ನ್ಯಾಮತಿ ತಾಲೂಕಿನಲ್ಲಿ ಮರಳು ಗಲಾಟೆ : ಗ್ರಾಪಂ ಸದಸ್ಯ ಪುತ್ರನಿಂದ ಚಾಕು ಇರಿತ, ಒಬ್ಬ ಸಾವು

| Published : Sep 19 2024, 02:02 AM IST / Updated: Sep 19 2024, 07:28 AM IST

ಸಾರಾಂಶ

ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಮರಳು ವಿಚಾರವಾಗಿ ಎರಡು ಗ್ರಾಮದವರ ನಡುವೆ ಗಲಾಟೆ ನಡೆದು, ಗ್ರಾಪಂ ಸದಸ್ಯನ ಪುತ್ರ ಚಾಕುವಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದರಿಂದ ಒಬ್ಬರು ಸ್ಥಳದಲ್ಲೇ ಮೃತಪಟ್ಟು, ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

 ಹೊನ್ನಾಳಿ/ನ್ಯಾಮತಿ :  ಮರಳಿನ ವಿಚಾರವಾಗಿ ಎರಡು ಗ್ರಾಮದವರ ಮಧ್ಯೆ ನಡೆದ ಗಲಾಟೆಯಲ್ಲಿ ಗ್ರಾಪಂ ಸದಸ್ಯನ ಪುತ್ರ ಚಾಕುವಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದು, ಒಬ್ಬ ಸ್ಥಳದಲ್ಲೇ ಕೊಲೆಯಾಗಿದ್ದರೆ, ಇನ್ನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.

ಮರಿಗೊಂಡನಹಳ್ಳಿಯ ಯುವಕ ಶಿವರಾಜ್ (33) ಚಾಕು ಇರಿತದಿಂದ ಸ್ಥಳದಲ್ಲೇ ಮೃತಪಟ್ಟ ಯುವಕ. ಚಿ.ಕಡದಟ್ಟೆ ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ಸತೀಶ್‌ ಎಂಬವರ ಪುತ್ರ ಅಭಿಷೇಕ್ (ಅಭಿ) ಚಾಕು ಇರಿದ ಆರೋಪಿ. ಘಟನೆಯಲ್ಲಿ ಭರತ್ ಎಂಬಾತ ಚಾಕು ಇರಿತದಿಂದ ಗಂಭೀರ ಗಾಯಗೊಂಡಿದ್ದು, ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆಗಿದ್ದೇನು?:

ಶಾಲಾ ಕಟ್ಟಡ ಕಾಮಗಾರಿಗಾಗಿ ತುಂಗಭದ್ರಾ ನದಿಯಿಂದ ಗ್ರಾಮದಲ್ಲಿ ಮರಳು ಸಂಗ್ರಹಿಸಲಾಗುತ್ತಿತ್ತು. ಇದಕ್ಕೆ ಚಿ.ಕಡದಕಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಆಕ್ಷೇಪ ವ್ಯಕ್ತಪಡಿಸಿ, ಅನಧಿಕೃತವಾಗಿ ಮರಳು ಸಾಗಾಣಿಕೆ ಮಾಡ್ತಿದ್ದೀಯಾ ಎಂದು ಆರೋಪಿಸಿ, ಮರಳು ಸಾಗಣೆಗೆ ಅಡ್ಡಿಪಡಿಸಿದರು. ಅಲ್ಲದೇ, ಭೂ ಗಣಿ ವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರಿ ನಿರ್ಮಾಣದ ಕಟ್ಟಡದ ಸ್ಥಳದಲ್ಲಿನ ಮರಳು ಪರಿಶೀಲಿಸಿದರು. ಬಳಿಕ ಪರವಾನಿಗೆ ಪಡೆದು ಮರಳು ಬಳಸುವಂತೆ ಗ್ರಾಮಸ್ಥರಿಗೆ ಸೂಚಿಸಿ ಹೋಗಿದ್ದರು.

ಆಗ ಗ್ರಾಮಸ್ಥರು ಅಸಮಾಧಾನಗೊಂಡು, ಗ್ರಾಮದ ಕೆಲಸಕ್ಕೆ ಪದೇಪದೇ ಅಡ್ಡಿಪಡಿಸುತ್ತೀಯ ಎಂದು ಸತೀಶ್‌ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಮರಿಗೊಂಡನಹಳ್ಳಿಯ ಶಿವರಾಜ, ಭರತ ಹಾಗೂ ಸತೀಶ ಅವರ ಮಧ್ಯೆಯ ಗಲಾಟೆ ತಾರಕಕ್ಕೇರಿದೆ. ಈ ವೇಳೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ಬಂದ ಸತೀಶ್ ಅವರ ಪುತ್ರ ಅಭಿಷೇಕ್ (ಅಭಿ) ಏಕಾಏಕಿ ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಶಿವರಾಜ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಭರತ್ ಸಹ ಗಾಯಗೊಂಡಿದ್ದಾನೆ. ಘಟನೆಯಿಂದ ಮರಿಗೊಂಡನಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.

ಸುದ್ದಿ ತಿಳಿದ ನ್ಯಾಮತಿ ಮತ್ತು ಹೊನ್ನಾಳಿ ಪೊಲೀಸರು ಸ್ಥಳಕ್ಕ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್, ನ್ಯಾಮತಿ ಸಿಪಿಐ ರವಿಕುಮಾರ್, ಹೊನ್ನಾಳಿ ಸಿಪಿಐ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚಾಕು ಇರಿತದಿಂದ ಮೃತಪಟ್ಟ ಶಿವರಾಜ್ ಅವರಿಗೆ ತಾಯಿ, ಹೆಂಡತಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳಿದ್ದಾರೆ. ಶಿವರಾಜ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಭರತ್ ಹಾಗೂ ಶಿವರಾಜ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದಾರೆ. 

- ನ್ಯಾಮತಿ ತಾಲೂಕು ಮರಿಗೊಂಡನಹಳ್ಳಿಯಲ್ಲಿ ಘಟನೆ, ಶಿವರಾಜ ಸ್ಥಳದಲ್ಲೇ ಸಾವು

- ಗಂಭೀರ ಗಾಯಗೊಂಡ ಭರತ್‌ ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು

- ಚಿ.ಕಡದಕಟ್ಟೆ ಗ್ರಾಪಂ ಸದಸ್ಯನ ಪುತ್ರ ಅಭಿಷೇಕ್‌ ಚೂರಿಯಿಂದ ಹಲ್ಲೆ ನಡೆಸಿದ ಆರೋಪಿ