ಹೆಚ್.ಆರ್. ಹರೀಶ್ ಕುಮಾರ್, ಶನಿವಾರಸಂತೆ

ಕೊಡಗು ವರ್ಷಪೂರ್ತಿ ವಿಧವಿಧದ ಹಬ್ಬಗಳಿಂದ ಸಮೃದ್ಧವಾದ ಜಿಲ್ಲೆ. ಇಲ್ಲಿನ ಹಬ್ಬಗಳು ಪ್ರಾಕೃತಿಕ ಸಂಸ್ಕೃತಿಯನ್ನು ಬಿಂಬಿಸುತ್ತವೆ.ಕಾವೇರಿ ತೀರ್ಥೋದ್ಭವ: ಇದು ಕೊಡವರಿಗೆ ವಿಶೇಷ ಹಬ್ಬ. ಕೊಡವರ ಕುಲದೇವತೆ ಕಾವೇರಿ ಮಾತೆ ಅ.17ರಂದು ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ಕಾಣಿಸಿಕೊಳ್ಳುತ್ತಾಳೆ. ಕಾವೇರಿಯ ಪವಿತ್ರವಾದ ತೀರ್ಥವನ್ನು ಮನೆಗೆ ಕೊಂಡೊಯ್ಯುತ್ತಾರೆ. ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ತೀರ್ಥವನ್ನು ಪೂಜಾ ಕಾರ್ಯಕ್ರಮಗಳಿಗೆ ಬಳಸುತ್ತಾರೆ.

ತುಲಾ ಸಂಕ್ರಮದ ಹಿನ್ನೆಲೆಯಲ್ಲಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪವಿತ್ರ ತೀರ್ಥ ಕುಂಡಿಕೆಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ತೀರ್ಥೋದ್ಭವದ ಅಂಗವಾಗಿ ಒಂದು ತಿಂಗಳು ತಲಕಾವೇರಿ, ಭಾಗಮಂಡಲದಲ್ಲಿ ಜಾತ್ರೆ ನಡೆಯುತ್ತದೆ. ಭಕ್ತರಿಗೆ ಅನ್ನದಾನ ವ್ಯವಸ್ಥೆಯೂ ಇರುತ್ತದೆ.

ಕೊಡಗಿನ ಸುಗ್ಗಿ ಹುತ್ತರಿ: ಹುತ್ತರಿ ಹಬ್ಬವನ್ನು ಕೊಡಗಿನ ಸುಗ್ಗಿ ಹಬ್ಬವೆಂದೇ ಕರೆಯಬಹುದು. ಹೊಸ ಭತ್ತದ ಪೈರನ್ನು ಧಾನ್ಯ ಲಕ್ಷ್ಮಿಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆಯ ಮಾಡುವುದೇ ಹುತ್ತರಿ ಹಬ್ಬದ ವಿಶೇಷತೆ.ಕೊಡಗಿನ ಸಾಂಪ್ರದಾಯಿಕ ಉಡುಗೆ ತೊಡುಗೆಯೊಂದಿಗೆ ಭತ್ತದ ಗದ್ದೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ಮನೆ ಹಿರಿಯರು ‘ಪೊಲಿ ಪೊಲಿ ದೇವಾ...’ ಎನ್ನುವ ಉದ್ಘೋಷದೊಂದಿಗೆ ಕದಿರನ್ನು ಕಿತ್ತು ಮನೆಗೆ ತುಂಬಿಸಿಕೊಳ್ಳುತ್ತಾರೆ. ದೇವರ ಕೋಣೆಯಲ್ಲಿ ಧಾನ್ಯಲಕ್ಷ್ಮಿಗೆ ವಿಶೇಷ ಸ್ಥಾನಮಾನ ನೀಡಿ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪಾಯಸದ ಸವಿಯೊಂದಿಗೆ ಹುತ್ತರಿ ಹಬ್ಬದ ಖಾದ್ಯಗಳನ್ನು ಸವಿಯುತ್ತಾರೆ. ಕೊಡಗಿನ ಮಳೆ ದೈವ ಎಂದೇ ಹೆಸರಾಗಿರುವ ಪಾಡಿಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಮೊದಲು ಕದಿರನ್ನು ಕೊಯ್ದು ಪೂಜೆ ಸಲ್ಲಿಸಲಾಗುತ್ತದೆ.ಕೈಲ್ ಮುಹೂರ್ತ: ಇದು ಕೊಡಗಿನವರಿಗೆ ಆಯುಧ ಪೂಜೆ. ಮಳೆಗಾಲ ಆರಂಭವಾಗಿ ಭತ್ತದ ಕೃಷಿ ಚಟುವಟಿಕೆಯಲ್ಲಿ ಪಾಲ್ಗೊಂಡು ಜನರು ತಮ್ಮ ಎಲ್ಲಾ ಕೃಷಿ ಕೆಲಸಗಳನ್ನು ಪೂರೈಸಿರುತ್ತಾರೆ. ನಂತರ ಕೃಷಿಗೆ ಬಳಸಲಾದ ಆಯುಧಗಳನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಹಬ್ಬದ ಅಂಗವಾಗಿ ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಸೇರಿದಂತೆ ಹಲವು ಸಾಂಪ್ರದಾಯಿಕ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತದೆ. ಕೈಲ್ ಮುಹೂರ್ತಕ್ಕೆ ಕೊಡವರ ಸಾಂಪ್ರದಾಯಿಕ ಆಹಾರ ಹಂದಿ ಮಾಂಸವನ್ನು ಸವಿಯುತ್ತಾರೆ.

ಇದಲ್ಲದೆ ಕೊಡಗಿನಲ್ಲಿ ಕೊಡವರು ಎಡಮ್ಯಾರ್, ಪತ್ತಲೋದಿ ಸೇರಿದಂತೆ ಹಲವು ಹಬ್ಬವನ್ನು ಆಚರಿಸುತ್ತಾರೆ.