ಸಾರಾಂಶ
ಭಾಲ್ಕಿಯ ಬಾಲಾಜಿ ನಗರದಲ್ಲಿ ನಡೆದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮಕ್ಕೆ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಮಾನವ ಜೀವನದ ಸಫಲತೆಗೆ ವಚನಗಳೇ ಮಹಾಮಂತ್ರಗಳಾಗಿದ್ದು, ವಚನಗಳನ್ನು ಕೇವಲ ಕಂಠ ಪಾಠ ಮಾಡಿದರೆ ಸಾಲದು ಅವುಗಳ ನೈಜ ಸತ್ಯವನ್ನು ಅರಿಯಬೇಕು ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.ಪಟ್ಟಣದ ಬಾಲಾಜಿ ನಗರದ ಶಿಕ್ಷಕಿ ಚಂದ್ರಕಲಾ ಪ್ರಭು ಡಿಗ್ಗೆ ಅವರ ನಿವಾಸದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಉತ್ತಮ ಜೀವನಕ್ಕಾಗಿ ಬಸವಣ್ಣನವರ ಸಪ್ತ ಸೂತ್ರಗಳಾದ, ಕಳ ಬೇಡ ಕೊಲ ಬೇಡ, ಹುಸಿಯ ನುಡಿಯಲು ಬೇಡ ಎಂಬ ವಚನ ಒಂದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ಬದುಕು ಸುಂದರಗೊಳ್ಳುತ್ತದೆ ಎಂದರು.
ಟಿ.ವಿ ಸಿರಿಯಲ್, ವಾಟ್ಸಾಪ್, ಫೇಸ್ ಬುಕ್‌ನಲ್ಲಿ ಹೆಚ್ಚು ಕಾಲ ಕಳೆಯುವ ಇಂದಿನ ಕಾಲಘಟ್ಟದಲ್ಲಿ ಬಾಲಾಜಿ ಬಡಾವಣೆಯ ಮಹಿಳೆಯರು ಸೇರಿ ವಾರಕ್ಕೊಮ್ಮೆ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಆಯೋಜಿಸಿ ವಚನಗಳ ಪಠಣ ನಡೆಸುತ್ತಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚಂದ್ರಕಲಾ ಪ್ರಭು ಡಿಗ್ಗೆ, ಮಹಾದೇವಿ ಮಡ್ಡೇರ್, ಲಕ್ಷ್ಮೀಬಾಯಿ ಭೂರೆ, ಸುರೇಖಾ ಭೂರೆ, ಶಿಲ್ಪಾ ಕನಕಟ್ಟೆ, ಸಂಜೀವಿನಿ ಪಾಟೀಲ್, ನಿರ್ಮಲಾ ಜಮಾದಾರ, ಅನುಸೂಯಾ ಬಿರಾದಾರ, ಚಿನ್ನಮ್ಮ ಕೋಟೆ, ವಿಜಯಲಕ್ಷ್ಮಿ ಬೋಚರೆ, ಚಿನ್ನಮ್ಮ ಗೋರ್ಟೆ, ಜೈಶ್ರೀ ಭಾತಂಬ್ರೆ, ಬಸಮ್ಮ ಚಿಂಚೋಳೆ, ಪೂಜಾ ಮೀನಾಕ್ಷಿ ಭೂರೆ, ಕಲಾವತಿ ಮೇತ್ರೆ, ಸುಗಮ್ಮ ನಾವದಗೇರೆ ಸೇರಿದಂತೆ ಹಲವರು ಇದ್ದರು.