ಸಾರಾಂಶ
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಸಾಲಗಳನ್ನು ಹೊರತು ಪಡಿಸಿದಂತೆ ೨೮.೯೦ ಲಕ್ಷ ರು. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ೨೦೨೩-೨೪ನೇ ಸಾಲಿನಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಸಾಲಗಳನ್ನು ಹೊರತು ಪಡಿಸಿದಂತೆ ೨೮.೯೦ ಲಕ್ಷ ರು. ನಿವ್ವಳ ಲಾಭ ಗಳಿಸಿದೆಯೆಂದು ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು ತಿಳಿಸಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘಕ್ಕೆ ಸಾಲದ ಹೊರೆಯೂ ಇದೆ. ಸಂಘ ಪೆಟ್ರೋಲ್ ಬಂಕ್ ವ್ಯವಹಾರ ನಡೆಸುತ್ತಿದ್ದು, ಹುಣಸೂರು ಪೆಟ್ರೋಲ್ ಬಂಕ್‌ನಿಂದ ೪೨.೫೪ ಲಕ್ಷ ಮತ್ತು ಹೆಬ್ಬಾಲೆ ಬಂಕ್‌ನಿಂದ ೧೪.೧೨ ಲಕ್ಷ ಆದಾಯ ಬಂದಿದೆ. ಕಾಫಿ ಪುಡಿ ಮಾರಾಟ ವ್ಯವಹಾರದಲ್ಲಿ ೧.೫೮ ಲಕ್ಷ ಲಾಭ ಗಳಿಸಲಾಗಿದ್ದರೆ, ಕಾಫಿ ಸಂಸ್ಕರಣಾ ವ್ಯವಹಾರದಿಂದ ೩.೬೮ ಲಕ್ಷ ಲಾಭ, ಜೇನು ಮಾರಾಟದಿಂದ ೪೯ ಸಾವಿರ ಆದಾಯ ಹಾಗೂ ಸಂಘದ ಬಾಡಿಗೆ ಕಟ್ಟಡಗಳಿಂದ ೧೦೩ ಲಕ್ಷ ರೂಪಾಯಿಗಳ ಆದಾಯ ಗಳಿಸಿರುವುದಾಗಿ ತಿಳಿಸಿದರು. ಸಂಘದ ವಾರ್ಷಿಕ ಮಹಾಸಭೆ ಶುಕ್ರವಾರ ಬೆಳಗ್ಗೆ 10ಕ್ಕೆ ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದರು. ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರಿನ ಭಾರೀ ಮಳೆಯಿಂದ ಕಾಫಿ, ಕರಿಮೆಣಸು, ಏಲಕ್ಕಿ ಕೃಷಿಗೆ ಅಪಾರ ಹಾನಿಯಾಗಿದೆ. ಈ ಸಂದರ್ಭ ಅಗತ್ಯ ಸೂಕ್ತ ಸರ್ವೇ ಕಾರ್ಯ ನಡೆಸಿ ಪರಿಹಾರ ಬದಗಿಸುವಂತೆ ಸಂಸದ ಯದುವೀರ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ನಾಪಂಡ ರವಿ ಕಾಳಪ್ಪ, ಚೆಟ್ರಂಡ ಲೀಲಾ ಮೇದಪ್ಪ, ಎಂ.ಎಂ.ಧರ್ಮಾವತಿ, ನಾಯಕಂಡ ಅಯ್ಯಣ್ಣ ಹಾಗೂ ವ್ಯವಸ್ಥಾಪಕ ನಾಣಯ್ಯ ಇದ್ದರು.