ಪೈಪ್‌ನೊಂದಿಗೆ ಸಣ್ಣ ಕೊಂಡಿ (ಮೊಳೆ)ಯೂ ಇತ್ತು. ಹೃದಯದ 2-3 ಸೆಂ.ಮೀ ಸನಿಹವೇ ಪೈಪ್ ಹಾದು ಹೋಗಿತ್ತು. ಇದೆಲ್ಲವನ್ನೂ ಬಹು ಎಚ್ಚರಿಕೆಯಿಂದ ನಿಭಾಯಿಸಿ 98 ಸೆಂ.ಮೀ. ಉದ್ದದ ಪೈಪ್‌ನ್ನು ಎದೆಯಿಂದ ಹೊರ ತೆಗೆಯಲಾಗಿದೆ ಎಂದು ತಿಳಿಸಿದರು.

ಡಾ. ರಮೇಶ ಹೊಸಮನಿ ಮಾತನಾಡಿ, ಯಶಸ್ವಿ ಚಿಕಿತ್ಸೆ ನಡೆಸಿದ್ದು, ಈಗ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೆರಡು ದಿನ ತೀವ್ರ ನಿಗಾ ಘಟಕದಲ್ಲಿ ಇರಲಿದ್ದಾರೆ. ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ತದನಂತರ ಡಿಸ್ಚಾರ್ಜ್ ಮಾಡಲಾಗುವುದು ಎಂದರು.

ಶುಲ್ಕರಹಿತ ಚಿಕಿತ್ಸೆ:

ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ ಹಾಗೂ ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ ಮಾತನಾಡಿ, ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ನೀಡಲಾಗಿದೆ ಎಂಬ ಸುಳ್ಳುಸುದ್ದಿಗಳು ಹರಿದಾಡಿದ್ದವು. ಆದರೆ, ನಮ್ಮ ಕೆಎಂಸಿಆರ್‌ಐನಲ್ಲಿಯೇ ವ್ಯಕ್ತಿಗೆ ಸಂಪೂರ್ಣವಾಗಿ ಶುಲ್ಕ ರಹಿತ ಚಿಕಿತ್ಸೆ ನೀಡಲಾಗಿದೆ. ರಜೆ ದಿನವೂ ನಮ್ಮ ವೈದ್ಯಕೀಯ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ ಎಂದರು.

ಈ ವೇಳೆ ಆರ್‌ಎಂಒ ಡಾ. ಸಿದ್ದೇಶ್ವರ ಕಟಕೋಳ, ಡಾ. ರಾಜಶೇಖರ ದ್ಯಾಬೇರಿ, ಡಾ. ಮಾಧುರಿ ಸೇರಿದಂತೆ ಹಲವರಿದ್ದರು.