ಸಾರಾಂಶ
ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು.ಸಣ್ಣ ಮಗು ಇದ್ದಾಗ ಕಲಿಸಿದ ಪಾಠ ದೊಡ್ಡವರಾದ ಮೇಲೂ ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ.
ಲಕ್ಷ್ಮೇಶ್ವರ: ನಾವು ಹಚ್ಚಿದ ದೀಪ ಆರತೈತಿ. ಆದರ ನಮ್ಮ ಎದಿಯಾಗಿನ ಜ್ಞಾನದ ದೀಪ ಸದಾ ಬೆಳಗತೈತಿ. ಅಂದರ ಜಗತ್ತಿನಲ್ಲಿ ಜ್ಞಾನಕ್ಕೆ ಹೆಚ್ಚಿನ ಕಿಮ್ಮತ್ತು ಐತಿ’ ಎಂದು ಕೊಪ್ಪಳ ಗವಿಸಿದ್ಧೇಶ್ವರಮಠದ ಸ್ವಾಮೀಜಿ ಹೇಳಿದರು. ಪಟ್ಟಣದ ಕದರಗೇರಿ ಓಣಿಯ ಶಿವರುದ್ರಮ್ಮ ದೇವಿಯ ೨ನೇ ಜಾತ್ರಾಮಹೋತ್ಸವದ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ತಾಯಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು.ಸಣ್ಣ ಮಗು ಇದ್ದಾಗ ಕಲಿಸಿದ ಪಾಠ ದೊಡ್ಡವರಾದ ಮೇಲೂ ಅದು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಕಾರಣ ತಾಯಂದಿರು ಮಕ್ಕಳನ್ನು ಜವಾಬ್ದಾರಿಯಿಂದ ಬೆಳೆಸಬೇಕು. ಮಕ್ಕಳಲ್ಲಿ ಉತ್ತಮ ಗುಣ ಬೆಳೆಸಿದರೆ ಮುಂದೆ ಆ ಮಗು ಸಮಾಜಕ್ಕೆ ಉಪಕಾರಿ ಆಗುತ್ತದೆ. ದುಷ್ಟ ಸ್ವಭಾವ ಬೆಳೆಸಿದರೆ ಅದು ಸಮಾಜಕ್ಕೆ ಕಂಟಕವಾಗುತ್ತದೆ ಎಂದು ಹೇಳಿದ ಅವರು, ಲಕ್ಷಾಂತರ ಖರ್ಚು ಮಾಡಿ ಕಟ್ಟಿಸಿದ ಮನೆ ಬೆಳಗಲು ಒಂದು ರೂಪಾಯಿ ಕಿಮ್ಮತ್ತಿನ ಮೇಣದ ಬತ್ತಿ ಬೇಕು. ಅಂದರೆ ಬೆಳಕಿಗೆ ಮಹತ್ವ ಇದೆ. ನಾವು ಹಚ್ಚುವ ದೀಪ ಸುತ್ತಲಿನ ಕತ್ತಲನ್ನು ಕಳೆದರೆ ಜ್ಞಾನದ ದೀಪ ಅಂತರಾತ್ಮ ಬೆಳಗಿಸುತ್ತದೆ ಎಂಬುದನ್ನು ದಾರ್ಶನಿಕರು, ಶರಣರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.ಇಡೀ ವಿಶ್ವ ನಿಂತಿರುವುದು ಜ್ಞಾನದ ಮೇಲೆ. ಕಾರಣ ಜ್ಞಾನ ಗಳಿಸಲು ಮನಸ್ಸು ಹಾತೊರೆಯಬೇಕು. ಮನಸ್ಸು ಗಟ್ಟಿ ಇದ್ದರೆ ಎಂತಹ ಕಠಿಣ ಕೆಲಸವನ್ನಾದರೂ ಸುಲಭವಾಗಿ ಸಾಧಿಸಬಹುದು ಎಂದು ತಿಳಿಸಿದರು.
ರ‍್ಲಾಪೂರ-ಹಳ್ಳಿಗುಡಿಯ ಡಾ. ಕೊಟ್ಟೂರೇಶ್ವರ ಸ್ವಾಮೀಜಿ ಜೀವನ ಶೈಲಿ ಕುರಿತು ಪ್ರವಚನ ನೀಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ನಿವೃತ್ತ ಶಿಕ್ಷಕ ಪೂರ್ಣಾಜಿ ಖರಾಟೆ ಮಾತನಾಡಿದರು.ಈ ಸಂದರ್ಭದಲ್ಲಿ ಸೋಮಣ್ಣ ಉಪನಾಳ, ದೇವಪ್ಪ ಮಲ್ಲೂರು, ಯಲ್ಲಪ್ಪ ಅಡರಕಟ್ಟಿ, ಮಹದೇವಪ್ಪ ಗಿಡಿಬಿಡಿ, ಕಾಶಪ್ಪ ಲಿಂಗಶೆಟ್ಟಿ, ಪುಲಿಕೇಶಿ ಬಟ್ಟೂರು, ಈರಪ್ಪ ಹಾದಿಮನಿ, ಶಿವಯೋಗೆಪ್ಪ ಚಂದರಗಿ, ಗಂಗಾಧರ ಶಿರಗಣ್ಣನವರ ಸೇರಿದಂತೆ ಪ್ರಮುಖರು ಇದ್ದರು.