ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ತೋಳ್ಬಲ, ಹಣಬಲಕ್ಕಿಂತ ಜ್ಞಾನಬಲ ಮುಖ್ಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪುಸ್ತಕಪ್ರೇಮಿ ಅಂಕೇಗೌಡ ಹೇಳಿದರು.

ಹೊಯ್ಸಳ ಕನ್ನಡ ಸಂಘ ಮತ್ತು ಸವಿಗನ್ನಡ ಬಳಗವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ 26ನೇ ವಾರ್ಷಿಕೋತ್ಸವ, 2025ನೇ ಸಾಲಿನ ಹೊಯ್ಸಳ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಒಂದು ಕಾಲಕ್ಕೆ ತೋಳ್ಬಲ ಇದ್ದರೆ ಸಾಕು ಬದಕುಬಹುದು ಎಂಬ ಪರಿಸ್ಥಿತಿ ಇತ್ತು. ನಂತರ ಹಣ ಇದ್ದರೆ ಬದುಕುಬಹುದು ಎಂದು ಹೇಳಲಾಗುತ್ತಿತ್ತು. ಈಗ ಅದೆಲ್ಲಾ ಮುಗಿದಿದೆ. ಈಗ ಜ್ಞಾನ ಇದ್ದರೆ ಎಲ್ಲಿ ಬೇಕಾದರೂ ಬದುಕಬಹುದು. ಆದ್ದರಿಂದ ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಇವತ್ತು ನಾನು ಪದ್ಮಶ್ರೀ ಪ್ರಶಸ್ತಿ ಹಂತಕ್ಕೆ ಏರಲು ನಾನೊಬ್ಬನೇ ಕಾರಣನಲ್ಲ. ಹಲವಾರು ಸ್ನೇಹಿತರ ಸಹಕಾರ ಇದೆ. 78 ವರ್ಷದ ನಾನು ಕಳೆದ 52 ವರ್ಷಗಳಿಂದಲೂ ಪುಸ್ತಕಗಳ ಸಂಗ್ರಹದಲ್ಲಿ ತೊಡಗಿದ್ದು, ಈಗ ನನ್ನ ಗ್ರಂಥಾಲಯದಲ್ಲಿ 20 ಲಕ್ಷ ಪುಸ್ತಕಗಳಿವೆ. ಮುಂದಿನ ಪೀಳಿಗೆಯ ಮಕ್ಕಳಿಗೆ ಜ್ಞಾನವನ್ನು ದಾಟಿಸಬೇಕು ಎಂಬ ಹಂಬಲದಿಂದ ಯಾರಿಂದಲೂ ಒಂದು ರೂಪಾಯಿಯನ್ನು ಕೂಡ ಪಡೆಯದೇ ಪುಸ್ತಕಗಳನ್ನು ಓದಲು ನೀಡುತ್ತಿದ್ದೇನೆ ಎಂದರು.

ಮಕ್ಕಳಿಗೆ ಐಎಎಸ್, ಕೆಎಎಸ್‌ ಪರೀಕ್ಷೆ ಬರೆಯಲು ಬೇಕಾದ ಎಲ್ಲಾ ಪುಸ್ತಕಗಳು ನನ್ನ ಬಳಿ ಇವೆ. ವಿದ್ಯಾರ್ಥಿಗಳು ಬೆಳಗಿನ ಜಾವ 4 ರಿಂದ 7.30 ರವರೆಗೆ ಶ್ರದ್ಧೆ ಓದಿದರೆ ಯಾವುದೇ ಪರೀಕ್ಷೆಯನ್ನಾದರೂ ಪಾಸು ಮಾಡಬಹುದು. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳನ್ನು ಆಡುವುದನ್ನು ಬಿಟ್ಟು, ಒಳ್ಳೆಯತನ ಬೆಳೆಸಿಕೊಂಡರೆ ಸಾಕು ಎಂದರು.


ನಾಡು ನುಡಿಗೆ ದುಡಿದ 15 ಮಂದಿ ಸಾಧಕರಿಗೆ 2025ನೇ ಸಾಲಿನ ಪ್ರತಿಷ್ಠಿತ ರಾಜ್ಯಮಟ್ಟದ ಹೊಯ್ಸಳ ಪ್ರಶಸ್ತಿಯನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಹಾಗೂ ಹಿರಿಯ ಸಮಾಜಸೇವಕ ರಘುರಾಂ ವಾಜಪೇಯಿ ಪ್ರದಾನ ಮಾಡಿದರು. ಟಹಿರಿಯ ವೀಣಾ ವಿದ್ವಾಂಸ ವಿ.ನಂಜುಂಡಸ್ವಾಮಿ ಅಭಿಂದನಾ ಭಾಷಣ ಮಾಡಿದರು.

ಮಾಜಿ ರಾಷ್ಟ್ರಪತಿ, ದಿವಂಗತ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರಿಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಜಯಪ್ರಕಾಶ್ ಪುತ್ತೂರು ಅವರು ರಚಿಸಿರುವ ಹಾಗೂ ಸಪ್ನ ಬುಕ್‌ ಹೌಸ್‌ ಪ್ರಕಟಿಸಿರುವ ‘ವ್ಯಕ್ತಿತ್ವ ವಿಕಸನ ವಿಚಾರಧಾರೆ’ ಕೃತಿಯನ್ನು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸವಿಗನ್ನಡ ವಿಶೇಷಾಂಕವನ್ನು ಕವಿಯತ್ರಿ ಡಾ.ಲತಾ ರಾಜಶೇಖರ್‌ ಬಿಡುಗಡೆ ಮಾಡಿದರು.

ಮೇಲುಕೋಟೆ ವಂಗೀಪುರ ನಂಬೀಮಠದ ಶ್ರೀ ಇಳ್ಳೆ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಮಧುಮೇಹತಜ್ಞ ಡಾ.ವಿ.ಲಕ್ಷ್ಮೀನಾರಾಯಣ್, ಸಂಸ್ಕೃತಿ ವಿದುಷಿ ಡಾ.ಕೆ.ಲೀಲಾಪ್ರಕಾಶ್ ಮುಖ್ಯ ಅತಿಥಿಗಳಾಗಿದ್ದರು. ಲೇಖಕ ಜಯಪ್ರಕಾಶ್‌ ಪುತ್ತೂರು ಇದ್ದರು.

ರಂಗನಾಥ್ ಮೈಸೂರು ಸ್ವಾಗತಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ವಿಜಯಲಕ್ಷ್ಮಿ ರಂಗನಾಥ್‌ ಪ್ರಾರ್ಥಿಸಿದರು. ಮಾನುಷ ಕಾರ್ಯಕ್ರಮ ನಿರೂಪಿಸಿದರು.ಪ್ರಶಸ್ತಿ ಪುರಸ್ಕೃತರು

ನಾಗರಾಜ ವಿ.ಬೈರಿ- ಸುಗಮ ಸಂಗೀತ ಮತ್ತು ಸಮಾಜಸೇವೆ, ಎನ್.ಎಸ್.ರಂಗರಾಜು- ಇತಿಹಾಸ ಮತ್ತು ಪರಂಪರೆ, ಗುರುಬಸವರಾಜ- ಆಯುರ್ವೇದ ಮತ್ತು ವೈದ್ಯಕೀಯ. ಶಿಕ್ಷಣ, ಮಂಜಪ್ಪಶೆಟ್ಟಿ ಮಸಗಲಿ- ಜಾನಪದ ಮತ್ತು ಮುಕ್ತಕ, ವಾಮನರಾವ್ ಬೇಕಲ್- ಗಡಿನಾಡ ಕನ್ನಡ ಸೇವೆ, ಡಿ.ತಿಪ್ಪಣ್ಣ- ಹವ್ಯಾಸಿ ರಂಗಭೂಮಿ, ಜಿ.ಎಸ್.ಅಶೋಕ್ ಕುಮಾರ್- ಸಹಕಾರ, ಬಿ.ರಮೇಶ್- ಸಾಹಿತ್ಯ ಮತ್ತು ಸಂಸ್ಕೃತಿ ಪೋಷಣೆ, ಅರಸಿಕುಮಾರ್- ಛಾಯಾಗ್ರಹಣ, ಮಾಲತಿ ಕುಮಾರ್- ವೈದ್ಯಕೀಯ ಮತ್ತು ಕಲಾ ಪೋಷಣೆ, ಗೀತಾ ನಾವಲ್- ಸಾಹಿತ್ಯ ಮತ್ತು ಅನುವಾದ, ಅನುಪಮಾ- ಸಂಸ್ಕೃತ ಮತ್ತು ವೇದ, ಎಚ್.ಎಸ್.ಉಮಾದೇವಿ- ಗ್ರಂಥಾಲಯ ಸೇವೆ, ಜ್ಯೋತಿ ಗುರುಪ್ರಸಾದ್- ಸಾಹಿತ್ಯ ಶಿಕ್ಷ, ಪಲ್ಲವಿ ರಾಘವೇಂದ್ರ- ಭರತನಾಟ್ಯ.