ಕಲ್ಯಾಣ ಕ್ರಾಂತಿಯ ಹಿನ್ನೆಲೆ ಅರಿಯಲಿ: ಗೌರಕ್ಕ

| Published : Oct 19 2024, 12:27 AM IST

ಸಾರಾಂಶ

ಮೂವರು ಶರಣರ ಕಣ್ಣು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಇಡೀ ಕಲ್ಯಾಣದ ಬೀದಿ ಬೀದಿಗಳಲ್ಲಿ ಎಳೆದೊಯ್ದು ಹತ್ಯೆ ಮಾಡುವ ಘಟನೆ ಅತ್ಯಂತ ಹೇಯವಾದುದಾಗಿದೆ

ಗದಗ: 12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಡೆದ ಶರಣರ ಬಲಿದಾನ, ತ್ಯಾಗಗಳನ್ನು ಎಲ್ಲ ಲಿಂಗಾಯತರು ನೆನಪಿಡಬೇಕು. ಆ ಸಂಕಟಮಯ ಸನ್ನಿವೇಶದಲ್ಲೂ ಜೀವದ ಹಂಗು ತೊರೆದು ಬಿಜ್ಜಳ ಹಾಗೂ ವೈಧಿಕಶಾಹಿಗಳೊಂದಿಗೆ ಹೋರಾಟ ನಡೆಸುತ್ತ ವಚನ ಸಾಹಿತ್ಯ ರಕ್ಷಿಸಿದ ಶರಣರನ್ನು ಸ್ಮರಿಸುವುದು ನಮಗೆ ಆದ್ಯತೆಯಾಗಬೇಕು. ಶರಣರ ಮಾರ್ಗದಲ್ಲಿ ಸಾಗಬೇಕೆಂದು ಗೌರಕ್ಕ ಬಡಿಗಣ್ಣನವರ ಹೇಳಿದರು.

ಬಸವದಳದ 1615ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಹರಳಯ್ಯ ಮಧುವಯ್ಯಗಳ ಹುತಾತ್ಮರ ಸ್ಮರಣೆ ಕುರಿತು ಮಾತನಾಡಿದರು.ಕಲ್ಯಾಣ ಕ್ರಾಂತಿಯನ್ನು ವಿಜಯೋತ್ಸವ ಅನ್ನಲು ತುಸು ಮುಜುಗರವಾಗುತ್ತದೆ. ಹಾಗೆ ನೋಡಿದಲ್ಲಿ ಸತ್ಯಕ್ಕಾಗಿ ತಮ್ಮ ಪ್ರಾಣವನ್ನೇ ನೀಡಿದ ಶರಣರ ಬಲಿದಾನದ ದಿನವದು. ಆ ಶರಣರನ್ನು ಬಲಿಕೊಟ್ಟ ರೀತಿಯೇ ಅತ್ಯಂತ ಅಮಾನುಷವಾದುದು. ಮೂವರು ಶರಣರ ಕಣ್ಣು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಇಡೀ ಕಲ್ಯಾಣದ ಬೀದಿ ಬೀದಿಗಳಲ್ಲಿ ಎಳೆದೊಯ್ದು ಹತ್ಯೆ ಮಾಡುವ ಘಟನೆ ಅತ್ಯಂತ ಹೇಯವಾದುದಾಗಿದೆ. ಜತೆಗೆ ಅಂತ ಸಂದರ್ಭದಲ್ಲೇ ಬಹಳಷ್ಟು ಶರಣರ ಕಗ್ಗೊಲೆಗಳಾದವು. ಕೋಟ್ಯಂತರ ವಚನ ಸಾಹಿತ್ಯವನ್ನು ಸುಡಲಾಯಿತು. ಆದರೆ, ಅಂತಹ ಸಂದರ್ಭದಲ್ಲೂ ಶರಣರು ಸತ್ಯ ಪ್ರತಿಪಾದನೆಗಾಗಿ ಸಮ ಸಮಾಜ ನಿರ್ಮಾಣಕ್ಕಾಗಿ ತಮ್ಮ ಪ್ರಾಣ ಹೋದರೂ ಸರಿಯೇ ಹಿಂಜರಿಯಲಿಲ್ಲ. ಮರಣವೇ ಅವರ ಪಾಲಿಗೆ ಮಹಾನವಮಿಯಾಗಿತ್ತು. ವಚನ ಸಾಹಿತ್ಯ ರಕ್ಷಣೆಗಾಗಿ ಅವರು ಕಲ್ಯಾಣವನ್ನು ತೊರೆದರು. ಆಗಲೂ ವೈಧಿಕರ, ಸೈನಿಕರ ದಾಳಿಗೆ ಒಳಗಾದರು. ಶರಣರ ಆ ಮಹಾನ್ ಬಲಿದಾನವನ್ನು ನಾವು ಎಂದು ಮರೆಯಬಾರದು ಎಂದರು.

ಈ ವೇಳೆ ಮಂಜುಳಾ ಹಾಸಿಲಕರ ವಚನಗೈದರು. ಎಸ್.ಎ. ಮುಗದ ಮಾತನಾಡಿದರು. ಸಂತೋಷ ನರಗುಂದ ಅವರನ್ನ ಸನ್ಮಾನಿಸಲಾಯಿತು. ಬಿ.ವಿ. ಕಾಮಣ್ಣನವರ ಸ್ವಾಗತಿಸಿದರು. ಪ್ರಕಾಶ ಅಸುಂಡಿ ನಿರೂಪಿಸಿದರು. ಶರಣು ಸಮರ್ಪಣೆಯನ್ನು ಎಂ.ಬಿ.ಲಿಂಗಧಾಳ ನೆರವೇರಿಸಿದರು.