ಪ್ರತಿಯೊಬ್ಬರಿಗೂ ಹಳಗನ್ನಡ ಜ್ಞಾನ ಅವಶ್ಯಕ: ಶಾಸಕ ಡಾ.ಜಗದೀಶ ಗುಡಗುಂಟಿ

| Published : Nov 16 2024, 12:30 AM IST

ಪ್ರತಿಯೊಬ್ಬರಿಗೂ ಹಳಗನ್ನಡ ಜ್ಞಾನ ಅವಶ್ಯಕ: ಶಾಸಕ ಡಾ.ಜಗದೀಶ ಗುಡಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳಗನ್ನಡ ವಿಷಯ ಅರ್ಥೈಸಿಕೊಂಡು ಬೋಧನೆ ಮಾಡುವುದು ಕಷ್ಟಸಾಧ್ಯವಾಗಿರುವ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಕಾರ್ಯ ಶ್ಲಾಘನೀಯ

ಕನ್ನಡಪ್ರಭ ವಾರ್ತೆ ಜಮಖಂಡಿ

ಸಾಹಿತ್ಯ ಸೊಗಡು ಅರ್ಥೈಸಿಕೊಳ್ಳಲು ಹಳಗನ್ನಡ ಜ್ಞಾನ ಅವಶ್ಯವಾಗಿದೆ. ಹಳಗನ್ನಡ ಬಗ್ಗೆ ನಿರ್ಲಕ್ಷ್ಯ ಬೇಡ ಹಳಗನ್ನಡದ ಜ್ಞಾನ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ಶಾಸಕ ಡಾ.ಜಗದೀಶ ಗುಡಗುಂಟಿ ಹೇಳಿದರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗದ ಜ್ಞಾನಸಭಾಂಗಣದಲ್ಲಿ ಶುಕ್ರವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಡಾ.ಡಿ.ಎಲ್. ನರಸಿಂಹಚಾರ್ ದತ್ತಿನಿಧಿ ನಿಮಿತ್ತ ನಾಲ್ಕು ದಿನ ಹಳಗನ್ನಡ ಸಾಹಿತ್ಯಬೋಧನಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ಶ್ರೇಷ್ಠವಾದ ನಮ್ಮ ಕನ್ನಡ ಭಾಷೆಗೆ ಧಕ್ಕೆ ತರುವಂತ ಕಾಲಘಟ್ಟದಲ್ಲಿ ನಾವಿದ್ದು, ಅದರಲ್ಲಿ ಹಳಗನ್ನಡ ವಿಷಯ ಅರ್ಥೈಸಿಕೊಂಡು ಬೋಧನೆ ಮಾಡುವುದು ಕಷ್ಟಸಾಧ್ಯವಾಗಿರುವ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಕಾರ್ಯ ಶ್ಲಾಘನೀಯವಾಗಿದೆ. ಹಳಗನ್ನಡದ ಭಾಷಾ ಕೌಶಲವನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಭಾಷಾ ಶಿಕ್ಷಕರ ಮೇಲಿದೆ. ಪ್ರಾಚೀನತೆ ಹೊಂದಿದ ಕನ್ನಡ ಸಂಸ್ಕೃತಿ ಉಳಿಸಿ ಬೆಳೆಸಬೇಕಾಗಿದೆ. ಹಳಗನ್ನಡ ಸಾಹಿತ್ಯದ ಗಟ್ಟಿತನ ಬಿಟ್ಟು ಹೋದರೆ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವುದು ಕಠಿಣವಾಗಲಿದ್ದು, ಹಳಗನ್ನಡ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಅಭಿಪ್ರಾಯ ಪಟ್ಟರು.

ವಿಶ್ರಾಂತ ಕುಲಪತಿ ಭಾಷಾ ವಿದ್ವಾಂಸ ಡಾ.ಎ.ಮುರಗೆಪ್ಪ ಮಾತನಾಡಿ, ಬೇರೆ ಭಾಷೆಗಳ ಪ್ರಭಾವದ ಒತ್ತಡ ಸಮಯದಲ್ಲಿ ಕನ್ನಡ ಭಾಷೆ ಶ್ರೀಮಂತಿಕೆಯನ್ನು ನಮ್ಮ ಶಿಕ್ಷಕರು ಅರಿತುಕೊಂಡು ಪಾಠ ಬೋಧನೆ ಪರಂಪರೆ ರೂಢಿಸಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಭಾಷಾ ಪ್ರೌಢಿಮೆ ಮುಖ್ಯವಾಗಿದ್ದು, ಹಳಗನ್ನಡ ಸಾಹಿತ್ಯದಲ್ಲಿರುವ ಪದಗಳನ್ನು ಬಿಡಿಸಿ ಓದುವ ಭಾಷಾ ಅಭಿರುಚಿಯನ್ನು ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿಶ್ವವಿದ್ಯಾಯದ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿ, ಕಾಲ ಕ್ರಮೇಣ ಶಿಕ್ಷಕರು ಸಂಶೋಧನಾ ಪ್ರಬಂಧಗಳ ಅಧ್ಯಯನ ಅವಲೋಕಿಸಿ ಹೆಚ್ಚಿನ ಜ್ಞಾನ ಮಕ್ಕಳಿಗೆ ನೀಡಬೇಕು. ಹಳಗನ್ನಡ ಸಾಹಿತ್ಯವೆಂದರೆ ಅದು ನಮ್ಮ ಪೂರ್ವಜರ ಇತಿಹಾಸ, ಕನಸು, ಪರಂಪರೆಯನ್ನು ಹಾಗೂ ಪ್ರಾಚೀನತೆ ಅದ್ಯಯನ ಮಾಡಿದಂತೆ. ಹೊಸಗನ್ನಡದಲ್ಲಿ ಇಲ್ಲದಂತಹ ಅನೇಕ ಅಂಶಗಳನ್ನು ಭಾಷಾ ಗಟ್ಟಿತನವನ್ನು ಹಳಗನ್ನಡ ದಲ್ಲಿದೆ. ಇಂದಿನ ಶಿಕ್ಷಕರಿಗೆ ಹಳಗನ್ನಡ ಸಾಹಿತ್ಯ ಬೋಧನೆ ಶಿಬಿರ ಅಗತ್ಯವಾಗಿದೆ ಎಂದರು.

ಕನ್ನಡ ವಿ.ವಿ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಶಿಬಿರದ ಮುಖ್ಯಸ್ಥ ಡಾ.ವೀರೇಶ ಬಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಆನಂದ ದೇಶಪಾಂಡೆ, ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಅಧ್ಯಕ್ಷ ಪ್ರೊ.ಪಿ.ಬಿ.ಬಡಿಗೇರ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಸಂತೋಷ ತಳಕೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸನ್ನವರ ಉಪಪ್ರಾಚಾರ್ಯ ಮಹಾಂತೇಶ ನರಸನಗೌಡರ, ಹಿರಿಯ ಸಾಹಿತಿ ತಾತಾಸಾಹೇಬ ಬಾಂಗಿ, ಸಿದ್ದಣ್ಣ ಉತ್ನಾಳ, ಡಾ.ಚಂದ್ರಶೇಖರ ಕಾಳನ್ನವರ, ಸಂಗಮೇಶ ಬಡಿಗೇರ ಸಹಿತ ಹಲವರು ಇದ್ದರು.

ಬಿ.ಸಿ.ಮಲಕನ್ನವರ ನಿರೂಪಿಸಿ, ಎ.ಎಸ್.ಬಾಗಿ ವಂದಿಸಿದರು. 4 ದಿನಗಳ ಶಿಬಿರದಲ್ಲಿ ೮೦ಕ್ಕೂ ಹೆಚ್ಚು ಜನ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮುಂಚೆ ನಗರದ ಎ.ಜಿ.ದೇಸಾಯಿ ವೃತ್ತದಿಂದ ಡಾ.ರಾಜಕುಮಾರ ರಸ್ತೆ ಮಾರ್ಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಭುವನೇಶ್ವರಿ ಮೆರವಣಿಗೆ ಜರುಗಿತು. ಲಿಂಗೈಕ್ಯ ಓಲೇಮಠದ ಡಾ.ಚೆನ್ನಬಸವ ಶ್ರೀಗಳಿಗೆ ಒಂದು ನಿಮಿಷ ಮೌನಾಚರಣೆಯೊಂದಿಗೆ ಶೃದ್ಧಾಂಜಲಿ ಸಲ್ಲಿಸಲಾಯಿತು.