ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ

| Published : May 22 2025, 11:54 PM IST

ಕೊಡಗು ಕಲಾವಿದರ ಸಂಘದಿಂದ ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡವ ಸಾಹಿತ್ಯ ರಚನೆಕಾರ, ಸಂಗೀತ ನಿರ್ದೇಶಕ, ಹಾಡುಗಾರ, ಹಿರಿಯ ಕಲಾವಿದ ಚೆಕ್ಕೆರ ತ್ಯಾಗರಾಜ ಅಪ್ಪಯ್ಯ ಅವರನ್ನು ಕೊಡಗು ಕಲಾವಿದರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಮೈಸೂರು ಕೊಡವ ಸಮಾಜದಲ್ಲಿ ನಡೆದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಕಲಾವಿದರ ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಅವರು ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಚೆಕ್ಕೆರ ತ್ಯಾಗರಾಜ ಅವರ ಕಲಾ ಸೇವೆ ಅಪಾರವಾಗಿದ್ದು, ಇತರರಿಗೆ ಮಾದರಿಯಾಗಿದೆ ಎಂದರು.

ಸಂಘದ ವತಿಯಿಂದ ಮೊದಲ ಬಾರಿಗೆ ಚೆಕ್ಕೆರ ತ್ಯಾಗರಾಜ ಅವರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಗುವುದು. ಈ ಕಾರ್ಯಕ್ರಮ ನಿರಂತರವಾಗಿ ನಡೆಯಲಿದ್ದು, ಇದಕ್ಕೆ ಸರ್ವ ಕಲಾಭಿಮಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.

ಹಿರಿಯ ಕಲಾವಿದ ಹಾಗೂ ಆಯೋಜಕ ನೆರವಂಡ ಉಮೇಶ್ ಅವರು ಮಾತನಾಡಿ ತ್ಯಾಗರಾಜ ಅವರಂತೆ ಅವರ ತಂದೆ ಅಪ್ಪಯ್ಯ ಅವರು ಕೂಡ ಕಲಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಕೊಡಗಿನಿಂದ ಮದ್ರಾಸ್ ವರೆಗೆ ಪಯಣ ಬೆಳೆಸಿ ಕಲಾ ಸೇವೆ ಮಾಡಿದ್ದಾರೆ ಎಂದು ಬಣ್ಣಿಸಿದರು.

ಸನ್ಮಾನ ಹೆಮ್ಮೆಯ ವಿಚಾರ:

ಚೆಕ್ಕೆರ ತ್ಯಾಗರಾಜ ಅವರು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದು, 18 ವರ್ಷಗಳ ಭಾರತೀಯ ಸೇನಾ ಸೇವೆಯ ನಂತರ ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ವೀ ಕಲಾವಿದರೆನಿಸಿಕೊಂಡಿದ್ದಾರೆ. ಸೇನೆ ಮತ್ತು ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ತ್ಯಾಗರಾಜ ಅವರನ್ನು ಸನ್ಮಾನಿಸುವುದೇ ಹೆಮ್ಮೆಯ ವಿಚಾರವೆಂದರು.

ಬೆಂಗಳೂರಿನ ಉದ್ಯಮಿ ಪೊನ್ನಚೆಟ್ಟಿರ ರಮೇಶ್ ಮಾತನಾಡಿ ಕಲಾವಿದರ ಸಂಘದ ಸದಸ್ಯತ್ವವನ್ನು ಹೆಚ್ಚಿಸಬೇಕು, ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ಇದೇ ಜೂನ್ ತಿಂಗಳಿನಲ್ಲಿ ಬೆಂಗಳೂರು ಕೊಡವ ಸಮಾಜದಲ್ಲಿ ಕಲಾ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸರ್ವರು ಕೈ ಜೋಡಿಸುವಂತೆ ಕೋರಿದರು.

ಸಾಕ್ಷ್ಯಚಿತ್ರ ತಯಾರಿಸಲು ಸರ್ಕಾರಕ್ಕೆ ಮನವಿ:

ಅಲ್ಲಾರಂಡ ರಂಗ ಚಾವಡಿಯ ಅಧ್ಯಕ್ಷ ವಿಠಲ್ ನಂಜಪ್ಪ ಅವರು ಕಲಾವಿದ ತ್ಯಾಗರಾಜ ಅವರ ಸಂಗೀತ ಕ್ಷೇತ್ರದ ಸಾಧನೆಯ ಬಗ್ಗೆ ವಿವರಿಸಿ, ತ್ಯಾಗರಾಜರ ಕುರಿತು ಸಾಕ್ಷ್ಯಚಿತ್ರ ತಯಾರಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಸೃಷ್ಟಿ ಕೊಡವ ರಂಗದ ನಿರ್ದೇಶಕಿ ಅಡ್ಡಂಡ ಸಿ.ಅನಿತಾ ಕಾರ್ಯಪ್ಪ ಅವರು ಮಾತನಾಡಿ ಚೆಕ್ಕೆರ ತ್ಯಾಗರಾಜರ ಸಂಗೀತ ಪ್ರೀತಿಯನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತ್ಯಾಗರಾಜ ಅವರು, ಕೊಡಗು ಕಲಾವಿದರ ಸಂಘ ಎಲೆಮರೆಯ ಕಾಯಿಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುವ ಮತ್ತು ಸನ್ಮಾನಿಸುವ ಮಹಾಕಾರ್ಯ ಮಾಡುತ್ತಿದೆ. ಮಂದ್ ಲ್ ತಕ್ಕಾರ ಕಿಂಜಿ ಸಂದ್ ಲ್ ತಕ್ಕಾರಕ್ ಬೆಲೆ ಜಾಸ್ತಿ, ನನ್ನನ್ನು ಗುರುತಿಸಿ ಮೈಸೂರಿಗೆ ಬಂದು ಸನ್ಮಾನಿಸಿ ಗೌರವಿಸಿರುವುದರಿಂದ ಹೃದಯ ತುಂಬಿ ಬಂದಿದೆ ಎಂದು ಭಾವುಕರಾದರು.

ಮೈಸೂರು ಕೊಡವ ಸಮಾಜದ ಉಪಾಧ್ಯಕ್ಷ ಮಾಚಿಮಾಡ ನಾಣಯ್ಯ ಹಾಗೂ ಕಾರ್ಯದರ್ಶಿ ಕೇಟೋಳಿರ ರವಿ ಮಾತನಾಡಿದರು.

ಸನ್ಮಾನ ಗೌರವ:

ಸಂಘದ ಅಧ್ಯಕ್ಷ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್, ಕಲಾವಿದರಾದ ನೆರವಂಡ ಉಮೇಶ್, ಅಲ್ಲಾರಂಡ ವಿಠ್ಠಲ್ ನಂಜಪ್ಪ, ಕಾಡ್ಯಾಮಡ ಸುಮನ್, ತಾತಂಡ ಪ್ರಭಾ ನಾಣಯ್ಯ, ಚೆರುವಾಳಂಡ ಸುಜಲ ನಾಣಯ್ಯ, ಕಾಳಿಮಾಡ ದಿನೇಶ್ ನಾಚಪ್ಪ, ಪೊಡಮಾಡ ಭವಾನಿ ನಾಣಯ್ಯ, ಈರಮಂಡ ವಿಜಯ್ ಮತ್ತಿತರರು ಚೆಕ್ಕೆರ ತ್ಯಾಗರಾಜ ಅವರನ್ನು ಸನ್ಮಾನಿಸಿ ಗೌರವಿಸಿದರು.

ಪೊಡಮಾಡ ಭವಾನಿ ನಾಣಯ್ಯ ಅವರು ಒಡಿಕತ್ತಿ, ಕಾಳಿಮಾಡ ದಿನೇಶ್ ಹಾಗೂ ಅಲ್ಲಾರಂಡ ವಿಠಲ್ ನಂಜಪ್ಪ ಅವರು ತ್ಯಾಗರಾಜರ ಭಾವಚಿತ್ರವನ್ನು ನೀಡಿ ಅಭಿಮಾನ ಮೆರೆದರು.

ಹಿರಿಯ ಕಲಾವಿದ ತ್ಯಾಗರಾಜ ಅವರು ತಮ್ಮೊಂದಿಗೆ ತಂದಿದ್ದ ತಮ್ಮ ಒಡನಾಡಿ ಹಾರ್ಮೋನಿಯಂನ್ನು ನುಡಿಸಿ ಅಂಬಿಕಾ... ಅಂಬಿಕಾ... ಹಾಡನ್ನು ಹಾಡಿ ಸಂಗೀತದ ಮೇಲಿನ ತಮ್ಮ ಅಭಿರುಚಿಯನ್ನು ತೋರ್ಪಡಿಸಿದರು.

ಕಲಾವಿದರಾದ ಬಯವಂಡ ಬಿನು ಸಚಿನ್, ಪೊಡಮಾಡ ಭವಾನಿ ನಾಣಯ್ಯ, ಮಾಳೇಟಿರ ಅಜಿತ್, ಸೋಮೆಯಂಡ ಬೋಸ್ ಸೋಮಯ್ಯ ಮತ್ತಿತರರು ಹಾಡುಗಳನ್ನು ಹಾಡಿ ರಂಜಿಸಿದರು.

ಕಲಾವಿದರಾದ ಖ್ಯಾತ ಯೂಟ್ಯೂಬರ್ ಕಳ್ಳಿಚಂಡ ಡಿಂಪಲ್ ನಾಚಪ್ಪ, ಮಲ್ಲಮಾಡ ಶ್ಯಾಮಲ, ಕುಪ್ಪಣಮಾಡ ಜಾನ್ಸಿ, ಆಚಿಯಡ ಗಗನ್ ಗಣಪತಿ, ಬಿದ್ದಂಡ ಉತ್ತಮ್, ಬಲ್ಯಂಡ ವರ್ಷ (ವಿಜಯ್) ಸೇರಿದಂತೆ ಕೊಡಗು ಹಾಗೂ ಮೈಸೂರಿನ ಕಲಾವಿದರು, ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಚೆರುವಾಳಂಡ ಸುಜಲ ನಾಣಯ್ಯ ಪ್ರಾರ್ಥಿಸಿ, ತಾತಂಡ ಪ್ರಭಾ ನಾಣಯ್ಯ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ನಿರೂಪಿಸಿ, ಈರಮಂಡ ವಿಜಯ್ ವಂದಿಸಿದರು.