ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ 2024 - 25ನೇ ಸಾಲಿನಲ್ಲಿ 16.70 ಕೋಟಿ ರು. ಗಳ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರಾದ ಕೊಡಂದೇರ ಪಿ ಗಣಪತಿ ತಿಳಿಸಿದ್ದಾರೆ. ಅವರು ಕುಶಾಲನಗರದ ಬ್ಯಾಂಕ್ ಶಾಖೆಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಬ್ಯಾಂಕ್ 24 ಶಾಖೆ ಹಾಗೂ ಒಂದು ಕೇಂದ್ರ ಕಚೇರಿ ಹೊಂದಿದೆ. ಜಿಲ್ಲೆಯ ರೈತರಿಗೆ ಸಹಕಾರ ಸಂಘಗಳಿಗೆ ಹಾಗೂ ಗ್ರಾಹಕರಿಗೆ ಸಕಾಲದಲ್ಲಿ ಕೃಷಿ ಹಾಗೂ ಕೃಷಿಯೇತರ ಸಾಲಗಳನ್ನು ನೀಡುತ್ತಾ ಬಂದಿದೆ ಎಂದು ತಿಳಿಸಿದರು.ರೈತರ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಸದ್ಯದಲ್ಲಿಯೇ ಜಿಲ್ಲೆಯಲ್ಲಿ ಮೂರು ನೂತನ ಶಾಖೆಗಳು ಆರಂಭಗೊಳ್ಳಲಿದೆ. ಗುಡ್ಡೆ ಹೊಸೂರು, ಕಕ್ಕಬೆ, ತಿತಿಮತಿ ಗ್ರಾಮಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು ಎಂದರು.ಕುಶಾಲನಗರ ಶಾಖೆಯ ಗ್ರಾಹಕರ ಅನುಕೂಲಕ್ಕಾಗಿ ಕುಶಾಲನಗರ ಬೈಚನಹಳ್ಳಿ ಬಳಿ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.ರೈತರು ಇತರೆ ಬ್ಯಾಂಕುಗಳಲ್ಲಿ ಹೆಚ್ಚಿನ ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಟೇಕ್ ಓವರ್ ಮಾಡಿಕೊಳ್ಳುವ ಸೌಲಭ್ಯವು ಬ್ಯಾಂಕಿನಲ್ಲಿ ಲಭ್ಯವಿರುತ್ತದೆ ಎಂದು ಅವರು ಮಾಹಿತಿ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಬ್ಯಾಂಕುಗಳಿಗೆ ರೈತರ ಹಿತದೃಷ್ಟಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.ಗ್ರಾಹಕರು ಹಾಗೂ ಸಹಕಾರಿ ಧುರೀಣರಾದ ಮಣಿ ಉತ್ತಪ್ಪ, ಸಿ ಪಿ ವಿಜಯ, ಮುರಳಿಧರ್, ಮನು ಕುಮಾರ್, ರಾಮ ಶೆಟ್ಟಿ ಮತ್ತು ಬ್ಯಾಂಕಿನ ಗ್ರಾಹಕರು ಬ್ಯಾಂಕ್ ಮೂಲಕ ರೈತರಿಗೆ ಒದಗಿಸಬಹುದಾದ ಹೆಚ್ಚಿನ ಸೌಲಭ್ಯಗಳ ಬಗ್ಗೆ ಚರ್ಚೆ ನಡೆಸಿದರು. ಗ್ರಾಹಕರು ಸಾಲ ಅರ್ಜಿ ಬಗ್ಗೆ ಕೃಷಿ ಸಾಲಕ್ಕೆ ಬಡ್ಡಿ ಕಡಿಮೆ ಮಾಡುವ ಬಗ್ಗೆ, ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿಯನ್ನು ಒದಗಿಸುವುದು, ಜಂಟಿ ಖಾತೆಯ ಸಾಲ ಸೌಲಭ್ಯ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು ಈ ಬಗ್ಗೆ ಆಡಳಿತ ಮಂಡಳಿಯ ಮುಂದಿನ ಸಭೆಗಳಲ್ಲಿ ಚರ್ಚಿಸಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ ವ್ಯಕ್ತಪಡಿಸಿದರು. ಬ್ಯಾಂಕ್ ವ್ಯವಸ್ಥಾಪಕರಾದ ಎ ಎ ಅಜಿತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕುಶಾಲನಗರ ಶಾಖೆಯ ಸಂಕ್ಷಿಪ್ತ ವರದಿ ಮಂಡಿಸಿದರು.ಬ್ಯಾಂಕ್ ನಿರ್ದೇಶಕರಾದ ಟಿ ಆರ್ ಶರವಣಕುಮಾರ್ ಅವರು ಸಭೆಯಲ್ಲಿ ಪಾಲ್ಗೊಂಡು ಬ್ಯಾಂಕ್ ಸಾಲ ಸೌಲಭ್ಯ ಹಣಕಾಸು ವ್ಯವಸ್ಥೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದರು. ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಜಿ ಎಂ ಭೋಜಮ್ಮ ಈ ಸಂದರ್ಭ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ ಬ್ಯಾಂಕ್ ಗ್ರಾಹಕರು ತಮ್ಮ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.