ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗಿನ ಸರ್ಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮತ್ತು ದಲ್ಲಾಳಿ ಮುಕ್ತಗೊಳಿಸಬೇಕೆಂದು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಆಗ್ರಹಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಎ.ಎಸ್.ಕಟ್ಟಿ ಮಂದಯ್ಯ, ಜಿಲ್ಲೆಯ ಕಂದಾಯ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅರ್ಜಿದಾರರಿಗೆ ಹೆಚ್ಚಾಗಿ ಸಮಸ್ಯೆ ಎದುರಾಗುತ್ತಿದೆ. ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಹಾಗೂ ಐದು ತಾಲೂಕುಗಳ ತಹಸೀಲ್ದಾರರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಇಂದು ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಮೂಲಕ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಅರ್ಜಿದಾರರು ನೀಡುವ ಹಣದಲ್ಲಿ ಅರ್ಧಭಾಗ ದಲ್ಲಾಳಿಗಳಿಗೆ, ಉಳಿದ ಅರ್ಧಭಾಗ ಅಧಿಕಾರಿಗಳಿಗೆ ಎಂದು ಹಂಚಿಕೆಯಾಗುತ್ತಿದೆ ಎಂದು ಆರೋಪಿಸಿದರು.
ಸಕಾಲ ಮರು ಜಾರಿಯಾಗಲಿ:ಸಾರ್ವಜನಿಕರ ಅರ್ಜಿಗಳು ಸೀಮಿತ ಅವಧಿಯಲ್ಲಿ ಶೀಘ್ರ ವಿಲೇವಾರಿಯಾಗಬೇಕೆಂದು ಹಿಂದೆ ರಾಜ್ಯ ಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಕಾಲ ಯೋಜನೆಯನ್ನೇ ಅಧಿಕಾರಿಗಳು ಮರೆತು ಬಿಟ್ಟಿದ್ದಾರೆ. ಅರ್ಜಿ ಸಲ್ಲಿಸಿದ ಸಾರ್ವಜನಿಕರು ಸರಕಾರಿ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಸಕಾಲವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.
ಸಿಸಿ ಕ್ಯಾಮರಾ ಹಾಕಿ:ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಲು ಸಿ.ಸಿ ಕ್ಯಾಮರಾ
ಬಹಳ ಪ್ರಯೋಜನಕಾರಿ. ಇದು ಸೆರೆ ಹಿಡಿಯುವ ದೃಶ್ಯಾವಳಿಗಳಿಂದ ಮಧ್ಯವರ್ತಿಗಳನ್ನು ಪತ್ತೆಹಚ್ಚಿ ಕಡಿವಾಣ ಹಾಕಬಹುದು ಎಂದು ಅಭಿಪ್ರಾಯಪಟ್ಟರು.ಮಾಹಿತಿ ನೀಡಿ: ಸರ್ಕಾರಿ ಕಚೇರಿಗಳಿಗೆ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ವಿಲೇವಾರಿಯಾಗಿವೆ, ಎಷ್ಟು ಕಡತಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ, ಯಾಕೆ ಬಾಕಿ ಉಳಿದಿವೆ ಎಂಬ ಮಾಹಿತಿಯನ್ನು ಮಾಹಿತಿ ಹಕ್ಕಿನಡಿ ಇಲಾಖಾವಾರು ಸಂಘ- ಸಂಸ್ಥೆಗಳಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಸ್ವೀಕೃತಿ ಪತ್ರ ನೀಡಲು ಆಗ್ರಹ:ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ತಮಗೆ ಬೇಕಾಗುವ ಸವಲತ್ತುಗಳನ್ನು ಪಡೆಯಲು ಮತ್ತು ವೈಯಕ್ತಿಕ ಉಪಯೋಗಕ್ಕಾಗಿ ಸಲ್ಲಿಸುವ ಅರ್ಜಿಗಳಿಗೆ ಸ್ವೀಕೃತಿ ಪತ್ರವನ್ನು ನೀಡುವ ನಿಯಮ ಜಾರಿಗೆ ತರಬೇಕು. ಇದರಿಂದ ಕಡತ ನಾಪತ್ತೆಯಾಗಿದೆ ಅಥವಾ ನಮ್ಮ ಬಳಿ ಇಲ್ಲ ಎಂದು ಅಧಿಕಾರಿಗಳು ಕಾರಣ ಹೇಳುವುದನ್ನು ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟರು.
ಸಮಿತಿ ಕಾರ್ಯಾಧ್ಯಕ್ಷ ಬಿ.ಎಸ್.ಕಾಶಿ ಕಾರ್ಯಪ್ಪ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಸಕಾಲ ಯೋಜನೆಯ ಫಲಕ ಮಾತ್ರ ಕಾಣುತ್ತಿದೆ. ಆದರೆ ಸಕಾಲ ನಿಯಮದಂತೆ ಯಾವ ಅರ್ಜಿಯೂ ವಿಲೇವಾರಿಯಾಗುತ್ತಿಲ್ಲ. ಕಂದಾಯ ಮತ್ತು ಭೂದಾಖಲೆ ಇಲಾಖೆಗಳಲ್ಲಿ ಪಹಣಿ, ಸರ್ವೆ ವಿಚಾರದಲ್ಲಿ ಮಧ್ಯವರ್ತಿಗಳಹಾವಳಿ ಹೆಚ್ಚಾಗಿದೆ. ರಾಜಕಾರಣಿಗಳಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು.
ಸಮಿತಿ ಉಪಾಧ್ಯಕ್ಷ ಎಸ್.ಎ.ರತನ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ದಿಲೀಪ್ ಗಣಪತಿ ಹಾಗೂ ನಿರ್ದೇಶಕ ನಾಣಿರ ವಿಜಯ್ ನಂಜಪ್ಪ ಇದ್ದರು.