ಅದ್ವೈತ ವೇದಾಂತ ತಿಳಿವಳಿಕೆ ಅತ್ಯಗತ್ಯ: ನಿರ್ಮಲಾನಂದ ಶ್ರೀ

| Published : Feb 25 2025, 12:45 AM IST

ಅದ್ವೈತ ವೇದಾಂತ ತಿಳಿವಳಿಕೆ ಅತ್ಯಗತ್ಯ: ನಿರ್ಮಲಾನಂದ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಭೌತಶಾಸ್ತ್ರ ವಿದ್ಯಾರ್ಥಿಗಳು ವೇದಾಂತ ತತ್ವವನ್ನು ಅಧ್ಯಯನ ಮಾಡುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳು ಹೇಳಿದರು.

ಹುಬ್ಬಳ್ಳಿ: ಯುವಜನರಿಗೆ, ವಿಶೇಷವಾಗಿ ವಿಜ್ಞಾನ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅದ್ವೈತ ವೇದಾಂತ ಪಾಠ ಹೇಳುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಶ್ರೀಗಳು ಹೇಳಿದರು.

ಅದ್ವೈತ ವೇದಾಂತ ಕುರಿತು ಶಂಕರಾಚಾರ್ಯರು ವಿವೇಕ ಚೂಡಾಮಣಿಯಲ್ಲಿ ಹೇಳಿದ ಪ್ರಸಿದ್ಧ ಮಾತು ಬ್ರಹ್ಮಸತ್ಯಂ ಜಗನ್ಮಿಥ್ಯಾ ಬಗ್ಗೆ ಸೋಮವಾರ ವಿಶ್ವವೇದಾಂತ ಪರಿಷತ್ ವೇದಿಕೆಯಲ್ಲಿ ನಡೆದ ವಿದ್ವತ್ ಗೋಷ್ಠಿಯಲ್ಲಿ ಅವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಭೌತಶಾಸ್ತ್ರ ವಿದ್ಯಾರ್ಥಿಗಳು ವೇದಾಂತ ತತ್ವವನ್ನು ಅಧ್ಯಯನ ಮಾಡುವ ಅಗತ್ಯವಿದೆ. ಉತ್ತರ ಕರ್ನಾಟಕದಲ್ಲಿ ಅದ್ವೈತ ವೇದಾಂತವನ್ನು ಕನ್ನಡದಲ್ಲಿ ಸಾಮಾನ್ಯ ಜನರಿಗೂ ತಿಳಿಯುವಂತೆ ಬೋಧನೆ ಮಾಡಿದ ಶ್ರೀ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿದ್ದು ಸಂತಸ ತಂದಿದೆ ಎಂದರು.

ದುಃಖಕ್ಕೆ ಮೂಲ

ಹಾರನಹಳ್ಳಿ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಶ್ರೀಗಳು ಆಶೀರ್ವಚನ ನೀಡಿ, ಯಾವುದು ತನ್ನದಲ್ಲವೋ ಅದನ್ನು ತನ್ನದು ಎಂದು ಹೇಳಿಕೊಳ್ಳುವ ಮನುಷ್ಯನಿಗೆ ದುಃಖವು ಸಹಜ. ಇದನ್ನು ಹೋಗಲಾಡಿಸಿದರೆ ಮಾತ್ರ ನೆಮ್ಮದಿ. ದುಃಖದಿಂದ ಹೇಗೆ ಬಿಡುಗಡೆ ಎಂಬುದರ ಕುರಿತು ಮನುಷ್ಯ ಚಿಂತನೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಗಣೇಶ ಕುರವತ್ತಿ ಅವರನ್ನು ಟ್ರಸ್ಟ್ ಕಮಿಟಿಯಿಂದ ಸನ್ಮಾನಿಸಲಾಯಿತು. ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಶ್ರೀಗಳು ಆಶೀರ್ವಚನ ನೀಡಿದರು.

ರಾಮಚಂದ್ರ ಮೇತ್ರಿ, ಮುಂಬೈನ ಸಹಜಾನಂದ ಸ್ವಾಮೀಜಿ, ಮರಕುಂಬಿಯ ನಿಜಗುಣ ಸ್ವಾಮೀಜಿ, ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಚಿತ್ರದುರ್ಗ ಸಿದ್ಧಾರೂಢಮಠದ ಶಿವಲಿಂಗಾನಂದ ಸ್ವಾಮೀಜಿ, ಚಿತ್ರದುರ್ಗದ ಶಿವಲಿಂಗಾನಂದ ಸ್ವಾಮೀಜಿ, ಕಾಡರಕೊಪ್ಪದ ದಯಾನಂದ ಸರಸ್ವತಿ ಸ್ವಾಮೀಜಿ, ಮುಂಬೈನ ಸಹಜಾನಂದ ಸ್ವಾಮೀಜಿ, ಶಿರೋಳದ ಶಂಕರಾರೂಢ ಸ್ವಾಮೀಜಿ, ಹುರಳಿಕೊಪ್ಪಿಯ ನಿಜಗುಣಾನಂದ ಸ್ವಾಮೀಜಿ, ಹಂಪಿಯ ವಿದ್ಯಾನಂದಭಾರತಿ ಸ್ವಾಮೀಜಿ, ಕಲಬುರ್ಗಿಯ ಲಕ್ಷ್ಮೀತಾಯಿ ಮಾತೆ, ಗದುಗಿನ ಅಕ್ಕಮಹಾದೇವಿ ಮಾತೆ, ಹುಬ್ಬಳ್ಳಿಯ ಷಡಕ್ಷರಿ ಸ್ವಾಮೀಜಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೇದಾಂತ ಪರಿಷತ್ ಸಮಿತಿ ಅಧ್ಯಕ್ಷ ಶ್ಯಾಮಾನಂದ ಪೂಜೇರಿ ಸ್ವಾಗತಿಸಿದರು. ಗಣೇಶ ಮಹಾರಾಜ ನಿರೂಪಿಸಿದರು, ವೇದಾಂಂತ ಪರಿಷತ್ ಗೌರವ ಅಧ್ಯಕ್ಷ ಡಿ.ಆರ್. ಪಾಟೀಲ, ಟ್ರಸ್ಟ್ ಕಮಿಟಿ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್, ವೈಸ್ ಚೇರಮನ್ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಸೇರಿದಂತೆ ಧರ್ಮದರ್ಶಿಗಳು ಪಾಲ್ಗೊಂಡಿದ್ದರು. ಆರೂಢರು ಆದರ್ಶ: ಜಾರಕಿಹೊಳಿ

ಜಾತಿ ತಾರತಮ್ಯದ ಕೆಟ್ಟ ವ್ಯವಸ್ಥೆಯನ್ನು ಹೋಗಲಾಡಿಸಿ ಜಾತ್ಯತೀತ ಮಠವನ್ನು ಕಟ್ಟಿ ಇಡೀ ಜಗತ್ತಿಗೇ ಆದರ್ಶರಾದವರು ಸಿದ್ಧಾರೂಢರು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ವಿಶ್ವವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ "ಅನುಭವ ಸಾರ " ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಂಡು ಭಕ್ತಿಯ ಮಾರ್ಗವನ್ನು ತೋರಿವರು ಸಿದ್ಧಾರೂಢರು ಎಂದರು. ಕಾರ್ಯಕ್ರಮದ ಅನ್ನದಾಸೋಹಕ್ಕೆ ₹5 ಲಕ್ಷ ಹಾಗೂ ಸಹೋದರ ಬಾಲಚಂದ್ರ ಜಾರಕಿಹೊಳಿ ಪರವಾಗಿ ₹2.50 ಲಕ್ಷ ದೇಣಿಗೆ ನೀಡಿದರು.

ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ, ಸಿದ್ಧಾರೂಡರ ಸಾನ್ನಿಧ್ಯದಿಂದ ಹುಬ್ಬಳ್ಳಿ ಅಲ್ಲದೇ ಇಡೀ ಕರ್ನಾಟಕವು ಪಾವನವಾಗಿದೆ. ಸಿದ್ಧಾರೂಢರು ತಾವು ಅಪಾರ ಕಷ್ಟಪಟ್ಟರೂ ಇಂದಿಗೂ ಭಕ್ತರನ್ನು ಉದ್ಧರಿಸುತ್ತ ಬಂದಿದ್ದಾರೆ. ಅವರ ಚಿಂತನೆಗಳು, ವಿಚಾರಗಳು ನಾಡಿನ ಆಚೆಗೂ ಪ್ರಚುರಗೊಂಡಿವೆ ಎಂದರು. ಕಾರ್ಯಕ್ರಮದ ಅನ್ನದಾಸೋಹಕ್ಕೆ ₹ 1 ಲಕ್ಷ ದೇಣಿಗೆ ನೀಡಿದರು.