ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯ ಜ್ಞಾನ ಮಕ್ಕಳ ಭವಿಷ್ಯಕ್ಕೆ ಅನುಕೂಲ: ಎನ್.ಆರ್.ರವಿ

| Published : Jan 05 2025, 01:32 AM IST

ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯ ಜ್ಞಾನ ಮಕ್ಕಳ ಭವಿಷ್ಯಕ್ಕೆ ಅನುಕೂಲ: ಎನ್.ಆರ್.ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳಿದಂತೆ ಮಕ್ಕಳು ಜೀವನದಲ್ಲಿ ದೊಡ್ಡಮಟ್ಟದಲ್ಲಿ ಕನಸ್ಸು ಕಾಣಬೇಕು. ಜಾಗ ಯಾವುದೇ ಇರಲಿ ಮಕ್ಕಳು ಕೀಳಿರಿಮೆಯ ಭಾವನೆ ಬಿಟ್ಟು ದೊಡ್ಡ ಕನಸ್ಸು ಕಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ. ಹಾಗಾಗಿ ಮಕ್ಕಳು ಜೀವನದಲ್ಲಿ ಶಿಸ್ತು ಬೆಳೆಸಿಕೊಂಡು ಓದುವಕಡೆಗೆ ಮುಂದಾಗಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಯಿಂದ ದೊರೆಯುವ ಜ್ಞಾನ ಮಕ್ಕಳ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಕಷ್ಟು ಅನುಕೂಲವಾಗಲಿದೆ ಎಂದು ಭಾರತೀಯ ವಾಯು ಸೇನೆ ನಿವೃತ್ತ ಗ್ರೂಪ್ ಕ್ಯಾಪ್ಟನ್ ಎನ್.ಆರ್.ರವಿ ಹೇಳಿದರು.

ಪಟ್ಟಣದ ರೋಟರಿ ಎಜುಕೇಷನ್ ಟ್ರಸ್ಟ್‌ನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ನಾಲ್ಕಾರು ಜನರ ಜತೆ ಬೆರೆಯಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನವೃದ್ಧಿಸಿಕೊಳ್ಳಬೇಕು. ಇದರಿಂದ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳಿದಂತೆ ಮಕ್ಕಳು ಜೀವನದಲ್ಲಿ ದೊಡ್ಡಮಟ್ಟದಲ್ಲಿ ಕನಸ್ಸು ಕಾಣಬೇಕು. ಜಾಗ ಯಾವುದೇ ಇರಲಿ ಮಕ್ಕಳು ಕೀಳಿರಿಮೆಯ ಭಾವನೆ ಬಿಟ್ಟು ದೊಡ್ಡ ಕನಸ್ಸು ಕಂಡರೆ ಜೀವನದಲ್ಲಿ ಯಶಸ್ಸು ಸಾಧ್ಯ. ಹಾಗಾಗಿ ಮಕ್ಕಳು ಜೀವನದಲ್ಲಿ ಶಿಸ್ತು ಬೆಳೆಸಿಕೊಂಡು ಓದುವಕಡೆಗೆ ಮುಂದಾಗಬೇಕು ಎಂದರು.

ಸಾಮಾಜಿಕ ಕಳಕಳಿಯೊಂದಿಗೆ ನಮ್ಮ ಹಿರಿಯರು ಪಟ್ಟಣದಲ್ಲಿ ರೋಟರಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿಬೆಳೆಸಿದ್ದಾರೆ. ಸಂಸ್ಥೆ ಬೆಳವಣಿಗೆಗೆ ಹಲವು ಮಂದಿ ಸಹಾಯ, ಸಹಕಾರ ನೀಡಿದ್ದಾರೆ. ಈ ವೇಳೆ ಸಂಸ್ಥೆಗೆ ದುಡಿದ ಎಲ್ಲರು ಸ್ಮರಿಸಬೇಕು ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಆರ್.ತಿಮ್ಮೇಗೌಡ ಮಾತನಾಡಿ, ಶಾಲೆಗಳಲ್ಲಿ ಓದುವಂತಹ ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ, ಮಾನವೀಯ ಮೌಲ್ಯ ಹಾಗೂ ಪೋಷಕರನ್ನು ಗೌರವಿಸುವ ಗುಣಗಳನ್ನು ಕಲಿಸುವ ಕೆಲಸ ಮಾಡಬೇಕು ಎಂದರು.

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕೆಂಬ ಆಸೆಯಿಂದ ತಮ್ಮ ಜೀವನವನ್ನೇ ತ್ಯಾಗಮಾಡಿ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ, ಓದಿ ಮುಂದೆ ದೊಡ್ಡದೊಡ್ಡ ಹುದ್ದೆ, ಸ್ಥಾನಗಳನ್ನು ಅಲಂಕರಿಸುವ ಮಕ್ಕಳು ಕೊನೆ ದಿನಗಳಲ್ಲಿ ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುತ್ತಿದ್ದಾರೆ ಎಂದರು.

ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳವುದನ್ನು ಕಲಿಸದ ಶಿಕ್ಷಣ ಅದು ಶಿಕ್ಷಣವೇ ಅಲ್ಲ. ಸಮಾಜದಲ್ಲಿ ಹೆಚ್ಚು ವಿದ್ಯಾವಂತರೇ ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿದ್ದಾರೆ ಎನ್ನುವುದು ವಿಷಾದಕ. ಮಕ್ಕಳು ಯಾರು ತಮ್ಮ ಪೋಷಕರನ್ನು ವೃದ್ಧಾಶ್ರಮಕ್ಕೆ ಸೇರಿಸಬಾರದು ಎಂದರು.

ಪ್ರಸ್ತುತ ಮೊಬೈಲ್ ಮಕ್ಕಳಿಗೆ ದೊಡ್ಡ ಮಾರಕ ಕಾಯಿಲೆಯಾಗಿ ಕಾಡುತ್ತಿದೆ. ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವುದು ಪ್ರತಿಯೊಬ್ಬ ಪೋಷಕ, ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಇದೇ ವೇಳೆ ಶಾಲೆ ಸಂಸ್ಥಾಪಕ ಅಧ್ಯಕ್ಷ ಎನ್.ಟಿ.ರಂಗನಾಥನ್ ಅವರನ್ನು ಅಭಿನಂಧಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹಲವು ಹಾಡುಗಳಿಗೆ ಮಕ್ಕಳು ಅಮೋಘ ನೃತ್ಯ ಪ್ರದರ್ಶನ ನೀಡಿ ಪೋಷಕರನ್ನು ರಂಜಿಸಿದರು. ಸಮಾರಂಭದಲ್ಲಿ ರೋಟರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಅಶೋಕ್ ಕುಮಾರ್ ಮೆಹತ, ನಿರ್ದೇಶಕರಾದ ಪಿ.ರಮೇಶ್, ನಂಜುಂಡಶೆಟ್ಟಿ, ಸಂತೋಷ್, ಮುಖ್ಯ ಶಿಕ್ಷಕ ನಾರಾಯಣಸ್ವಾಮಿ ಸೇರಿದಂತೆ ಶಾಲೆ ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.