ಜ್ಞಾನವೇ ನಾಗರೀಕತೆಯ ಬಲ: ಪ್ರೊ.ಸಿ.ಎಂ.ತ್ಯಾಗರಾಜ

| Published : Sep 13 2024, 01:34 AM IST

ಜ್ಞಾನವೇ ನಾಗರೀಕತೆಯ ಬಲ: ಪ್ರೊ.ಸಿ.ಎಂ.ತ್ಯಾಗರಾಜ
Share this Article
  • FB
  • TW
  • Linkdin
  • Email

ಸಾರಾಂಶ

ವಿಚಾರ ಸಂಕಿರಣ ಹಾಗೂ ಕಾರ್ಯಾಗಾರವನ್ನು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಉದ್ಘಾಟಿಸಿ ಹಲವು ವಿಚಾರಗಳ ಕುರಿತು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಜ್ಞಾನವೇ ನಾಗರೀಕತೆಯ ಬಲ. ಈ ಬಲದಿಂದಲೇ ನಾಗರೀಕತೆ ಇಷ್ಟು ವಿಕಾಸ ಹೊಂದಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಭಾರತೀಯ ಭಾಷೆಗಳಲ್ಲಿ ಗುಣಾತ್ಮಕ ಶೈಕ್ಷಣಿಕ ಸಂಪನ್ಮೂಲಗಳ ಲಭ್ಯತೆ-ಸವಾಲುಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮನುಕುಲದ ಉದ್ಧಾರಕ್ಕೆ ಉದಾತ್ತವಾದ ಜ್ಞಾನ ಅವಶ್ಯಕ. ಅದರಿಂದ ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟಲು ಸಾಧ್ಯ. ಮೌಲ್ಯಯುತವಾದ ಶಿಕ್ಷಣವು ಯುವಕರ ಭವಿಷ್ಯವನ್ನು ರೂಪಿಸುತ್ತದೆ ಎಂದು ತಿಳಿಸಿದರು.

ಜಗತ್ತಿನ ಪ್ರತಿಯೊಂದು ಭಾಷೆಯಲ್ಲಿಯೂ ಅನುಪಮವಾದ ಜ್ಞಾನ ಸಂಪತ್ತಿದೆ. ಭಾಷೆಗಳಲ್ಲಿನ ಜ್ಞಾನವು ಸಮಾಜದ ಅಂಚಿನಲ್ಲಿರುವವರಿಗೂ ಸಿಗಬೇಕು. ಅದು ಸಾಧ್ಯ ಆಗಬೇಕಾದರೇ ಭಾಷಾಂತರದಿಂದ ಮಾತ್ರ ಸಾಧ್ಯ ಎಂದರು.

ಪ್ರಾಚಾರ್ಯ ಪ್ರೊ.ಎಂ.ಜಿ.ಹೆಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಅನುವಾದವೇ ಸಂಪತ್ತು. ಜ್ಞಾನ ಕೊಡುಕೊಳ್ಳುವಿಕೆ ಆಗಬೇಕು. ಆಗ ಅದು ಎಲ್ಲರಿಗೂ ಸಿಗಲು ಸಾಧ್ಯ. ಸರ್ವ ಮೂಲದ ಜ್ಞಾನವನ್ನು ಬಳಸಿಕೊಂಡಾಗ ವ್ಯಕ್ತಿಯು ಜ್ಞಾನ ಸಂಪನ್ನನಾಗುತ್ತಾನೆ. ಅನುವಾದದಿಂದ ಸಮುದಾಯ, ದೇಶ ಬೌದ್ಧಿಕವಾಗಿ ವಿಕಾಸದ ಪಥವನ್ನು ಹಿಡಿಯುತ್ತದೆ. ಭವದಲ್ಲಿನ ಅನುಭವವನ್ನು ಅನುಭವಿಸಲು ಅನುವಾದದಿಂದ ಮಾತ್ರ ಸಾಧ್ಯ. ಸಮಕಾಲೀನ ಸಂದರ್ಭದಲ್ಲಿ ಅನುವಾದಕ್ಕೆ ಅಪಾರವಾದ ಬೇಡಿಕೆ ಇದೆ. ಈ ಕ್ಷೇತ್ರದ ಕಡೆಗೆ ಬರುವವರ ಸಂಖ್ಯೆ ಹೆಚ್ಚಾಗಬೇಕು ಎಂದರು.

ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮದ ಸಹ ನಿರ್ದೇಶಕ ಎಸ್.ವಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಅನುವಾದ ಸಂಪದದ ಪರಿಕಲ್ಪನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ಭಾಷೆ, ಕೌಶಲ್ಯ, ಜ್ಞಾನವನ್ನು ಉಣಬಡಿಸುವ ಸಂಕಲ್ಪ ಹೊಂದಿದ್ದೇವೆ. ಭಾರತೀಯ ಎಲ್ಲ ಭಾಷೆಯವರಿಗೆ ಬೇಕಾದ ಜ್ಞಾನವನ್ನು ಈ ಒಂದು ಭೂಮಿಕೆಯಲ್ಲಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರೊ.ಎಂ.ಸಿ.ಯರಿಸ್ವಾಮಿ ವಂದಿಸಿದರು. ಡಾ.ಮಹೇಶ ಕುಮಾರ್ ಸಿ.ಎಸ್.ನಿರೂಪಿಸಿದರು.

ವಿಚಾರ ಸಂಕಿರಣದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಬಿಇಡಿ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

-------------

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಶಿಕ್ಷಣ ದೊರಕಬೇಕು. ಆಗ ಮಾತ್ರ ವ್ಯಕ್ತಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ. ಇಂತಹ ಸಾಧ್ಯತೆಗಳನ್ನು ಸಾಧ್ಯವಾಗಿಸಲು ಮತ್ತು ಮನುಕುಲದ ಒಳಿತಿಗಾಗಿ ಅಜೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ವಿಶ್ವವಿದ್ಯಾಲಯವು ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜ್ಞಾನ ಪ್ರಸರಣೆ ಎಲ್ಲರಿಗೂ ಸಿಗಲಿ. ಜ್ಞಾನದ ಸಂಪತ್ತು , ಜ್ಞಾನದ ದ್ವಿಗುಣತೆ ಈ ಕಾರ್ಯಕ್ರಮದ ಉದ್ದೇಶ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಲಿ.

-ಪ್ರೊ.ಸಿ.ಎಂ.ತ್ಯಾಗರಾಜ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ.