ಪೋಕ್ಸೋ, ಬಾಲನ್ಯಾಯ, ಬಾಲ್ಯವಿವಾಹ ಕಾಯ್ದೆಗಳ ಕುರಿತು ತಿಳಿವಳಿಕೆ ಇರಬೇಕು: ಕೆ. ಗುರುಪ್ರಸಾದ

| Published : Feb 09 2024, 01:51 AM IST

ಪೋಕ್ಸೋ, ಬಾಲನ್ಯಾಯ, ಬಾಲ್ಯವಿವಾಹ ಕಾಯ್ದೆಗಳ ಕುರಿತು ತಿಳಿವಳಿಕೆ ಇರಬೇಕು: ಕೆ. ಗುರುಪ್ರಸಾದ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲನ್ಯಾಯ ಕಾಯ್ದೆಯಲ್ಲಿ ೧೮ ವರ್ಷದೊಳಗಿನ ಮಗು ವ್ಯಕ್ತಿಯನ್ನು ಬಾಲಾಪರಾಧಿ ಎಂದು ಹೇಳಿರುವುದಿಲ್ಲ, ಕಾನೂನು ಸಂಘರ್ಷಕ್ಕೊಳಪಟ್ಟ ಮಗು ಎಂದು ಕರೆಯಲಾಗುತ್ತದೆ. ಇಂತಹ ಮಕ್ಕಳನ್ನು ಸಾಮಾನ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಿಲ್ಲ ಅದರ ಬದಲಾಗಿ ಬಾಲನ್ಯಾಯ ಮಂಡಳಿಯಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಕೆ. ಗುರುಪ್ರಸಾದ ಹೇಳಿದರು.

ಗದಗ: ಪೋಕ್ಸೋ ಕಾಯ್ದೆ, ಬಾಲನ್ಯಾಯ ಕಾಯ್ದೆ, ಬಾಲ್ಯವಿವಾಹ ಕಾಯ್ದೆಗಳ ಕುರಿತು ಪ್ರತಿಯೊಬ್ಬರಿಗೂ ತಿಳಿವಳಿಕೆ ಇರಬೇಕು. ಬಾಲನ್ಯಾಯ ಕಾಯ್ದೆಯಲ್ಲಿ ೧೮ ವರ್ಷದೊಳಗಿನ ಮಗು ವ್ಯಕ್ತಿಯನ್ನು ಬಾಲಾಪರಾಧಿ ಎಂದು ಹೇಳಿರುವುದಿಲ್ಲ, ಕಾನೂನು ಸಂಘರ್ಷಕ್ಕೊಳಪಟ್ಟ ಮಗು ಎಂದು ಕರೆಯಲಾಗುತ್ತದೆ. ಇಂತಹ ಮಕ್ಕಳನ್ನು ಸಾಮಾನ್ಯವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಿಲ್ಲ ಅದರ ಬದಲಾಗಿ ಬಾಲನ್ಯಾಯ ಮಂಡಳಿಯಲ್ಲಿ ಹಾಜರುಪಡಿಸಲಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ಕೆ. ಗುರುಪ್ರಸಾದ ಹೇಳಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಆರ್.ಟಿ.ಇ ಕಾಯ್ದೆ, ಫೋಕ್ಸೋ ಕಾಯ್ದೆ, ಬಾಲಕಾರ್ಮಿಕ ಹಾಗೂ ಭಿಕ್ಷಾಟನೆ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಗಳ ಕುರಿತು ವಸತಿ ಶಾಲೆಗಳ ಪ್ರಾಂಶುಪಾಲರು, ವಸತಿ ನಿಲಯಗಳ ಮೇಲ್ವಿಚಾರಕರು ಹಾಗೂ ಸರಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಿಗೆ ಹಮ್ಮಿಕೊಂಡ ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಮಾತನಾಡಿ, ಎಲ್ಲಾ ಮುಖ್ಯೋಪಾಧ್ಯಾಯರುಗಳು ಬಾಲ್ಯವಿವಾಹ ನಿಷೇಧಾಧಿಕಾರಿಗಳಾಗಿರುತ್ತಾರೆ. ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ಇರಬೇಕು. ಅದೇ ರೀತಿ ಹಾಸ್ಟೆಲ್ ವಾರ್ಡನ್‌ಗಳು ಕೂಡಾ ಮಕ್ಕಳಿಗೆ ಸಂಬಂಧಿಸಿದ ನೀತಿ, ನಿಯಮಗಳನ್ನು ತಿಳಿದುಕೊಂಡು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.

ಈ ವೇಳೆ ಹರೀಶ ಜೋಗಿ ಮಕ್ಕಳ ಹಕ್ಕುಗಳ, ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಹಾಗೂ ಸಿಸ್ಟರ್ ಡುಲ್ಸಿನ್, ಬಾಲನ್ಯಾಯ ಕಾಯ್ದೆ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ ಕುರಿತು, ದತ್ತು ಮಾರ್ಗಸೂಚಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ., ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಅಮಿತ ಬಿದರಿ, ಪೊಲೀಸ್ ಇಲಾಖೆಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿಗಳು ಇದ್ದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಫೀಕಾ ಹಳ್ಳೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲಪ್ಪ ಹೊಸಳ್ಳಿ ನಿರೂಪಿಸಿದರು.