ಧಾರವಾಡ: ಎಂಜಿನಿಯರಿಂಗ್ ಓದಬಯಸುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಕೌಶಲ್ಯಗಳ ಜೊತೆಗೆ ತಾಂತ್ರಿಕ ಕೌಶಲ್ಯಗಳ ಅರಿವು ಕಡ್ಡಾಯ ಎಂದು ಐಐಐಟಿ ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಕೆ. ಗೋಪಿನಾಥ ಹೇಳಿದರು.
ಇಲ್ಲಿಯ ಆಲೂರು ಭವನದಲ್ಲಿ ಐಎಸ್‌ಸಿಟಿ ಸಂಸ್ಥೆಯು 30ನೇ ವರ್ಷದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಎಂಜಿನಿಯರಿಂಗ್ ಪದವಿಗೆ ಸಿದ್ಧರಾಗಿ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಎಸ್ಸೆಸ್ಸೆಲ್ಸಿ-ಪಿಯುಸಿ ಅಧ್ಯಯನಕ್ಕೂ ಹಾಗೂ ಮುಂದುವರಿದು ಎಂಜಿನಿಯರಿಂಗ್ ಓದಿಗೆ ತುಂಬಾ ವ್ಯತ್ಯಾಸವಿದೆ. ಈ ಹಿನ್ನೆಲೆಯಲ್ಲಿ ಪಿಯುಸಿ ನಂತರದ ಎಂಜಿನಿಯರಿಂಗ್ ಓದಿಗೆ ಬೇಕಾದ ತಾಂತ್ರಿಕ ಕೌಶಲ್ಯಗಳ ಅರಿವಿನೊಂದಿಗೆ ಮುಂದುವರಿಯಬೇಕು. ಎಂಜಿನಿಯರಿಂಗ್‌ನಲ್ಲಿ ಬರೀ ಸಿಎಸ್, ಮೆಕ್ಯಾನಿಕ್, ಸಿವಿಲ್ ಮಾತ್ರವಲ್ಲದೇ ಸಾಕಷ್ಟು ವಿಭಾಗಗಳಿದ್ದು, ತಂತ್ರಜ್ಞಾನದ ಯುಗದಲ್ಲಿ ವಿದ್ಯಾರ್ಥಿಯ ಆಸಕ್ತಿಗೆ ತಕ್ಕಂತೆ ಪಾಲಕರು ಅವರ ಅಧ್ಯಯನಕ್ಕೆ ಅನುಕೂಲ ಕಲ್ಪಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಐಐಐಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ವಸುದೇವ ಪರ್ವತಿ ಮಾತನಾಡಿ, ಎಂಜಿನಿಯರಿಂಗ್ ಓದು ಸಂಪೂರ್ಣ ವೃತ್ತಿಪರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಕಲಿತಿದ್ದನ್ನೇ ಔದ್ಯೋಗಿಕ ಜೀವನದಲ್ಲಿ ಅಳವಡಿಸುತ್ತೀರಿ. ಈ ಹಿನ್ನೆಲೆಯಲ್ಲಿ ಈ ಓದು ತುಂಬ ಮಹತ್ವ ಹಾಗೂ ನಿಮ್ಮ ಉತ್ತಮ ಭವಿಷ್ಯವನ್ನು ಅದು ನಿರ್ಧರಿಸುತ್ತದೆ ಎಂದರು.ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜು ಐಎಸ್‌ಸಿ ವಿಭಾಗದ ಮುಖ್ಯಸ್ಥ ಡಾ. ಜಗದೀಶ ಪೂಜಾರಿ, ಪ್ರಸ್ತುತ ತಂತ್ರಜ್ಞಾನದ ಬದಲಾವಣೆ ತುಂಬ ವೇಗದಲ್ಲಿದ್ದು, ಪುಸ್ತಕದ ಜ್ಞಾನವಲ್ಲದೇ ಲಭ್ಯವಿರುವ ತಂತ್ರಜ್ಞಾನ ಬಳಸಿ ವಿದ್ಯಾರ್ಥಿಗಳು ಪೂರಕ ಅಧ್ಯಯನ ಮಾಡಬೇಕು. ಔದ್ಯೋಗಿಕ ಜಗತ್ತಿಗೆ ಏನು ಬೇಕೆಂದು ತಾವೇ ತಿಳಿದು ಅದಕ್ಕೆ ತಕ್ಕಂತೆ ಓದು ಹಾಗೂ ಸಂಶೋಧನೆಯಲ್ಲಿ ತೊಡಬೇಕು. ಓದಿನೊಂದಿಗೆ ಸಂವಹನ ಕೌಶಲ್ಯ, ತಾಂತ್ರಿಕ ಕೌಶಲ್ಯ ಅಗತ್ಯ ಎಂಬ ಸಲಹೆ ನೀಡಿದರು.
ಅದೇ ರೀತಿ ಹುಬ್ಬಳ್ಳಿಯ ಇನ್ಫೋಸಿಸ್ ಪ್ರೊಜೆಕ್ಟ್ ಮ್ಯಾನೇಜರ್ ಸಂದೀಪ ಕುಲಕರ್ಣಿ, ಮೊದಲಿನಂತೆ ಸ್ಥಳೀಯವಾಗಿ ಸ್ಪರ್ಧೆ ಅಲ್ಲದೇ ಇಡೀ ಜಗತ್ತಿನೊಂದಿಗೆ ಸ್ಪರ್ಧೆ ಮಾಡುವ ಸ್ಥಿತಿ ಇದೆ. ಹೀಗಾಗಿ ಎಂಜಿನಿಯರಿಂಗ್ ಸೇರಿದಂತೆ ಯಾವುದೇ ವೃತ್ತಿಪರ ಕೋರ್ಸ್‌ಗಳಿಗೆ ಮುಂಚೆ ಬೇಕಾದ ಎಲ್ಲ ರೀತಿಯ ಕೌಶಲ್ಯಗಳೊಂದಿಗೆ ಪದವಿಗೆ ಪ್ರವೇಶ ಪಡೆಯಬೇಕು. ಎಂಜಿನಿಯರ್ ಆಗಬಯಸುವ ವಿದ್ಯಾರ್ಥಿಗಳಿಗೆ ಕಲಿಕೆಯ ಹಸಿವು ಅಗತ್ಯ ಎಂದು ಮಾರ್ಗದರ್ಶನ ನೀಡಿದರು.
ಐಎಸ್‌ಸಿಟಿ ಸಂಸ್ಥಾಪಕ ಅನೀಲ ಘಾಸ್ತೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ಕುಲಕರ್ಣಿ ನಿರೂಪಿಸಿದರು. ಶಶಿಕಲಾ ಘಾಸ್ತೆ ವಂದಿಸಿದರು. ಪಿಯುಸಿ ಮುಗಿಸಿ ಎಂಜಿನಿಯರಿಂಗ್ ಪದವಿಗೆ ಹೋಗಬಯಸುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿದ್ದರು.