ಗಣೇಶಮೂರ್ತಿ ಮೆರವಣಿಗೆಯಲ್ಲಿ ಚಾಕು ಇರಿತ: ನಾಲ್ವರಿಗೆ ಗಾಯ

| Published : Sep 19 2024, 01:55 AM IST

ಗಣೇಶಮೂರ್ತಿ ಮೆರವಣಿಗೆಯಲ್ಲಿ ಚಾಕು ಇರಿತ: ನಾಲ್ವರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ತಡ ರಾತ್ರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಅಪರಿಚಿತರ ಗುಂಪೊಂದು ಯುವಕರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಬೆಳಗಾವಿಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ತಡ ರಾತ್ರಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಅಪರಿಚಿತರ ಗುಂಪೊಂದು ಯುವಕರ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಮೂವರು ಯುವಕರು ಗಾಯಗೊಂಡಿದ್ದಾರೆ. ಈ ಘಟನೆಯಿಂದ ಬೆಳಗಾವಿಯಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಮಾಜ ಕಲ್ಯಾಣ ವಸತಿ ನಿಲಯದ ವಿದ್ಯಾರ್ಥಿಗಳಾದ ಪ್ರವೀಣ್ ಗುಂಡ್ಯಾಗೋಳ, ದರ್ಶನ್ ಪಾಟೀಲ ಮತ್ತು ಸತೀಶ ಪೂಜಾರಿ ಚಾಕು ಇರಿತದಿಂದ ಗಾಯಗೊಂಡವರು. ಚಿಕಿತ್ಸೆಗಾಗಿ ಈ ಮೂವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಗರದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಸಡಗರ, ಸಂಭ್ರಮದಿಂದ ನಡೆದಿತ್ತು. ಅಪರಿಚಿತರ ಗುಂಪು ಸಣ್ಣ ಪುಟ್ಟ ವಿಚಾರವಾಗಿ ಯುವಕರ ಜೊತೆಗೆ ಜಗಳ ತೆಗೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಯುವಕರನ್ನು ಅಲ್ಲಿಂದ ಚದುರಿಸಿದರು.ಆದರೆ, ಚನ್ನಮ್ಮ ವೃತ್ತದಲ್ಲಿ ಚಲನಚಿತ್ರ ಗೀತೆಗಳ ತಕ್ಕಂತೆ ಯುವಕರು ಹೆಜ್ಜೆ ಹಾಕುತ್ತಿದ್ದರು. ಈ ಸಂದರ್ಭದಲ್ಲೇ ಅಪರಿಚಿತ ಗುಂಪು ಅವರ ಮೇಲೆ ಚಾಕುವಿನಿಂದ ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಯುವಕರ ಹೊಟ್ಟೆ, ಬೆನ್ನು, ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿಯಲಾಗಿದೆ. ಚಾಕುವಿನಿಂದ ಇರಿದು ಬೈಕ್‌ ಮೇಲೆ ಪರಾರಿಯಾಗುತ್ತಿದ್ದ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಚರ್ಚ್ ಗಲ್ಲಿಯ ಯುವಕರ ಗ್ಯಾಂಗ್‌ ಈ ಕೃತ್ಯ ಎಸಗಿದ್ದು, ವೈಯಕ್ತಿಕ ಕಾರಣದಿಂದ ಕೃತ್ಯ ನಡೆದಿದೆ. ಇವರೆಲ್ಲರೂ ಗಾಂಜಾ ಮತ್ತಿನಲ್ಲಿ ಚಾಕು ಇರಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಗಂಭೀರ ಗಾಯಗೊಂಡಿರುವ ಗುಂಡ್ಯಾಗೋಳನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕುವಿನಿಂದ ದಾಳಿ ಮಾಡಿದ ಘಟನೆ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನಗರದಲ್ಲಿ ಉದ್ನಿಗ್ವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಡುವೆ ಪೊಲೀಸರು ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗ ಬದಲಿಸಿರುವುದು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳ ಆಕ್ರೋಶಕ್ಕೆ ಕಾರಣವಾಯಿತು. ಚವ್ಹಾಟ ಗಲ್ಲಿಯ ಸಾರ್ವಜನಿಕ ಗಣೇಶ ಮೂರ್ತಿಯನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸರು ತಡೆದರು. ಗಣೇಶ ಮೂರ್ತಿಯನ್ನು ಸ್ಥಳದಲ್ಲೇ ಬಿಟ್ಟು ಹೊರಟುಹೋದರು. ಪೊಲೀಸರ ಕ್ರಮ ಖಂಡಿಸಿ ಗಣೇಶ ಮಂಡಳಿ ಪದಾಧಿಕಾರಿಗಳು ಪ್ರತಿಭಟನೆ ಮಾಡಿದರು. ಪ್ರತಿವರ್ಷ ಸಾಗುವ ಮಾರ್ಗದಲ್ಲೇ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಇದರಿಂದಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರ ಭದ್ರತೆಯಲ್ಲಿ ಕಚೇರಿ ಗಲ್ಲಿ ಮಾರ್ಗವಾಗಿ ಕಪಿಲೇಶ್ವರ ರಸ್ತೆಗೆ ತೆರಳಿತು.ಮತ್ತೊಂದು ಚಾಕು ಇರಿದಲ್ಲಿ ಓರ್ವ ಗಾಯ

ಬೆಳಗಾವಿಯಲ್ಲಿ ಗಣೇಶ ವಿಸರ್ಜನೆ ವೇಳೆ ಮತ್ತೊಂದು ಚಾಕು ಇರಿದ ಘಟನೆ ಕೋನ್ವಾಳ ಗಲ್ಲಿಯಲ್ಲಿ ನಡೆದಿದೆ. ಬೆಳಗಾವಿ ಮುಜಾವರ ಗಲ್ಲಿಯ ವಿವೇಕಾನಂದ ವಕ್ಕವ್ವಗೋಳ (20) ಚಾಕು ಇರಿತಕ್ಕೆ ಒಳಗಾದವರು. ಹೊಟ್ಟೆಯ ಎಡಭಾಗಕ್ಕೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ಗಾಯಾಳು ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪರಿಚಿತರು ಚಾಕು ಇರಿದು ಪರಾರಿಯಾಗಿದ್ದಾರೆ. ಖಡೇಬಜಾರ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಚೂರಿ ಇರಿತ ಪ್ರಕರಣಕ್ಕೂ ಗಣೇಶೋತ್ಸವಕ್ಕೂ ಸಂಬಂಧ ಇಲ್ಲ: ಸಚಿವ ಜಾರಕಿಹೊಳಿ

ಬೆಳಗಾವಿ: ಚೂರಿ ಇರಿತ ಪ್ರಕರಣಕ್ಕೂ ಬೆಳಗಾವಿ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿಗಳ ಮೆರವಣಿಗೆಗೆ ಪೊಲೀಸ್‌ ಬಿಗಿ ಭದ್ರತೆ ಒದಗಿಸಲಾಗಿದೆ. ಚೂರಿ ಇರಿತ ಪ್ರಕರಣ ಗಣೇಶೋತ್ಸವಕ್ಕೆ ಸಂಬಂಧಿಸಿದ್ದಲ್ಲ. ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ನೆರವೇರಿದೆ ಎಂದು ತಿಳಿಸಿದರು.ಟ್ರ್ಯಾಕ್ಟರ್‌ ಟ್ರಾಲಿ ಹಾಯ್ದು ಓರ್ವ ಸಾವು

ಬೆಳಗಾವಿ: ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಟ್ರ್ಯಾಕ್ಟರ್‌ ಡ್ರಾಲಿ ಹಾಯ್ದು ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ಬೆಳಗಾವಿ ನಗರದ ಪಾಟೀಲ ಗಲ್ಲಿಯಲ್ಲಿ ನಡೆದಿದೆ. ಬೆಳಗಾವಿ ತಾಲೂಕಿನ ಸುಳಗಾ ಗ್ರಾಮದ ಸದಾನಂದ ಚವ್ಹಾಣಪಾಟೀಲ (48) ಮೃತ ವ್ಯಕ್ತಿ. ವಿಜಯ ರಾಜಗೋಳಕರ ಗಾಯಗೊಂಡಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಬೆಳಗಾವಿಗೆ ಆಗಮಿಸಿದ್ದರು. ಇದೇ ವೇಳೆ ಪಾಟೀಲ ಗಲ್ಲಿಯಲ್ಲಿ ತೆರಳುತ್ತಿದ್ದ ವೇಳೆ ಗಣೇಶ ಮೂರ್ತಿ ವಿಸರ್ಜನೆಗೆ ತೆರಳುತ್ತಿದ್ದ ಟ್ರ್ಯಾಕ್ಟರ್‌ನ ಟ್ರಾಲಿ ಇವರಿಬ್ಬರ ಮೇಲೆ ಹರಿದಿದೆ. ಟ್ರ್ಯಾಕ್ಟರ್‌ ಚಾಲನ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗಣೇಶ ಮೂರ್ತಿಗಳ ವಿಸರ್ಜನಾ ಮೆರ‍ವಣಿಗೆ ವೇಳೆ ಅಪರಿಚಿತರ ಗುಂಪೊಂದು ಯುವಕರ ಮೇಲೆ ಚಾಕುವಿನಿಂದ ದಾಳಿ ಮಾಡಿರುವ ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಇನ್ನೂ ಬಂಧಿಸಿಲ್ಲ. ಆರೋಪಿಗಳು ಗಾಂಜಾ ಸೇವಿಸಿದ್ದರೇ ಎಂಬುವುದನ್ನು ಅವರನ್ನು ತಪಾಸಣೆ ಮಾಡಿದ ಬಳಿಕವೇ ಗೊತ್ತಾಗಲಿದೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು.

-ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಪೊಲೀಸ್‌ ಆಯುಕ್ತರು.