ಸಾರಾಂಶ
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಟೈಮ್ಸ್ ಸಮೂಹ ಸಂಸ್ಥೆಯು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ನಗರದ ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ. ಪ್ರದೀಪ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ನಮ್ಮ ಟೈಮ್ಸ್ ಸಮೂಹ ಸಂಸ್ಥೆಯು ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ನಗರದ ಟೈಮ್ಸ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ. ಪ್ರದೀಪ್ ತಿಳಿಸಿದರು.ತಾಲೂಕಿನ ಕೆರೆಗೋಡಿ-ರಂಗಾಪುರ ಶ್ರೀಮಠದ ಎಸ್‌ಪಿಎಸ್ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಟೈಮ್ಸ್ ಸಮೂಹ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸೈನ್ಸ್ ಎಕ್ಸ್‌ಪೋ-೨೦೨೪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದು ಅದರಂತೆ ವಿದ್ಯಾರ್ಥಿಗಳು ಸೂಕ್ಷ್ಮತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು. ವೈಜ್ಞಾನಿಕ ಮನೋಭಾವಗಳನ್ನು ವೃದ್ಧಿಸಿಕೊಂಡು ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ವಿಜ್ಞಾನ, ತಂತ್ರಜ್ಞಾನ ಈ ಮಟ್ಟಕ್ಕೆ ಬೆಳೆಯದಿದ್ದರೆ ದೇಶ, ಜನರು ಸಾಕಷ್ಟು ಹಿಂದುಳಿಯುತ್ತಿದ್ದರು. ವಿಜ್ಞಾನವನ್ನು ಮನುಷ್ಯ ಹೇಗೆ ಬೇಕಾದರೂ ಬಳಸಿಕೊಳ್ಳಬಹುದಾಗಿದ್ದು ವಿದ್ಯಾರ್ಥಿಗಳು ವಿಜ್ಞಾನ ಹಾಗೂ ತಂತ್ರಜ್ಞಾನವನ್ನು ಒಳ್ಳೆಯದಕ್ಕೆ ಬಳಸುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಸಂಸ್ಥೆಯು ತಾಲೂಕಿನ ಪ್ರತಿ ಪ್ರೌಢಶಾಲೆಗಳಲ್ಲಿ ಸೈನ್ಸ್ ಎಕ್ಸ್‌ಪೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಇದರ ಪ್ರಯೋಜನ ಪಡೆದುಕೊಂಡು ಹೊಸ ಹೊಸ ಆವಿಷ್ಕಾರಗಳತ್ತ ಮುಖ ಮಾಡಬೇಕೆಂದರು.ಕಾರ್ಯಾಗಾರದಲ್ಲಿ ಟೈಮ್ಸ್ ಸಂಪನ್ಮೂಲ ವ್ಯಕ್ತಿ ಟಿ.ಎನ್. ಪಾರ್ಥಾ ಪ್ರಾತ್ಯಕ್ಷಿಕೆಗಳ ಮೂಲಕ ವಿಜ್ಞಾನ ಪ್ರಯೋಗಗಳನ್ನು ಮಕ್ಕಳಿಗೆ ತೋರಿಸಿಕೊಟ್ಟು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಟೈಮ್ಸ್ ಸಂಸ್ಥೆಯ ಆಡಳಿತಾಧಿಕಾರಿ ಅನೂಪ್, ಉಪನ್ಯಾಸ ಯೋಗೀಶ್, ಶಾಲೆಯ ಆಡಳಿತಾಧಿಕಾರಿ ಲೋಕೇಶ್ ಸೇರಿದಂತೆ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.