ಶಿಕ್ಷಣವು ಬದಲಾವಣೆಗಿಂತ ಪರಿವರ್ತನೆಯ ಜಾಗದಲ್ಲಿದೆ. ಶಿಕ್ಷಣದ ಜೊತೆಗೆ ಕೌಶಲ್ಯಗಳ ಜ್ಞಾನ ಬಹಳ ಮುಖ್ಯ.

ಕನ್ನಡಪ್ರಭ ವಾರ್ತೆ ಕಾರವಾರ

ಶಿಕ್ಷಣವು ಬದಲಾವಣೆಗಿಂತ ಪರಿವರ್ತನೆಯ ಜಾಗದಲ್ಲಿದೆ. ಶಿಕ್ಷಣದ ಜೊತೆಗೆ ಕೌಶಲ್ಯಗಳ ಜ್ಞಾನ ಬಹಳ ಮುಖ್ಯ ಎಂದು ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ಶೋಭಾ ಜಿ. ಹೇಳಿದರು.ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು (ಸ್ವಾಯತ್ತ) ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಹೋಟೆಲ್ ಈಡನ್ ನಲ್ಲಿ ಫಲಿತಾಂಶ ಆಧಾರಿತ ಶಿಕ್ಷಣ ಮತ್ತು ಕೌಶ್ಯಲ ಅಭಿವೃದ್ಧಿ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿ ಕಲಿಕೆ ಮಾತ್ರವಲ್ಲ. ಕಲಿತದ್ದನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ಕಲಿತದ್ದರಿಂದ ಹೇಗೆ ಪರಿವರ್ತನೆಯನ್ನು ಹೊಂದುತ್ತಾರೆ ಎನ್ನುವುದು ಎಲ್ಲರಿಗೂ ಒಂದು ಪ್ರಶ್ನೆಯಾಗಿದೆ. ಪುಸಕ್ತ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲ್ಯ, ಮನಸ್ಥಿತಿ, ವರ್ತನೆಗಳ ಜ್ಞಾನ ಬಹಳ ಮುಖ್ಯವಾಗುತ್ತದೆ. ಮನೋಭಾವ, ಮೌಲ್ಯಗಳು ಮತ್ತು ಡಿಜಿಟಲ್ ಕೌಶಲ್ಯಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಶಿಕ್ಷಣವು ವಿದ್ಯಾರ್ಥಿ ಭವಿಷ್ಯವನ್ನು ರೂಪಿಸುತ್ತದೆ. ಉಪನ್ಯಾಸಕರು ಕೌಶಲ್ಯಗಳ ಜ್ಞಾನವನ್ನು ಪಡೆದು ವಿದ್ಯಾರ್ಥಿಗಳನ್ನು ಬದಲಾವಣೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲೆ ಗೀತಾ ಎಸ್. ವಾಲಿಕಾರ, ಹುಬ್ಬಳ್ಳಿ ದೇಶಪಾಂಡೆ ಎಜುಕೇಶನಲ್ ಟ್ರಸ್ಟ್‌ನ ಸಿಇಒ ಮತ್ತು ಮ್ಯಾನೇಜಿಂಗ್ ಟ್ರಸ್ಟಿಯ ಪಿ.ಎನ್. ನಾಯಕ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಸದಸ್ಯ ಮತ್ತು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಎ. ನಾರಾಯಣ, ಹುಬ್ಬಳ್ಳಿ ದೇಶಪಾಂಡೆ ಎಜುಕೇಶನಲ್ ಟ್ರಸ್ಟ್‌ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಯೋಗೇಶ್ ಭಟ್, ರೂಸಾ ಸಂಯೋಜಕ ಡಾ. ಪ್ರಭಾಕರ್ ಎಂ.ಸಿ., ರೂಸಾ ನೋಡಲ್ ಅಧಿಕಾರಿ ಡಿಸಿಇ ಡಾ. ಶ್ರೀಂಕಾತ ಆರ್. ಇದ್ದರು.