ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾರತ ದೇಶದ ಆಸ್ತಿಯಾಗಿರುವ ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಮಾನಿಸಿದ ಕಿಡಿಗೇಡಿಯನ್ನು ತಕ್ಷಣ ಗಡಿಪಾರು ಮಾಡಬೇಕು. ತಪ್ಪಿದಲ್ಲಿ ಕೊಡಗು ಬಂದ್ ಗೆ ಕರೆ ನೀಡುವುದಾಗಿ ಜಬ್ಬೂಮಿ ಸಂಘಟನೆಯ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ವೀರ ಸೇನಾನಿಗಳನ್ನು ಅವಮಾನಿಸಿದ ಆರೋಪಿಯನ್ನು ಬಂಧಿಸಿರುವ ಕುರಿತು ಈಗಾಗಲೇ ಮಾಹಿತಿ ಲಭ್ಯವಾಗಿದೆ. ಆದರೆ ಈತನನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ಜಾತಿ, ಮತ, ಭೇದ, ಧರ್ಮಗಳನ್ನು ಮೀರಿದ ಅಪ್ರತಿಮ ವ್ಯಕ್ತಿತ್ವದ ವೀರ ಸೇನಾಧಿಕಾರಿಗಳಾಗಿದ್ದಾರೆ. ಭಾರತೀಯ ಸೇನೆಗೆ ಮತ್ತು ಭಾರತದ ರಕ್ಷಣೆಗೆ ಇವರಿಬ್ಬರು ನೀಡಿದ ಕೊಡುಗೆ ಅಪಾರವಾಗಿದೆ. ಇವರನ್ನು ಅವಹೇಳನ ಮಾಡಿರುವುದು ದೇಶದ್ರೋಹದ ಕೃತ್ಯವಾಗಿದೆ. ಇಡೀ ದೇಶದ ಜನರೇ ಬೇಸರ ಪಡುವಂತಹ ಪ್ರಕರಣ ಇದಾಗಿದೆ. ಆದ್ದರಿಂದ ಗೃಹ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲೆಯಲ್ಲಿ ಅಶಾಂತಿ ಮೂಡಿಸಲು ಯತ್ನಿಸುತ್ತಿರುವ ಆರೋಪಿಯನ್ನು ತಕ್ಷಣ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು.ಪೊಲೀಸ್ ಇಲಾಖೆ ಈ ಪ್ರಕರಣದ ಕುರಿತು ನಿರ್ಲಕ್ಷ್ಯ ವಹಿಸಿದರೆ ಎಲ್ಲ ಜಾತಿ, ಜನಾಂಗಗಳ, ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಜಬ್ಬೂಮಿ ಸಂಘಟನೆ ಕೊಡಗು ಬಂದ್ ಹೋರಾಟಕ್ಕೆ ಮುಂದಾಗಲಿದೆ ಎಂದು ರಾಜೀವ್ ಬೋಪಯ್ಯ ತಿಳಿಸಿದ್ದಾರೆ.
ಆಮ್ ಆದ್ಮಿ ಪಾರ್ಟಿ ಖಂಡನೆ: ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅಪಮಾನಿಸಿರುವುದು ಖಂಡನೀಯವೆಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಮಾಜದ ಸಾಮರಸ್ಯವನ್ನು ಕದಡುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡವ ಸಮಾಜ ಖಂಡನೆ: ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಕಿಡಿಗೇಡಿಯನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನಾಪೋಕ್ಲು ಕೊಡವ ಸಮಾಜ ಒತ್ತಾಯಿಸಿದೆ.ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಎಂ.ಸಿ.ನಾಣಯ್ಯ ಹಾಗೂ ಆಡಳಿತ ಮಂಡಳಿ ಇಡೀ ದೇಶವೇ ಗೌರವದಿಂದ ಕಾಣುವ ಅಪ್ರತಿಮ ವೀರರಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಅವಮಾನಿಸಿರುವುದು ಖಂಡನೀಯ. ಇದೊಂದು ಗಂಭೀರ ಪ್ರಕರಣವಾಗಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಿಡಿಗೇಡಿಯ ಬಂಧನಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಾಮಾಜಿಕ ಜಾಲತಾಣವನ್ನು ದುರುಪಯೋಗಪಡಿಸಿಕೊಂಡು ಸೇನಾಧಿಕಾರಿಗಳನ್ನು ಹಾಗೂ ಕೊಡವರನ್ನು ಅಪಮಾನಿಸಿರುವ ವ್ಯಕ್ತಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹೋರಾಟ ನಡೆಸುವುದಾಗಿ ಎಂ.ಸಿ.ನಾಣಯ್ಯ ಎಚ್ಚರಿಕೆ ನೀಡಿದ್ದಾರೆ.ಅಸೋಸಿಯೇಷನ್ ಖಂಡನೆ: ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಿಡಿಗೇಡಿಯೊಬ್ಬ ವೀರ ಸೇನಾನಿಗಳನ್ನು ಅವಮಾನಿಸಿದ್ದು, ಈತನ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹಂಚೆಟ್ಟಿರ ಮನು ಮುದ್ದಪ್ಪ ಆಗ್ರಹಿಸಿದ್ದಾರೆ.ಮಕ್ಕಡ ಕೂಟ ಖಂಡನೆ: ಆಕ್ಷೇಪಾರ್ಹ ಹೇಳಿಕೆ ನೀಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತೀಯ ಸೇನೆಯ ಪಿತಾಮಹ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ಗಳ ಜನರಲ್ ಖ್ಯಾತಿಯ ಜನರಲ್ ತಿಮ್ಮಯ್ಯ ಅವರನ್ನು ಅವಮಾನಿಸಲಾಗಿದೆ. ಇದು ಕೊಡಗು ಮಾತ್ರವಲ್ಲದೆ ಇಡೀ ದೇಶದ ಜನರಿಗೆ ನೋವನ್ನುಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.