ಭೂಮಿಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಕೂಡಲೇ ಪೊಲೀಸ್ ದೂರು ದಾಖಲಿಸುವುದರ ಜೊತೆಗೆ ಅರಣ್ಯ ಅಪರಾಧ ಕಾಯಿದೆಯಡಿಲ್ಲಿಯೂ ಪ್ರಕರಣ ದಾಖಲಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರುಭೂಮಿಗೆ ಬಂಗಾರದ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಅರಣ್ಯ ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಕೂಡಲೇ ಪೊಲೀಸ್ ದೂರು ದಾಖಲಿಸುವುದರ ಜೊತೆಗೆ ಅರಣ್ಯ ಅಪರಾಧ ಕಾಯಿದೆಯಡಿಲ್ಲಿಯೂ ಪ್ರಕರಣ ದಾಖಲಿಸುವಂತೆ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.ತುಮಕೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ತುಮಕೂರು ಬಯಲು ಸೀಮೆ ಇಲ್ಲಿ ಇರುವ ಅರಣ್ಯ ಪ್ರದೇಶವೇ ಕಡಿಮೆ. ಇದರಲ್ಲಿ ಒತ್ತುವರಿಯೂ ಆಗಿದೆ. ಜೊತೆಗೆ ಕೆಲವರು ನಕಲಿ ದಾಖಲೆ ಸೃಷ್ಟಿಸಿ ಅರಣ್ಯದ ಮೇಲೆ ಹಕ್ಕು ಚಲಾಯಿಸುತ್ತಿದ್ದರೆ, ಇನ್ನು ಕೆಲವು ಕಡೆ ಅಕ್ರಮ ಮಂಜೂರಾತಿ ಆಗಿದೆ ಈ ಬಗ್ಗೆ ಅರಣ್ಯಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ತುಮಕೂರು ಜಿಲ್ಲೆಯ 50 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಚಿರತೆ–ಮಾನವ ಸಂಘರ್ಷವಿದ್ದು ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಈಶ್ವರ ಖಂಡ್ರೆ ಕೂಡಲೇ 31 ಹೊಸ ಬೋನುಗಳನ್ನು ಖರೀದಿಸಲು ಸಮ್ಮತಿ ಸೂಚಿಸಿದರು. ಯಾವುದೇ ಗ್ರಾಮದ ಬಳಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮಾಹಿತಿ ಬಂದರೆ ಕೂಡಲೇ ವನ್ಯಜೀವಿ ವಿಭಾಗದ ಸಿಬ್ಬಂದಿ ಕಳಿಸಿ, ಪರಿಶೀಲಿಸಿ ಚಿರತೆ ಸಂಚಾರ ಖಚಿತವಾದರೆ, ಬೋನುಗಳನ್ನು ಇಡಲು ತುರ್ತು ಕ್ರಮ ವಹಿಸುವಂತೆ ಸಚಿವರು ಸೂಚಿಸಿದರು. ಕ್ಷೀಣಿಸಿದ ಅರಣ್ಯಗಳಲ್ಲಿ ಬರುವ ಮುಂಗಾರಿನಲ್ಲಿ ಸಸಿ ನೆಟ್ಟು ಅರಣ್ಯ ಸಂವರ್ಧನೆ ಮಾಡಲೂ ಸೂಚಿಸಿದ ಅವರು ನಗರ ಪ್ರದೇಶಗಳ ರಸ್ತೆ ಬದಿಗಳಲ್ಲಿ ಸಸಿಗಳನ್ನು ನೆಟ್ಟು ಪೋಷಿಸಲು ಕ್ರಮ ವಹಿಸಬೇಕು, ರಸ್ತೆ ಬದಿಯ ಸಸಿಗಳ ಸುತ್ತ ಕನಿಷ್ಠ ೩ ಅಡಿ ಮಣ್ಣಿಸುವಂತೆ ನಿಗಾ ವಹಿಸಬೇಕು, ಎಷ್ಟು ಸಸಿ ಬದುಕಿ ಉಳಿದಿವೆ ಎಂಬ ಬಗ್ಗೆ ಆಡಿಟ್ ಮಾಡಿಸಬೇಕು ಹಾಗೆ ತಿಪಟೂರಿನಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ವಹಿಸುವಂತೆಯೂ ಸಚಿವರು ತಿಳಿಸಿದರು. ಸಭೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ ಮತ್ತಿತರರು ಪಾಲ್ಗೊಂಡಿದ್ದರು.