ಕೊಡಗು ಅಭಿವೃದ್ಧಿಯ ವೈಯಕ್ತಿಕ ಪ್ರಣಾಳಿಕೆ: ಅಭ್ಯರ್ಥಿಗಳಿಗೆ ಆಗ್ರಹ

| Published : Mar 21 2024, 01:04 AM IST

ಸಾರಾಂಶ

ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಕೊಡಗು ಜಿಲ್ಲೆಯ ಹಿತಾಸಕ್ತಿ ಕಾಪಾಡುವ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಪ್ರಣಾಳಿಕೆಯಲ್ಲಿ ಯಾವ ಕಾರ್ಯಯೋಜನೆ ಇಟ್ಟುಕೊಂಡಿದ್ದಾರೆ ಹಾಗೂ ಕೊಡಗಿನ ಬಗ್ಗೆ ಅವರ ದೃಷ್ಟಿಕೋನ ಏನೆಂಬುದನ್ನು ಚುನಾವಣಾ ಪೂರ್ವದಲ್ಲಿಯೇ ಸ್ಪಷ್ಟಪಡಿಸಬೇಕೆಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರು ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಲೋಕಸಭಾ ಚುನಾವಣೆಯಲ್ಲಿ ಕೊಡಗು-ಮೈಸೂರು ಕ್ಷೇತ್ರದಲ್ಲಿ ಸ್ಪರ್ಧಿಸುವ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಕೊಡಗು ಜಿಲ್ಲೆಯ ಹಿತಾಸಕ್ತಿ ಕಾಪಾಡುವ ಹಾಗೂ ಜಿಲ್ಲೆಯ ಅಭಿವೃದ್ಧಿಗಾಗಿ ತಮ್ಮ ವೈಯಕ್ತಿಕ ಪ್ರಣಾಳಿಕೆಯಲ್ಲಿ ಯಾವ ಕಾರ್ಯಯೋಜನೆ ಇಟ್ಟುಕೊಂಡಿದ್ದಾರೆ ಹಾಗೂ ಕೊಡಗಿನ ಬಗ್ಗೆ ಅವರ ದೃಷ್ಟಿಕೋನ ಏನೆಂಬುದನ್ನು ಚುನಾವಣಾ ಪೂರ್ವದಲ್ಲಿಯೇ ಸ್ಪಷ್ಟಪಡಿಸಬೇಕೆಂದು ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಪ್ರಮುಖರು ಒತ್ತಾಯಿಸಿದ್ದಾರೆ.

ಬಿ.ಶೆಟ್ಟಿಗೇರಿಯಲ್ಲಿ ನಡೆದ ಸಂಘಟನೆಯ ಸಮಾಲೋಚನಾ ಸಭೆಯಲ್ಲಿ ಈ ಕುರಿತು ಆಗ್ರಹಿಸಲಾಯಿತು.

ಜಿಲ್ಲಾಧಿಕಾರಿ ಬರಗಾಲ ಹಿನ್ನೆಲೆ ನದಿ ಹಾಗೂ ನದಿ ಮೂಲಗಳಿಂದ ರೈತರು ಕೃಷಿ ಹಾಗೂ ಕಾಫಿ ತೋಟಕ್ಕೆ ನೀರು ಬಳಸದಂತೆ ನಿರ್ಬಂಧದ ಆದೇಶ ಮಾಡುತ್ತಾರೆ. ಹಿಂದೆಯೂ ಆದೇಶ ಮಾಡಿದ್ದರೂ,ಮುಂದಿನ ವರ್ಷವೂ ಪುನರಾವರ್ತನೆ ಆಗಬಹುದು. ಆದರೆ ಇಡೀ ತಮಿಳುನಾಡು ವರೆಗೆ, ರಾಜ್ಯದ ಬೆಂಗಳೂರು- ಮೈಸೂರು ನಗರ, ಇತರ ಜಿಲ್ಲೆಗಳಿಗೆ ನೀರು ಒದಗಿಸುವ ಕಾವೇರಿ ಲಕ್ಷ್ಮಣ ತೀರ್ಥ ಸೇರಿದಂತೆ ಹಲವು ನದಿಗಳು ಜಿಲ್ಲೆಯಲ್ಲಿ ಹುಟ್ಟಿವೆ. ಈ ನದಿಯಲ್ಲಿ ಬೇಸಿಗೆಯಲ್ಲಿ ಕೆಲ ತಿಂಗಳು ಮಾತ್ರ ಜಿಲ್ಲೆಯ ರೈತರು ಕೃಷಿಗೆ ನೀರು ಬಳಸುತ್ತಾರೆ. ನೀರಿನ ಅಭಾವ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕೃಷಿ ಮತ್ತು ತೋಟಗಳಿಗೆ ನೀರು ಬಳಕೆಗೆ ಶಾಶ್ವತ ಮಾರ್ಗೋಪಾಯಗಳೇನು ಎಂದು ಪ್ರಶ್ನಿಸಿದರು.

ಜಿಲ್ಲೆಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಗಳಲ್ಲಿ ಹಾಗೂ ವಾರಾಂತ್ಯದ ರಜೆ ದಿನಗಳಲ್ಲಿ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿದ್ದು, ನದಿ ನೀರು ಸೇರಿದಂತೆ ನೀರಿನ ಬಳಕೆ ಅತಿ ಹೆಚ್ಚು ಪೋಲಾಗುತ್ತಿದೆ. ಇದರಿಂದಲೂ ಸಹ ನೀರಿನ ಕೊರತೆ ಉಂಟಾಗುತ್ತದೆ. ಕೃಷಿ ರಂಗದ ಮೇಲೆ ನೀರಿನ ಬಳಕೆಗೆ ನಿಷೇಧ ಹೇರುವ ಸರ್ಕಾರ ಪ್ರವಾಸೋದ್ಯಮದ ಒತ್ತಡದಿಂದಲೂ ನೀರಿನ ಅಭಾವ ಕಾಡುವಂತಾಗಿದೆ ಎಂಬುದನ್ನು ಅರಿಯಬೇಕು. ಜಿಲ್ಲೆಯು ಎಷ್ಟು ಪ್ರವಾಸಿಗಳನ್ನು ಸಹಿಸಿಕೊಳ್ಳಲು ಶಕ್ತಿ ಇದೆ ಈ ಬಗ್ಗೆ ಅಧ್ಯಯನ ನಡೆಯಬೇಕು ಎಂದು ಅವರು ಆಗ್ರಹಿಸಿದರು.

ಕೊಡಗು ಜಿಲ್ಲೆಯಲ್ಲಿ ಪರಿಸರ ಸ್ನೇಹಿಯಾದ ಪ್ರವಾಸೋದ್ಯಮವನ್ನು ಹೇಗೆ ಅಭಿವೃದ್ಧಿಪಡಿಸಬೇಕು, ಕೊಡಗು ಜಿಲ್ಲೆಯ ಪರಿಸರಕ್ಕೆ ಹಾನಿಯಾಗದಂತೆ ಯಾವ ರೀತಿಯಲ್ಲಿ ರೂಪಿಸಬೇಕು ಎಂಬ ಪರಿಕಲ್ಪನೆ ಇದೆಯೇ? ಪ್ರವಾಸೋದ್ಯಮವು ಕೊಡಗು ಜಿಲ್ಲೆಯ ಬಹುತೇಕ ಜನರು ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿಲ್ಲ .ಇಲ್ಲಿನ ಬಹುಪಾಲು ಜನರು ಕೃಷಿ ಹಾಗೂ ತೋಟಗಾರಿಕೆಯನ್ನು ಅವಲಂಬಿಸಿದ್ದಾರೆ. ಆದ್ದರಿಂದ ಕೃಷಿ ಹಾಗೂ ತೋಟಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯಾವ ರೀತಿಯ ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದೀರಿ ಎಂದು ಅಭ್ಯರ್ಥಿಗಳನ್ನು ಪ್ರಶ್ನಿಸಲಾಗಿದೆ.ಕೊಡಗು ಜಿಲ್ಲೆಗೆ ಅತಿ ಹೆಚ್ಚಿನ ಪ್ರವಾಸೋದ್ಯಮದ ಒತ್ತಡದಿಂದ ಕೊಡಗಿನ ಸ್ಥಿತಿ ಏನಾಗಬಹುದು ಹಾಗೂ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡುವ ನಿಟ್ಟಿನಲ್ಲಿ ಯಾವ ರೀತಿಯ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂಬುದನ್ನು ಸಹ ಸ್ಪಷ್ಟಪಡಿಸಲು ಕೋರಲಾಗಿದೆ.

ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಲ್ಲಿನ ಪರಿಸರ ನದಿ, ಬೆಟ್ಟ, ಕೃಷಿ ಗದ್ದೆ, ಕಾಫಿ ಪ್ಲಾಂಟೇಷನ್, ಸಂಸ್ಕೃತಿ, ಆಹಾರ ಪದ್ಧತಿಯನ್ನು ಅವಲಂಬಿಸಿದೆ. ಆದರೆ ಇಂದು ಕುಟ್ಟದಿಂದ ಮಡಿಕೇರಿವರೆಗೆ ಮುಖ್ಯರಸ್ತೆಯ ಎರಡು ಕಡೆ ಕೃಷಿ ಗದ್ದೆಗಳು ಬಹುಭಾಗ ಪಾಳು ಬಿದ್ದಿವೆ ಅಥವಾ ಕೃಷಿಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗಿದೆ. ಇದರಿಂದ ಜಿಲ್ಲೆಯ ಅಂತರ್ಜಲ ಮಟ್ಟ, ನದಿ ನೀರಿನ ಮೂಲಕ್ಕೆ ಧಕ್ಕೆಯಾಗಿದೆ. ತಾಪಮಾನವೂ ಏರಿಕೆ ಕಂಡಿದೆ ಎಂದು ಸಭೆಯಲ್ಲಿ ಆತಂಕ ವ್ಯಕ್ತವಾಯಿತು.ರಾಜ್ಯದ ಇತರ ಜಿಲ್ಲೆಗಳಲ್ಲಿ ಕೃಷಿಕರು 10 ಎಚ್‌ಪಿ ವರೆಗೆ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡಲಾಗುತ್ತದೆ. ಆದರೆ ಇದುವರೆಗೆ ಜಿಲ್ಲೆಯ ಕೃಷಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಈ ಮಲತಾಯಿ ಧೋರಣೆಯನ್ನು ಸರಿಪಡಿಸಿ ಸೌಲಭ್ಯ ನೀಡಲು ಹಾಗೂ ಕೊಡಗು ಜಿಲ್ಲೆಯ ಭೌಗೋಳಿಕ ಲಕ್ಷಣ ವಿಭಿನ್ನವಾಗಿದ್ದು ಕೊಡಗಿನ ಮೂಲ ಸ್ವರೂಪವನ್ನು ಹಾಗೂ ಪರಿಸರವನ್ನು ರಕ್ಷಿಸಲು ನಿಮ್ಮ ನಿಲುವೇನು ಎಂದು ಸ್ಪಷ್ಟಪಡಿಸಲು ಕೋರಲಾಗಿದೆ.ಅರಣ್ಯದಿಂದ ಕಾಡಾನೆಗಳು, ಹುಲಿಗಳು ಗ್ರಾಮಗಳಿಗೆ ನುಗ್ಗಿ ಕೃಷಿ ನಷ್ಟ ಹಾಗೂ ಜಾನುವಾರು ಮಾನವರಿಗೂ ಸಹ ಪ್ರಾಣ ಹಾನಿಯಾಗುತ್ತಿರುವ ಬಹಳಷ್ಟು ಆತಂಕ ಉಂಟಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಿಮ್ಮ ನಿಲುವೇನು ಎಂದು ಸ್ಪಷ್ಟಪಡಿಸಲು ಒತ್ತಾಯಿಸಿದರು.

ಜಬ್ಬೂಮಿ ಸಂಘಟನೆಯ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಮಲ್ಲಮಾಡ ಪ್ರಭು ಪೂಣಚ್ಚ, ಜಮ್ಮಡ ಗಣೇಶ್ ಅಯ್ಯಣ್ಣ, ಪಾಲೇಂಗಡ ಅಮೀತ್ ಭೀಮಯ್ಯ, ಶಾಂತೇಯಂಡ ಬಿರನ್ ನಾಚಪ್ಪ, ಮಾಳೇಟೀರ ಅಜೀತ್ ಪೂವಣ್ಣ, ಪೆಮ್ಮಂಡ ಸಚಿನ್ ಅಪ್ಪಣ್ಣ, ಮಲ್ಲಪನೆರ ವಿನು ಚಿಣ್ಣಪ್ಪ, ಮಾಚಂಗಡ ಸಚಿನ್, ಪೋಕಚಂಡ ಗಣಪತಿ, ಉಳುವಂಗಡ ಲೋಹಿತ್ ಭೀಮಯ್ಯ, ಗುಡಿಯಂಗಡ ಲಿಖಿತ್, ಮೂಡೇರ ರಾಯ್ ಕಾಳಯ್ಯ, ಚೊಟ್ಟೆಯಂಡ ಸಂಜು, ಕಿರಿಯಮಾಡ ಮಿಲನ್ ಮತ್ತಿತರರು ಹಾಜರಿದ್ದರು.