ವಿದ್ಯೆಯ ಜತೆ ಕಾನೂನಿನ ಅರಿವು ಅಗತ್ಯ: ಎಸ್ಪಿ ಮಿಥುನ್‍ಕುಮಾರ್

| Published : Aug 30 2024, 01:06 AM IST

ಸಾರಾಂಶ

ಶಿವಮೊಗ್ಗದ ಡಿವಿಎಸ್ ಆಡಳಿತ ಮಂಡಳಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಡಿವಿಎಸ್ ಪದವಿ ಪೂರ್ವ (ಸ್ವ) ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು-ಅಪರಾಧ-ಜಾಗೃತಿ-ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾರ್ಥಿಗಳು ವಿದ್ಯೆ ಕಲಿಕೆಯ ಜೊತೆಗೆ ಕಾನೂನಿನ ಅರಿವು ಪಡೆದುಕೊಳ್ಳುವುದು ಇಂದಿನ ಅಗತ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‍ಕುಮಾರ್ ಹೇಳಿದರು.

ಇಲ್ಲಿನ ಡಿವಿಎಸ್ ಆಡಳಿತ ಮಂಡಳಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಡಿವಿಎಸ್ ಪದವಿ ಪೂರ್ವ (ಸ್ವ) ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನು-ಅಪರಾಧ- ಜಾಗೃತಿ - ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳೇ ನಿಮ್ಮ ಉಜ್ವಲ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ, ಕಾನೂನನ್ನು ಅರಿಯುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನ ಬಂಗಾರದ ಜೀವನ ನಿಜ. ಆದರೆ, ದಾರಿ ತಪ್ಪಿದ್ದರೆ ಅದು ಘೋರ ಜೀವನವಾಗುತ್ತದೆ. ಹದಿಹರೆಯದ ಈ ವಯಸ್ಸಿನಲ್ಲಿ ಕೆಟ್ಟ ಅಲೋಚನೆಗಳು ಬಹುಬೇಗ ಬಂದು ಬಿಡುತ್ತವೆ. ಹೀಗಾಗಿ ಈ ವಯಸ್ಸಿನಲ್ಲಿ ದುಶ್ಚಟಗಳಿಂದ ದೂರವಿರಬೇಕು. ಕಾಲೇಜಿಗೆ ಬಂದ ಮೇಲೆ ಆರೇಳು ವರ್ಷ ಕಷ್ಟಪಟ್ಟು ಓದಿದರೆ ಇಡೀ ಜೀವನ ಪರ್ಯಂತ ಉತ್ತಮ ಜೀವನ ನಡೆಸಬಹುದು ಎಂದರು.

ಕಾನೂನಿನ ಅರಿವು ಎಲ್ಲರಿಗೂ ಮುಖ್ಯ. ಅದರಲ್ಲೂ ವಿದ್ಯಾರ್ಥಿಗಳು ನನಗೆ ಕಾನೂನು ಗೊತ್ತಿಲ್ಲ ಎಂದು ಹೇಳುವ ಆಗಿಲ್ಲ. ಕಾನೂನಿನ ಅರಿವು ಮತ್ತು ಪಾಲನೆ ಅತಿ ಅಗತ್ಯ. ಇತ್ತೀಚಿನ ವರ್ಷಗಳಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ವಿಷಾದಕರ. ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಪೊಲೀಸ್‌ ಇಲಾಖೆ ಅತ್ಯಂತ ಕಠಿಣ ಕ್ರಮಕೈಗೊಂಡಿದೆ. ಕಾಲೇಜುಗಳ ಆವರಣ ಅಥವಾ ನಿಮ್ಮ ಸುತ್ತಮುತ್ತ ಗಾಂಜಾ ಸೇವನೆ ಅಥವಾ ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಿದರು.

ಸೈಬರ್ ಅಪರಾಧಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಬೆಂಗಳೂರಿನಂತಹ ದೊಡ್ಡ ದೊಡ್ಡ ನಗರಗಳಲ್ಲಿ 3 ಅಪರಾಧಗಳಾದರೆ ಅದರಲ್ಲಿ ಒಂದು ಅಪರಾಧ ಸೈಬರ್ ಅಪರಾಧವೇ ಆಗಿರುತ್ತದೆ. ಮೊಬೈಲ್ ಇಂದು ಅಗತ್ಯ ಸಾಧನವಾಗಿದೆ. ಆದರೆ, ಇದನ್ನು ಬಳಸುವಾಗ ಅತ್ಯಂತ ಎಚ್ಚರಿಕೆ ಅಗತ್ಯ. ನೂರಾರು ಜನರು ಲಕ್ಷಾಂತರ ಹಣವನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಯಾರಿಗೂ ನಿಮ್ಮ ಮಾಹಿತಿ ಕೊಡಬೇಡಿ. ಓಟಿಪಿ ಬಗ್ಗೆ ಅತಿ ಎಚ್ಚರವಿರಲಿ, ಅಪರಿಚಿತರೊಡನೆ ಎಚ್ಚರಿಕೆಯಿಂದ ಇರಿ. ಆಕರ್ಷಿತರಾಗಿ ಮೋಸ ಹೋಗಬೇಡಿ ಎಂದು ಕಿವಿಮಾತು ಹೇಳಿದರು.

ಪ್ರ್ರಾಸ್ತಾವಿಕವಾಗಿ ಮಾತನಾಡಿದ ವಿದ್ವಾನ್ ದತ್ತಮೂರ್ತಿ ಭಟ್, ಡಿವಿಎಸ್ ಸಂಸ್ಥೆ ವಿದ್ಯಾರ್ಥಿಗಳಿಗಾಗಿ ಕಾನೂನಿನ ಅರಿವು ಕಾರ್ಯಕ್ರಮವನ್ನು ಆಯೋಜಿಸಿದೆ. ಉತ್ತಮ ಬದುಕಿಗೆ ಕಾನೂನಿನ ಪಾಲನೆ ಅತಿ ಅವಶ್ಯಕವಾಗಿದೆ. ಅದರಲ್ಲಿ ವಿದ್ಯಾರ್ಥಿಗಳು ಕಾನೂನನ್ನು ತಿಳಿದುಕೊಳ್ಳುವುದಲ್ಲದೆ ಪಾಲನೆ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಿವಿಎಸ್ ಸಂಸ್ಥೆಯ ಅಧ್ಯಕ್ಷ ರುದ್ರಪ್ಪಗೌಡ ಕೊಳಲೆ ಮಾತನಾಡಿ, ಕಾನೂನಿಗೆ ಗೌರವ ಕೊಡಿ. ಕಾನೂನನ್ನು ನೀವು ರಕ್ಷಣೆ ಮಾಡಿದರೆ. ಕಾನೂನು ನಿಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ರಕ್ಷಣಾಧಿಕಾರಿ ಅನಿಲ್‍ ಕುಮಾರ್ ಭೂಮರೆಡ್ಡಿ, ಡಿವಿಎಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ರಾಜಶೇಖರ್, ಪ್ರಾಂಶುಪಾಲ ಎ.ಇ.ರಾಜಶೇಖರ್, ಶಿಕ್ಷಕ ಪ್ರತಿನಿಧಿ ಎಚ್.ಸಿ.ಉಮೇಶ್ ಇದ್ದರು. ಮಹೇಂದ್ರ ಕುಮಾರ್ ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ನಡೆದ ಕಾರ್ಯಾಗಾರದಲ್ಲಿ ಸೈಬರ್ ಕ್ರೈಂ ಅಪರಾಧಗಳು ಸಂಚಾರಿ ನಿಯಮ ಪೋಕ್ಸೋ ಕಾಯ್ದೆ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ಮಾತನಾಡಿ, ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದರು.