ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯ ರದ್ದತಿಯ ತೀರ್ಪಿನಲ್ಲಿ ಸಂವಿಧಾನ ಪೀಠವು ಕೊಡಗು ರಾಜ್ಯದ ಗತ ಇತಿಹಾಸ ದಾಖಲಿಸಿದೆ. ಈ ತೀರ್ಪು ಕೊಡವ ಲ್ಯಾಂಡ್ ಬೇಡಿಕೆಗೆ ಪುಷ್ಟಿ ನೀಡಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠದಿಂದ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಕುರಿತು ಮಹತ್ವದ ಸುಪ್ರೀಂ ಕೋರ್ಟ್ ತೀರ್ಪು ಹೊರ ಬಿದ್ದಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯತ್ವ ಮರುಸ್ಥಾಪಿಸಲು ಶಿಫಾರಸ್ಸು ಮಾಡಿದೆ. ಕಾಶ್ಮೀರದ ಜೊತೆಗೆ ಕರ್ನಾಟಕ ಸರ್ಕಾರ ಕೂಡ ಇದೇ ರೀತಿ ಮಾಡಬೇಕೆನ್ನುವುದು ಖಾತರಿಯಾಗಿದೆ. ಆದ್ದರಿಂದ ಸಂವಿಧಾನದ ಆರ್ಟಿಕಲ್ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಲಡಾಖ್ ಹಾಗೂ ಲೇಹ್ ಬೌದ್ಧ ಸ್ವಾಯತ್ತ ಮಂಡಳಿಗಳು ಮತ್ತು ಪ್ರದೇಶಗಳ ಸಾಲಿನಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯನ್ನು ಸೃಷ್ಟಿಸಬೇಕು ಎಂದು ಒತ್ತಾಯಿಸಿದ್ದಾರೆ.370 ನೇ ವಿಧಿಯ ರದ್ದತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜಮ್ಮು ಮತ್ತು ಕಾಶ್ಮಿರದ ವಿಶೇಷ ಸ್ಥಾನಮಾನದ ರದ್ದತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ, ಕೂರ್ಗ್ ರಾಜ್ಯವನ್ನು ಹೊರತುಪಡಿಸಿ ಎಲ್ಲಾ ‘ಸಿ’ ರಾಜ್ಯಗಳು ಅದರ ಹಣಕಾಸಿನ ನೆರವಿಗಾಗಿ ಕೇಂದ್ರದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಅದರ ಹೊರತಾಗಿಯೂ ತ್ರಿಪುರಾ, ದೆಹಲಿ, ಹಿಮಾಚಲ ಮತ್ತು ಮಣಿಪುರದ ಭಾಗ ‘ಸಿ’ ರಾಜ್ಯತ್ವದ ಸ್ಥಾನಮಾನವನ್ನು ಉಳಿಸಿಕೊಂಡಿವೆ ಮತ್ತು ನಂತರ ಭಾರತದ ಇತರ ಪ್ರಮುಖ ಪ್ರಾಂತೀಯ ರಾಜ್ಯಗಳಿಗೆ ಸಮಾನವಾಗಿ ಪ್ರಮುಖ ರಾಜ್ಯಗಳಾಗಿ ಬಡ್ತಿ ನೀಡಲಾಯಿತು.
ವಿಪರ್ಯಾಸವೆಂದರೆ, ಹೆಚ್ಚು ಅವಲಂಬಿತ ರಾಜ್ಯಗಳನ್ನು ಸ್ವತಂತ್ರ ರಾಜ್ಯಗಳಾಗಿ ಮಾಡಲಾಯಿತು. ಏಕೈಕ ಸ್ವಾವಲಂಬನೆ, ಸ್ವಾಭಿಮಾನಿ ಮತ್ತು ಸ್ವತಂತ್ರ ರಾಜ್ಯವಾದ ಕೂರ್ಗ್ ಕರ್ನಾಟಕ ರಾಜ್ಯಕ್ಕೆ ಕೇವಲ ಜಿಲ್ಲೆಯಾಗಿ ಅಧೀನವಾಯಿತು. ಇದೊಂದು ಅಂತಾರಾಷ್ಟ್ರೀಯ ಪಿತೂರಿ ಮತ್ತು 20ನೇ ಶತಮಾನದ ಬಹುದೊಡ್ಡ ಭೂ ರಾಜಕೀಯ ಉತ್ಪಾತವಾಗಿದೆ ಎಂದು ಆರೋಪಿಸಿದ್ದಾರೆ.ಸಾಂವಿಧಾನಿಕ ಪೀಠವು ಗಮನಿಸಿದಂತೆ, ಕೊಡವ ತಾಯ್ನಾಡಿನ ಹಿಂದಿನ ಕೂರ್ಗ್ ರಾಜ್ಯವು ಭಾರತದ ಆರು ‘ಸಿ’ ರಾಜ್ಯಗಳಲ್ಲಿ ಕೇಂದ್ರ/ಭಾರತೀಯ ಒಕ್ಕೂಟದ ಆರ್ಥಿಕ ಅವಲಂಬನೆ ಮತ್ತು ಸಹಾಯವಿಲ್ಲದೆ ಸ್ವಂತವಾಗಿ ಆಡಳಿತ ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಏಕೈಕ ‘ಸಿ’ ರಾಜ್ಯವಾಗಿತ್ತು. ಸುಪ್ರೀಂ ಕೋರ್ಟ್ ನ ಈ ಐತಿಹಾಸಿಕ ತೀರ್ಪು ಸ್ವಾಯತ್ತ ಕೊಡವ ತಾಯ್ನಾಡಿನ ಸಿಎನ್‌ಸಿ ಬೇಡಿಕೆಗೆ ಒಂದು ಗರಿ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ
ಜಮ್ಮು ಮತ್ತು ಕಾಶ್ಮೀರ ದ ಆರ್ಟಿಕಲ್ 370 ನೇ ವಿಧಿಯ ರದ್ದತಿಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜ್ಯತ್ವ ಸ್ಥಿತಿಯನ್ನು ಸಹ ಮರುಸ್ಥಾಪಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಕೊಡವ ಹೋಮ್‌ಲ್ಯಾಂಡ್‌ನ ಭೂತಕಾಲದ ಅದ್ಭುತ ಮತ್ತು ವೈಭವಯುತ ಅಸ್ತಿತ್ವವನ್ನು ನೆನಪಿಸಿದೆ. ಭಾರತದ 6 ‘ಸಿ’ ರಾಜ್ಯಗಳ ಪೈಕಿ ಕೇಂದ್ರದ ಸರ್ಕಾರದ ಬೆಂಬಲವಿಲ್ಲದೆ ಸರ್ವತಂತ್ರ ಸ್ವತಂತ್ರವಾಗಿ ಆರ್ಥಿಕ ಸ್ವಾವಲಂಬನೆಯಿಂದ ಆಡಳಿತ ನಡೆಸಿದ ಏಕೈಕ ರಾಜ್ಯವೆಂದು ಕೊಡಗನ್ನು ಪ್ರಸ್ತಾಪಿಸಿ ಉಲ್ಲೇಖಿಸಲಾಗಿದೆ. ಇದು 1956 ರವರೆಗೆ ಆಳ್ವಿಕೆ ನಡೆಸಿದ ಕೊಡಗು “ಸಿ” ರಾಜ್ಯದ ಕಲ್ಯಾಣ ರಾಜ್ಯ ಆಡಳಿತದ ಹೆಮ್ಮೆಯ ಹೆಗ್ಗುರುತಿನ ಸ್ಮರಣೆಯಾಗಿದೆ ಎಂದಿದ್ದಾರೆ.ಸಿ.ಎನ್.ಸಿ 34 ವರ್ಷಗಳಿಂದ ನಡೆಸುತ್ತಿರುವ ಶಾಸನ ಬದ್ಧ ಹಕ್ಕೊತ್ತಾಯ ಫಲಪ್ರದವಾದರೆ ಭಾರತದ ಒಕ್ಕೂಟದ ಮೇಲೆ ಅವಲಂಬಿತವಾಗದೆ ಕೊಡವ ನೆಲದ ಆರ್ಥಿಕ ಕಾರ್ಯಸಾಧ್ಯತೆ ಮತ್ತು ರಾಜಕೀಯ ಸ್ವಾಯತ್ತತೆಯ ಮೂಲಕ ಅದರ ರಾಜಕೀಯ-ಆಡಳಿತಾತ್ಮಕ ಸ್ಥಾನಮಾನ ಮರುಸ್ಥಾಪಿತವಾಗಲಿದೆ ಎಂದು ಹೇಳಿದ್ದಾರೆ.