ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ(ಕೋಚಿಮುಲ್) ಉದ್ಯೋಗಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರು. ಮೊತ್ತದ ಅವ್ಯವಹಾರದ ಆರೋಪ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಇ.ಡಿ. ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಗುರುವಾರ ಸಂಜೆಯಿಂದ ಶುಕ್ರವಾರ ಬೆಳಗ್ಗಿನ ವರೆಗೆ ಪರಿಶೀಲನೆ ನಡೆಸಿದ್ದಾರೆ. ನೇಮಕಾತಿ ಪ್ರಕ್ರಿಯೆ ಕಳೆದ 6 ತಿಂಗಳ ಹಿಂದೆ ನಡೆದಿದ್ದು, ಈ ವೇಳೆ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿಯನ್ನು ಮಂಗಳೂರು ವಿವಿ ವಹಿಸಿಕೊಡಲಾಗಿತ್ತು. ಆದರೆ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆಗೆ ಸೂಚಿಸಿತ್ತು. ಮಂಗಳೂರು ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ. ರಾಜುಕೃಷ್ಣ ಚಲನ್ನವರ್ ಅವರು ಕೋಚಿಮುಲ್ ನೇಮಕಾತಿ ಪರೀಕ್ಷಾ ಜವಾಬ್ದಾರಿ ವಹಿಸಿಕೊಂಡಿದ್ದರು. ಅಭ್ಯರ್ಥಿಗಳಿಗೆ ಪರಿಕ್ಷಾ ಪೂರ್ವದಲ್ಲೇ ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ ಎಂಬ ಆರೋಪ ವಿವಿ ಅಧಿಕಾರಿಗಳ ಮೇಲಿದೆ. ಕೋಚಿಮುಲ್ ನೇಮಕಾತಿ ಹಗರಣದಲ್ಲಿ ಮಂಗಳೂರು ವಿವಿ ನೇರ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಕ್ಷಾಂಗ ಕುಲಸಚಿವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು. ಆದರೆ ಇದಕ್ಕೆ ವಿವಿಯಿಂದ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳ ತಂಡ ದಿಢೀರನೆ ಆಗಮಿಸಿ ತನಿಖೆ ಕೈಗೊಂಡಿದೆ ಎಂದು ಹೇಳಲಾಗಿದೆ. ಇ.ಡಿ ಅಧಿಕಾರಿಗಳ ತನಿಖೆ: ಕೋಚಿಮುಲ್ ಉದ್ಯೋಗಿಗಳ ನೇಮಕಾತಿಯ ಪರಿಕ್ಷಾ ಏಜೆನ್ಸಿಯಾಗಿದ್ದ ಮಂಗಳೂರು ವಿವಿಯಿಂದ ಪ್ರಶ್ನೆ ಪತ್ರಿಕೆಯನ್ನು ಗೌಪ್ಯವಾಗಿಯೇ ಸಿದ್ದಪಡಿಸಲಾಗಿತ್ತು. ಆದರೆ ವಿವಿ ಅಧಿಕಾರಿಗಳು ಅಭ್ಯರ್ಥಿಗಳಿಗೆ ಪ್ರತೀ ಪ್ರಶ್ನೆಪತ್ರಿಕೆಯನ್ನು 10-15 ಲಕ್ಷ ರು.ಗಳಿಗೆ ಮಾರಾಟ ಮಾಡಿರುವ ಆರೋಪ ವ್ಯಕ್ತವಾಗಿತ್ತು. ಮಂಗಳೂರು ವಿವಿಗೆ ಆಗಮಿಸಿದ ಇಡಿ ತಂಡ ಪರೀಕ್ಷಾಂಗ ಕುಲಸಚಿವರು ಹಾಗೂ ಕುಲಪತಿಗಳನ್ನು ವಿಚಾರಣೆ ನಡೆಸಿದೆ. ವಿವಿ ಪರಿಕ್ಷಾಂಗ ಕುಲಸಚಿವ ಪ್ರೊ. ರಾಜುಕೃಷ್ಣ ಚಲನ್ನವರ್ ಅವರ ಈ ಮೇಲ್, ದೂರವಾಣಿ, ಬ್ಯಾಂಕಿಂಗ್ ವ್ಯವಹಾರವನ್ನು ಬೆಳಗ್ಗಿನ ವರೆಗೆ ಪರಿಶೀಲಿಸಿದೆ ಎಂದು ಹೇಳಲಾಗಿದೆ. ಇಡಿ ಅಧಿಕಾರಿಗಳ ದಾಳಿ ಬಳಿಕ ಇವರಿಬ್ಬರ ಮೊಬೈಲ್ ಸ್ವಿಚ್ ಆಫ್ ಆಗಿದೆ.