ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಮಾನವ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಭಕ್ತಿಯಿಂದ ಅಂತರಂಗದ ಶುದ್ಧಿ ಮಾಡಿಕೊಳ್ಳಬೇಕು. ಅಂತರಂಗದ ಶುದ್ಧಿಯೇ ಶ್ರೇಷ್ಠವೆಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.ತಾಲೂಕಿನ ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಶ್ರೀರಾಮಭವ ತಾರಕ ಮಂತ್ರದ ಶ್ರೀರಾಮಕೋಟಿ ಜಪ ಯಜ್ಞವನ್ನು ಉದ್ಘಾಟಿಸಿ ಮಾತನಾಡಿದರು.
ಸದ್ಗುರು ಕೈವಾರ ತಾತಯ್ಯನವರು ಯೋಗಿವರ್ಯರಾಗಿ ಶ್ರೀರಾಮ ಭವತಾರಕ ಮಂತ್ರವನ್ನು ಮಾನವರ ಉದ್ಧಾರಕ್ಕಾಗಿ ನೀಡಿದ್ದಾರೆ. ಮಾನಸಿಕ ಶಾಂತಿ, ನೆಮ್ಮದಿಯನ್ನು ಪಡೆಯಲು ಈ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಬೆಳೆಯುತ್ತದೆ. ಮಾನವರಲ್ಲಿ ಆತ್ಮಸಾಮರಸ್ಯ ಮತ್ತು ಸಮಭಾವನೆ ಬಹಳ ಮುಖ್ಯವಾದುದೆಂದರು.ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ಮಾತನಾಡಿ, ಕಣ್ಣಿನ ಗುಡ್ಡೆಗಳನ್ನು ಕಣ್ಣರೆಪ್ಪೆಯು ಹೇಗೆ ರಕ್ಷಿಸುತ್ತದೋ, ಆ ರೀತಿಯಲ್ಲಿ ಪರಮಾತ್ಮನ ನಾಮಸ್ಮರಣೆಯು ನಮ್ಮನ್ನು ಸಂರಕ್ಷಿಸುತ್ತದೆ. ಕೈವಾರ ತಾತಯ್ಯನವರು ರಾಮ ನಾಮಪಠಣೆಗೆ ಒತ್ತನ್ನು ನೀಡಿದ್ದಾರೆ. ಮಾನವರ ಪೂರ್ವಕರ್ಮಗಳ ನಾಶಕ್ಕಾಗಿ ರಾಮನಾಮವನ್ನು ಪಠಿಸಬೇಕೆಂದು ಸದ್ಗುರುಗಳಾದ ಕೈವಾರ ತಾತಯ್ಯನವರು ಹೇಳಿದ್ದಾರೆ. ಇದನ್ನು ಮನಗಂಡು ಧರ್ಮಾಧಿಕಾರಿಗಳು ಶ್ರೀರಾಮಕೋಟಿ ಜಪಯಜ್ಞವನ್ನು ಆಯೋಜಿಸಿದ್ದಾರೆ. ಪ್ರತಿ ಮಾಸದಲ್ಲಿಯೂ ಈ ಕಾರ್ಯಕ್ರಮ ಆಯೋಜಿಸುವ ಚಿಂತನೆಯಿದೆ ಎಂದರು.
ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿಯ ಬಳಿಗೆ ಬಂದ ಭಕ್ತರಿಂದ ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಶ್ರೀರಾಮ ಕೋಟಿ ಯಜ್ಞಜಪ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆ ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀರಾಮ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭ ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ದೀಪ ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆಯನ್ನು ನೀಡಿದರು.ರಾಮಕೋಟಿ ಜಪವನ್ನು ಅಖಂಡ ೨೪ ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮ ಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಟ್ರಸ್ಟಿ ಕೆ.ನರಸಿಂಹಪ್ಪ, ಸುರೇಶ್ ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.