ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.ನಗರದ ಸಂತ ಜೋಸೆಫರ ಶಾಲಾ ಆವರಣದಲ್ಲಿ ಗುರುವಾರ ಮಸ್ಟರಿಂಗ್ ಕಾರ್ಯ ಸುಸೂತ್ರವಾಗಿ ನಡೆಯಿತು. ಚುನಾವಣೆ ಮತಗಟ್ಟೆಗಳಿಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ಮತಯಂತ್ರ ಹಾಗೂ ಇತರೆ ಸಲಕರಣೆಗಳನ್ನು ಪಡೆದು ಮತಗಟ್ಟೆಗಳಿಗೆ ತೆರಳಿದರು.
ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಿಂದ ಲೋಕಸಭಾ ಚುನಾವಣೆಗೆ ಮುನ್ನಾದಿನವಾದ ಗುರುವಾರ ಮಸ್ಟರಿಂಗ್ ಕೇಂದ್ರದಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆ ಕೇಂದ್ರಗಳಿಗೆ ಚುನಾವಣಾ ಸಾಮಾಗ್ರಿಗಳೊಂದಿಗೆ ತೆರಳಿದರು.ಕೊಡಗು ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಒಟ್ಟು 4,70,766 ಮತದಾರರಿದ್ದು, 2,30,568 ಪುರುಷರು ಮತ್ತು 2,40,182 ಮಹಿಳಾ ಮತದಾರರು, 16 ಇತರ ಮತದಾರರಿದ್ದಾರೆ.
ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 273 ಮತಗಟ್ಟೆಗಳಿದ್ದು, ಒಟ್ಟು 2,38,733 ಮತದಾರರಿದ್ದಾರೆ. ಇದರಲ್ಲಿ 1,16,143 ಪುರುಷರು ಮತ್ತು 1,22,581 ಮಹಿಳಾ ಮತದಾರರಿದ್ದಾರೆ. 9 ಮಂದಿ ಇತರ ಮತದಾರರು ಇದ್ದಾರೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 273 ಮತಗಟ್ಟೆಳಿದ್ದು, ಒಟ್ಟು 2,32,033 ಮತದಾರರಿದ್ದಾರೆ. ಇವರಲ್ಲಿ 1,14,425 ಪುರುಷ ಮತ್ತು 1,17,601 ಮಹಿಳಾ ಮತದಾರರು, 07 ಇತರ ಮತದಾರರಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 546 ಮತಗಟ್ಟೆಗಳಿದ್ದು, 604 ಪಿಆರ್‌ಒ, 604 ಎಪಿಆರ್‌ಒ, 1208 ಪಿಒ ಸಹಿತ ಒಟ್ಟು 2,416 ಸಿಬ್ಬಂದಿ ನಿಯೋಜಿಸಲಾಗಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, 302 ಪಿ.ಆರ್‌ಒ, 302 ಎಪಿಆರ್‌ಒ, 604 ಪಿ.ಒ ಒಟ್ಟು 1208 ಸಿಬ್ಬಂದಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 273 ಮತಗಟ್ಟೆಗಳಿದ್ದು, 302 ಪಿ.ಆರ್‌ಒ, 302 ಎಪಿಆರ್‌ಒ, 604 ಪಿ.ಒ ಒಟ್ಟು 1208 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
546 ಮತಗಟ್ಟೆಗಳಲ್ಲಿ ವಲ್ನರೇಬಲ್, ಕ್ರಿಟಿಕಲ್, ಎಲ್‌ಡಬ್ಲ್ಯೂ 108 ಮತಗಟ್ಟೆಗಳಲ್ಲಿ ಸಿಎಪಿಎಫ್, ಮೈಕ್ರೋ ವೀಕ್ಷಕರು, ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ.ಮದ್ಯ ಮಾರಾಟ ನಿಷೇಧ:ಲೋಕಸಭಾ ಚುನಾವಣೆ-2024 ನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಗುರುವಾರ ಸಂಜೆ 5 ಗಂಟೆಯಿಂದ ಶುಕ್ರವಾರ ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಜೂ.3ರ ಮಧ್ಯರಾತ್ರಿ 12 ಗಂಟೆಯಿಂದ ಜೂ.4 ರ ಮಧ್ಯರಾತ್ರಿ 12 ಗಂಟೆಯವರೆಗೆ ಕೊಡಗು ಜಿಲ್ಲೆಯಾದ್ಯಂತ ಎಲ್ಲಾ ವಿಧದ ಮದ್ಯ ಸಾಗಾಣಿಕೆ, ಶೇಖರಣೆ ಮತ್ತು ಎಲ್ಲಾ ರೀತಿಯ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್, ಕ್ಲಬ್, ಹೊಟೇಲ್ ಮುಂತಾದವುಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಪರಿಶೀಲನೆ:ಮಡಿಕೇರಿ ನಗರಸಭಾ ವ್ಯಾಪ್ತಿಯ ಎಲ್ಲಾ ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಜಿಲ್ಲಾಧಿಕಾರಿ ಅವರೊಂದಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಪಿಆರ್‌ಒಗಳಿಂದ ಮಾಹಿತಿ ಪಡೆದು ಸ್ವಚ್ಛತೆ ಕುಡಿಯುವ ನೀರು ಹಾಗೂ ಮೇಜು ಕುರ್ಚಿಗಳನ್ನು ಒದಗಿಸಲಾಯಿತು ಅಲ್ಲದೆ ಸಖಿ ಬೂತ್ ಗಳು ಮತ್ತು ಮಾದರಿ ಬೂತ್ ಗಳನ್ನು ಪರಿಶೀಲನೆ ಮಾಡಲಾಯಿತು.