ಸಂಡೂರಿಗೆ ಆಗಮಿಸಿದ ಕೆಎಂಇಆರ್‌ಸಿ ಮೇಲುಸ್ತುವಾರಿ ಪ್ರಾಧಿಕಾರದ ಅಧಿಕಾರಿಗಳು

| Published : Apr 02 2025, 01:00 AM IST

ಸಂಡೂರಿಗೆ ಆಗಮಿಸಿದ ಕೆಎಂಇಆರ್‌ಸಿ ಮೇಲುಸ್ತುವಾರಿ ಪ್ರಾಧಿಕಾರದ ಅಧಿಕಾರಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳ ತಂಡ ಮಂಗಳವಾರ ಸಂಡೂರಿಗೆ ಭೇಟಿ ನೀಡಿ, ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.

ಅಧಿಕಾರಿಗಳು-ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಚರ್ಚೆಕೆಎಂಇಆರ್‌ಸಿಯಲ್ಲಿ ೩೦೦೦೦ ಕೋಟಿ ಸಂಗ್ರಹಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲು ಸಂಘಟನೆಗಳ ಒತ್ತಾಯಕನ್ನಡಪ್ರಭ ವಾರ್ತೆ ಸಂಡೂರುಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗಾಗಿ ರೂಪಿಸಲಾಗಿರುವ ಕೆಎಂಇಆರ್‌ಸಿ (ಕರ್ನಾಟಕ ಗಣಿ ಪರಿಸರ ಪುನಶ್ಚೇತನ ಪ್ರಾಧಿಕಾರ)ದ ಮೇಲುಸ್ತುವಾರಿ ಪ್ರಾಧಿಕಾರದ ಸಲಹೆಗಾರ ಬಾಲಸುಬ್ರಮಣಿಯನ್, ಕೆಎಂಇಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿಜ್ಜೂರ್ ಒಳಗೊಂಡ ಅಧಿಕಾರಿಗಳ ತಂಡ ಮಂಗಳವಾರ ಸಂಡೂರಿಗೆ ಭೇಟಿ ನೀಡಿ, ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ವಿವಿಧ ಸಂಘಟನೆಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು. ಜನ ಸಂಗ್ರಾಮ ಪರಿಷತ್, ಸಮಾಜ ಪರಿವರ್ತನಾ ಸಮುದಾಯ, ರೈತ ಸಂಘ ಮುಂತಾದ ಸಂಘಟನೆಗಳ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಮಾಧವರೆಡ್ಡಿ, ಟಿ.ಎಂ. ಶಿವಕುಮಾರ, ಶ್ರೀಶೈಲ ಆಲ್ದಳ್ಳಿಯವರು ಮೇಲುಸ್ತುವಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ, ಈಗಾಗಲೇ ಕೆಎಂಇಆರ್‌ಸಿ ಬಳಿ ೩೦೦೦೦ ಕೋಟಿ ಹಣ ಸಂಗ್ರಹವಾಗಿದೆ. ಇದರಲ್ಲಿ ಗಣಿ ಬಾಧಿತ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ೮೬೪೮.೯೫ ಕೋಟಿ ವೆಚ್ಚದ ೪೦೮ ವಿವಿಧ ಯೋಜನೆಗಳಿಗೆ ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಇದರಲ್ಲಿ ಶೇ ೨೮.೫೭ ರಷ್ಟು ಮಾತ್ರ ಗಣಿ ಬಾಧಿತ ಪ್ರದೇಶದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಶೇ೭೧.೪೨ ರಷ್ಟು ಹಣ ಗಣಿ ಬಾಧಿತವಲ್ಲದ ಪ್ರದೇಶದ ಅಭಿವೃದ್ಧಿಗೆ ಬಳಸಲು ಯೋಜಿಸಲಾಗಿದೆ. ನಗರ ಪ್ರದೇಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಗಣಿ ಬಾಧಿತ ಗ್ರಾಮಾಂತರ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು. ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿ ಕುರಿತು ಯೋಜನೆ ರೂಪಿಸುವಾಗ ಸ್ಥಳ ಪರಿಶೀಲನೆ ನಡೆಸಿ, ಅಲ್ಲಿನ ವಾಸ್ತವ ಸ್ಥಿತಿಗತಿಗಳನ್ನು, ಇಲ್ಲಿನ ಜನತೆಯ ಸಾಮಾಜಿಕ, ಆರ್ಥಿಕ ಅಧ್ಯಯನ ನಡೆಸಿ, ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಬೇಕು. ಜನ ಕೇಂದ್ರಿತ ಯೋಜನೆ ರೂಪಿಸಬೇಕು. ಈಗಾಗಲೇ ಬಳ್ಳಾರಿಯಲ್ಲಿ ಕುಡಿಯುವ ನೀರು ಸರಬರಾಜಿಗಾಗಿ ೨೭೦.೬೪ ಕೋಟಿ ಹಾಗೂ ೫೫೦ ಬೆಡ್ ಆಸ್ಪತ್ರೆ ನಿರ್ಮಾಣಕ್ಕಾಗಿ ೧೨೧.೮೩ ಕೋಟಿ ವೆಚ್ಚದ ಆಸ್ಪತ್ರೆಗಳ ನಿರ್ಮಾಣಕ್ಕೆ ಕೆಎಂಇಆರ್‌ಸಿ ಅನುಮೋದನೆ ನೀಡಿದೆ. ಸಂಡೂರು ತಾಲೂಕು ಹೆಚ್ಚು ಗಣಿ ಬಾಧಿತ ತಾಲೂಕಾಗಿದೆ. ಇಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಸಂಡೂರು ತಾಲೂಕಿನ ಪರಿಸರ ಮತ್ತು ಜನ ಜೀವನ ಅಭಿವೃದ್ಧಿಗೆ ಕೆಎಂಇಆರ್‌ಸಿ ಹಣದಲ್ಲಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕು. ಇಲ್ಲಿ ಉತ್ತಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಇಲ್ಲಿನ ಕೆರೆಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದು ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಜನ ಜೀವನ ಮಟ್ಟದ ಸುಧಾರಣೆ, ಪರಿಸರ ಸಂರಕ್ಷಣೆ ಕುರಿತಂತೆ ಯೋಜನೆ ರೂಪಿಸಿ, ಕಾರ್ಯಗತಗೊಳಿಸಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಮೇಲುಸ್ತುವಾಗಿ ಪ್ರಾಧಿಕಾರದ ಸಲಹೆಗಾರ ಬಾಲಸುಬ್ರಮಣಿಯನ್, ಜನತೆ ತಮ್ಮ ಬೇಡಿಕೆಗಳನ್ನು ಅಧಿಕೃತವಾಗಿ, ಬರಹ ರೂಪದಲ್ಲಿ ನೀಡಿದರೆ, ಅವುಗಳ ಬಗ್ಗೆ ಚರ್ಚಿಸಿ ಕ್ರಮಕೈಗೊಳ್ಳಲು ಅನುಕೂಲವಾಗುತ್ತದೆ. ಗಣಿ ಬಾಧಿತ ಪ್ರದೇಶದ ಜನರ ಮತ್ತು ಪರಿಸರದ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕೆಎಂಇಆರ್‌ಸಿ ಅಧಿಕಾರಿಗಳ ತಂಡ ಬುಧವಾರ ಹಾಗೂ ಗುರುವಾರ ತಾಲ್ಲೂಕಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಇಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಲಿದೆ ಎಂದು ತಿಳಿದು ಬಂದಿದೆ.ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ತಹಶೀಲ್ದಾರ್ ಜಿ. ಅನಿಲ್‌ಕುಮಾರ್, ಲೋಕೋಪಯೋಗಿ ಇಲಾಖೆಯ ಎಇಇ ಕೃಷ್ಣಾನಾಯ್ಕ್, ವಿವಿಧ ಸಂಘಟನೆಗಳ ಮುಖಂಡರಾದ ಸೋಮಪ್ಪ, ಜಿ.ಕೆ. ನಾಗರಾಜ, ಮೂಲಿಮನೆ ಈರಣ್ಣ, ಚಂದ್ರಶೇಖರ, ಸುಭಾನ್, ಖಾದರ್ ಬಾಷ ಉಪಸ್ಥಿತರಿದ್ದರು.