ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳಕನ್ನಡದ ಪರಂಪರೆ ತಿಳಿದವರಿಂದ ಕನ್ನಡ ಕಟ್ಟಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.
ಅವರು ಹೆಬ್ರಿ ತಾಲೂಕಿನ ಮುದ್ರಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಬಾತನಯ ಮುದ್ರಾಡಿ ವೇದಿಕೆಯಲ್ಲಿ ಆಯೋಜಿಸಲಾದ ನಾಲ್ಕನೇ ಸಾಹಿತ್ಯ ಸಮ್ಮೇಳನ ‘ಚೈತ್ರ ನಂದನ’ ಉದ್ಘಾಟಿಸಿ ಮಾತನಾಡಿದರು.ಜ್ಞಾನದ ಮನೋವೇದಿಕೆ ತೆರೆಡಿಡುವ ಭಾವ ಕನ್ನಡಕ್ಕಿದೆ. ಕನ್ನಡಕ್ಕೆ ಪ್ರಪಂಚದ ಜ್ಞಾನದ ಬೆಳಕು ಬಿದ್ದಾಗ ವಿಶ್ವಮಾನ್ಯವಾಗುತ್ತದೆ. ವಿಶ್ವ ಭಾವನೆಯ ಮನೋವೇದಿಕೆ ಬೆಳೆಸಿಕೊಳ್ಳಬೇಕು. ಭಾಷೆ ಬೇರೆ ಬೇರೆಯಾದರೂ ಭಾವವೊಂದೆಯಾಗಿದೆ. ಭಾಷೆ ಮಾನವ ನಿರ್ಮಿತವಾಗಿದೆ. ಸಾಹಿತ್ಯಕ್ಕೆ ಜಾತಿ ವರ್ಣ ಮತವನ್ನು ಅಂಟಿಸಬೇಡಿ. ಅಸ್ಪೃಶ್ಯತೆ ಬೇಡ ಎಂದು ಕಿವಿಮಾತು ಹೇಳಿದರು.ಕಬ್ಬಿನಾಲೆ ಬಾಲಕೃಷ್ಣ ಹೆಬ್ಬಾರ್ ಅಧ್ಯಕ್ಷತೆ ವಹಿಸಿ, ಸಂಸ್ಕೃತಿ ಎಂದರೆ ಕೇವಲ ಕನ್ನಡ ಸಂಸ್ಕೃತಿಯಲ್ಲ. ಅದು ನಮ್ಮೊಳಗಿನ ಬಹುಭಾಷಾ ಸಂಸ್ಕೃತಿ. ಅಲ್ಲಿ ಕುಂದಗನ್ನಡ, ಹವಿಗನ್ನಡವಿದೆ, ತುಳು, ಕೊಂಕಣಿ ಇದೆ. ಇವೆಲ್ಲ ಇದ್ದರೂ ನಾವು ನಮ್ಮನ್ನು ಕನ್ನಡಿಗರೆಂದೇ ಹೇಳಿಕೊಂಡು ಬಂದಿದ್ದೇವೆ. ಇದು ನಿಜವಾದ ಕನ್ನಡಿಗನ ಭಾಷಾ ಪ್ರೀತಿ. ಈ ಏಕತೆ ನಮ್ಮ ನೀರಿಗಾಗಿಯೂ, ಭೂಮಿಗಾಗಿಯೂ ಒಂದಾಗಬೇಕು. ನಮ್ಮ ಜಲ ಸಂಪತ್ತು ಮೊದಲು ನಮ್ಮ ಉಳಿವಿಗಾಗಿ ಸಲ್ಲಬೇಕು ಎಂದರು.ಹೆಬ್ರಿ ಕಸಾಪ ಅಧ್ಯಕ್ಷ ಶ್ರೀ ನಿವಾಸ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು.ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಅನುದಾನಿತ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ಕೊರತೆಯಿದ್ದು, ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಕನ್ನಡ ಶಾಲೆಗಳನ್ನು ಉಳಿಸಲು ಪ್ರಯತ್ನಿಸುವಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಒತ್ತಾಯಿಸಿದರು. ಶಿರ್ವ ಕಸಾಪ ಅಧ್ಯಕ್ಷ ಪುಂಡಲೀಕ ಮರಾಠೆ, ಹೆಬ್ರಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಲೀಲಾವತಿ, ವರಂಗ ವ್ಯವಸಾಯ ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಬಾಯರಿ, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ, ಉಡುಪಿ ಕಸಾಪ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರ ಕುಮಾರ್ ಕೋಟ, ಮನೋಹರ ಪಿ., ಆನಂದ ಸಾಲಿಗ್ರಾಮ, ಕಾರ್ಕಳ ಶಿಕ್ಷಕರ ಸಂಘ ಅಧ್ಯಕ್ಷ ರಮಾನಂದ ಶೆಟ್ಟಿ, ಕಾರ್ಕಳ ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ, ಕನ್ನಡ ಪರ ಸಂಘಟಕ ಅಣ್ಣಪ್ಪ ಕುಲಾಲ್ ಮಂಡಾಡಿಜೆಡ್ಡು, ಉದ್ಯಮಿಗಳಾದ ಗೋಪಿನಾಥ್ ಭಟ್ ಮುನಿಯಾಲು, ಗಣೇಶ್ ಕಿಣಿ, ದಿನೇಶ್ ಪೈ, ಭಾಸ್ಕರ ಜೋಯಿಸ್, ಎಸ್.ಆರ್. ಕಾಲೇಜಿನ ಅಧ್ಯಕ್ಷ ನಾಗರಾಜ ಶೆಟ್ಟಿ, ಹೆಬ್ರಿ ಠಾಣೆ ಠಾಣಾಧಿಕಾರಿ ಮಹೇಶ್ ಟಿ.ಎಂ., ಜವಳಿ ವರ್ತಕರ ಸಂಘ ಅಧ್ಯಕ್ಷ ಯೋಗೇಶ್ ಭಟ್ ಹೆಬ್ರಿ, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷ ತಾರನಾಥ ಬಂಗೇರ, ಉಡುಪಿ ಕಸಾಪ ಅಧ್ಯಕ್ಷ ರವಿರಾಜ ಎಚ್.ಪಿ. ಉಪಸ್ಥಿತರಿದ್ದರು.
ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಮುನಿಯಾಲು ಗಣೇಶ್ ಶೆಣೈ, ಸಾಹಿತ್ಯ ಸಮ್ಮೇಳನದ ಧ್ವಜ ಹಸ್ತಾಂತರಿಸಿದರು.ಗುರುಪ್ರಸಾದ್ ಸುಬ್ಬಣ್ಣ ಕಟ್ಟೆ, ಕಜ್ಕೆ ಮಂಜುನಾಥ ಕಾಮತ್, ಅಕ್ಕಮ್ಮ ಕೇಶವ ಶೆಟ್ಟಿಗಾರ್ ಅವರನ್ನು ಅಭಿನಂದಿಸಲಾಯಿತು.
ಪ್ರಕಾಶ್ ಪೂಜಾರಿ ಮಾತಿಬೆಟ್ಟು, ಚಂದ್ರ ಶೇಖರ್ ಭಟ್, ಚೈತ್ರ ಕಬ್ಬಿನಾಲೆ ಕಾರ್ಯಕ್ರಮ ನಿರೂಪಿಸಿದರು. ಹೆಬ್ರಿ ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ ಕುಲಾಲ್ ವಂದಿಸಿದರು.* ಸಾಧಕರಿಗೆ ಸನ್ಮಾನ
ಸುಕುಮಾರ್ ಮೋಹನ್ ಮುದ್ರಾಡಿ (ನಾಟಕ), ದಾಸ ಶೆಟ್ಟಿ ಮೇಗದ್ದೆ (ಕೃಷಿ), ಪೇತ್ರಿ ಭಾಸ್ಕರ ರಾವ್ (ಪತ್ರಿಕೆ), ಡಾ.ರಾಘವೇಂದ್ರ ಬಡ್ಕಿಲ್ಲಾಯ (ವಿಜ್ಞಾನಿ), ನೋಣಯ್ಯ ಬಂಗೇರ (ಧಾರ್ಮಿಕ), ಮಂಡಾಡಿಜೆಡ್ಡು ಲೀಲಾ ಕೆ. ಶೆಟ್ಟಿ (ನಾಟಿವೈದ್ಯ), ಪ್ರಭಾಕರ ಶೆಟ್ಟಿ ಬೇಳಂಜೆ (ಯಕ್ಷಗಾನ), ರಂಗ ಪಾಣರ (ದೈವರಾಧನೆ), ವೀರಣ್ಣ ನಾಯ್ಕ(ಕರಕೌಶಲ್ಯ) ಅವರನ್ನು ಸನ್ಮಾನಿಸಲಾಯಿತು.ಮಂಜುನಾಥ ಪೂಜಾರಿ ಪುಸ್ತಕ ಮಳಿಗೆಗಳನ್ನು ಉದ್ಘಾಟಿಸಿದರು. ವಿವಿಧ ಗೋಷ್ಠಿಗಳು ನಡೆಯಿತು.
* ಧ್ವಜಾರೋಹಣ: ಮುದ್ರಾಡಿ ಗ್ರಾ.ಪಂ. ಅಧ್ಯಕ್ಷೆ ವಸಂತಿ ಪೂಜಾರಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಹೆಬ್ರಿ ಕ.ಸಾ.ಪ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಪರಿಷತ್ತಿನ ಧ್ವಜಾರೋಹಣ ನೆರವೇರಿಸಿದರು.* ಆಕರ್ಷಕ ಮೆರವಣಿಗೆಮುದ್ರಾಡಿ ಗಣಪತಿ ದೇವಸ್ಥಾನದಿಂದ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನು ಸ್ವಾಗತಿಸಿ, ಭವ್ಯ ಮೆರವಣಿಗೆಯಲ್ಲಿ ವೇದಿಕೆ ಕರೆ ತರಲಾಯಿತು. ನಾಡು, ನುಡಿಯ ಭಾವಚಿತ್ರ ಹಿಡಿದ ವಿದ್ಯಾರ್ಥಿಗಳು, ಸೇವಾದಳ ವಿದ್ಯಾರ್ಥಿಗಳು, ಯಕ್ಷಗಾನ, ಕುದುರೆ, ವಿವಿಧ ವೇಷ ಭೂಷಣಗಳು, ಚೆಂಡೆವಾದನ, ವಿವಿಧ ಶಿಕ್ಷಣ ಸಂಸ್ಥೆಗಳ ಬ್ಯಾಂಡ್ ಸೆಟ್, ಮೈಸೂರು ಕಂಸಾಳೆ ನೃತ್ಯ, ತಟ್ಟಿರಾಯ, ಸಾಹಿತಿಗಳು, ಕನ್ನಡ ಶಾಲು ಧರಿಸಿ ಗಣ್ಯರು, ಸಾಹಿತ್ಯಾಭಿಮಾನಿಗಳು, ಸಾರ್ವಜನಿಕರು ಮೆರವಣಿಗೆಯಲ್ಲಿ ಸಾಗಿದರು. ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ಮುದ್ರಾಡಿಯ ಡಾ. ಎಂ.ಎಸ್. ರಾವ್ ಮೆರವಣಿಗೆಗೆ ಚಾಲನೆ ನೀಡಿದರು.