ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತು ಮತ್ತು ಶೇಷಾದ್ರಿಪುರಂ ಪದವಿ ಕಾಲೇಜಿನ ಕನ್ನಡ ವಿಭಾಗವು, ಬಸವ ಅಧ್ಯಯನಕೇಂದ್ರ ಹಾಗೂ ಆಂತರಿಕಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ 2024-25ನೇ ಸಾಲಿನ ದತ್ತಿ ಉಪನ್ಯಾಸ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಗೌಡರ ಸಿದ್ದಪ್ಪ ಮತ್ತು ಶರಣೆ ಮರಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಗಳು ಬಸವಣ್ಣನವರ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಕಂಸಾಳೆ ನುಡಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು.
ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ವ್ಯಕ್ತಿತ್ವವು ನಿರಂತರವಾಗಿ ಹಲವು ಬಗೆಯಲ್ಲಿ ವಿಕಸನಗೊಳ್ಳುತ್ತದೆ. ಅದರಲ್ಲಿ ಶಿಕ್ಷಣವೂ ಒಂದು ಬಗೆ. ಇಂದು ಶಿಕ್ಷಣ ಕೇವಲ ಉದ್ಯೋಗ ನಿಮಿತ್ತವಾಗಿದೆ. ಆದರೆ ಅನಾದಿ ಕಾಲದಿಂದಲೂ ಶಿಕ್ಷಣ ಎಂದರೆ ಜ್ಞಾನವನ್ನು ಸಂಪಾದನೆ ಮಾಡುವುದೇ ಆಗಿದೆ. ಜ್ಞಾನ ಎಂದರೆ ನಾವು ಏನೇನು ಕಲಿತಿದ್ದೇವೆ ಎಂಬುದಲ್ಲ ಬದಲಿಗೆ ಜ್ಞಾನ ಎಂದರೆ ಏನೇನು ಕಲಿಯಲು ನಮ್ಮನ್ನು ನಾವು ತೆರೆದುಕೊಂಡಿದ್ದೇವೆ ಎಂದರು.ಆದ್ದರಿಂದ ಸಂಪತ್ತು ಸಂಪಾದನೆಗಿಂತಲೂ ವಿದ್ಯಾರ್ಥಿಗಳು, ಜ್ಞಾನ ಸಂಪಾದನೆಯಲ್ಲಿ ತೊಡಗಬೇಕು. ಆಗ ಸಂಪತ್ತು ತಾನಾಗಿ ನಮ್ಮ ಬಳಿಗೆ ಬರುತ್ತದೆ ಎಂದರು.
ದತ್ತಿ ದಾನಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್. ಶಿವರಾಜಪ್ಪ ಮಾತನಾಡಿ, ಜನಪದ ಸಾಹಿತ್ಯದಲ್ಲಿ ಮಲೆಮಹದೇಶ್ವರರು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಲೆಯ ಮಹದೇಶ್ವರರು ಸಮಾಜಮುಖಿ ಕ್ರಾಂತಿಕಾರಕ ವ್ಯಕ್ತಿ, ಮಾನವತ್ವದಿಂದ ದೈವತ್ವಕ್ಕೇರಿದ ಮಹಿಮಾ ಪುರುಷರು ಹಾಗೂ ಆ ಕಾಲದಲ್ಲೇ ಪ್ರಜಾಪ್ರಭುತ್ವವಾದಿ ಆಗಿದ್ದಾಗಿ ತಿಳಿಸಿದರು.ಸಮಾಜದ ಕಟ್ಟಕಡೆಯವನನ್ನು ಗುರಿಯಾಗಿಟ್ಟುಕೊಂಡು ಅವನನ್ನು ಮೇಲೆತ್ತುವ ಕಾರ್ಯವನ್ನು ಮಾಡಿದವರು. ಜನಪದ ಸಾಹಿತ್ಯದ ದೇವರುಗಳಲ್ಲಿ ಅಗ್ರಮಾನ್ಯ ಸ್ಥಾನವನ್ನು ಹೊಂದಿದ ಮಹದೇಶ್ವರ ಸಾಮಾಜಿಕ ಪರಿವರ್ತನೆಯ ಹರಿಕಾರ. ಮಲೆ ಮಹದೇಶ್ವರ ಕಾವ್ಯವು ಗಾತ್ರದಲ್ಲಷ್ಟೇ ಅಲ್ಲ ಮೌಲ್ಯದಲ್ಲಿಯೂ ಅತಿದೊಡ್ಡದು. ಈ ಕಾವ್ಯವನ್ನು ಶ್ರೇಷ್ಠ ಕವಿಗಳಾಗಲಿ, ವಿದ್ವಾಂಸರಾಗಲಿ ಬರೆದದ್ದಲ್ಲ, ನೊಂದವರ, ದು:ಖಿತರ ಹಾಡೇ ಬೃಹತ್ ಕಾವ್ಯವಾಗಿದೆ ಎಂದು ಅವರು ಹೇಳಿದರು.
ಶರಣ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಸಮಾಜದ ನಿರ್ಮಾತೃಗಳಾಗಬೇಕೆಂದು ಸಲಹೆ ಮಾಡಿದರು.ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ. ವೂಡೇ ಪಿ. ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇವರಾಜು ಪಿ. ಚಿಕ್ಕಳ್ಳಿ, ಕಾಲೇಜಿನ ಪ್ರಾಂಶುಪಾಲೆ ಕೆ. ಸೌಮ್ಯಾ ಈರಪ್ಪ, ಪಿಯು ಕಾಲೇಜು ಪ್ರಾಂಶುಪಾಲೆ ಎನ್. ಅರ್ಚನಾ ಸ್ವಾಮಿ, ಬಸವ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಸಿ.ಪಿ. ಲಾವಣ್ಯ, ಸಹಾಯಕ ಪ್ರಾಧ್ಯಾಪಕ ಕೆ.ಎಂ. ಸಿದ್ದಪ್ಪ, ಎಸ್.ಆರ್. ರಶ್ಮಿ, ವಿದ್ಯಾರ್ಥಿಗಳು, ಬೋಧಕ, ಬೋಧಕೇತರರು ಇದ್ದರು.